ಬಿಜೆಪಿಯಲ್ಲೂ ಗರಿಗೆದರಿದ ರಾಜಕೀಯ ಚಟುವಟಿಕೆ: ಬಿಎಸ್ ಯಡಿಯೂರಪ್ಪ ಸಿಎಂ ಬೊಮ್ಮಾಯಿ ಮಹತ್ವದ ಮಾತುಕತೆ
ಫಲಿತಾಂಶಕ್ಕೆ ಒಂದು ದಿನ ಬಾಕಿ ಇರುವಾಗಲೇ ಬಿಜೆಪಿ ನಾಯಕರು ಆಕ್ಟಿವ್ ಆಗಿದ್ದು, ಸರ್ಕಾರ ರಚನೆಗೆ ತಂತ್ರಗಳನ್ನು ಹೆಣೆಯಲು ಶರು ಮಾಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆದಿಯಾಗಿ ಹಲವು ನಾಯಕರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ.
ಬೆಂಗಳೂರು: ಕರ್ನಾಟಕದ 224 ವಿಧಾನಸಭೆ ಕ್ಷೇತ್ರಗಳಿಗೆ (Karnataka Assembly Election 2023) ಮತದಾನ ಮುಗಿದಿದ್ದು, ನಾಳೆ (ಮೇ.13) ರಂದು ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆ ನಿನ್ನೆ (ಮೇ.11) ರಿಲ್ಯಾಕ್ಸ್ ಮೂಡಿಗೆ ಜಾರಿದ್ದ ರಾಜಕೀಯ ನಾಯಕರು ಇಂದು (ಮೇ.12) ಮತ್ತೆ ಫಾರ್ಮ್ಗೆ ಬಂದಿದ್ದಾರೆ. ರಾಜ್ಯದ ಚುಕ್ಕಾಣಿಯನ್ನು ಹಿಡಿಯಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಂತ್ರಗಳನ್ನು ಹೆಣೆಯುತ್ತಿವೆ. “ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ” ಎಂಬ ಘೋಷವಾಕ್ಯದಂತೆ ಸರ್ಕಾರ ರಚಿಸಲು ಬಿಜೆಪಿ (BJP) ಯೋಜನೆ ರೂಪಿಸುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಮುಖ್ಯಮಂತ್ರಿ ಮಂತ್ರಿ ಬಸವರಾಜ ಬೊಮ್ಮಾಯಿಯವರು(Basavaraj Bommai), ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರನ್ನು ಕುಮಾರಕೃಪಾ ರಸ್ತೆಯ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಸಚಿವ ಭೈರತಿ ಬಸವರಾಜ, ಸಚಿವ ಮುರುಗೇಶ್ ನಿರಾಣಿ, ಲೆಹರ್ ಸಿಂಗ್, ಎ.ಟಿ. ರಾಮಸ್ವಾಮಿ ಸಾಥ್ ನೀಡಿದ್ದಾರೆ.
Karnataka CM Basavaraj Bommai and other BJP leaders hold a key meeting at former CM BS Yediyurappa’s residence in Bengaluru. pic.twitter.com/jXMEkJqXwU
— ANI (@ANI) May 12, 2023
ಸಿಎಂ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ಸಭೆ; ಕ್ಷೇತ್ರಗಳ ಗೆಲುವಿನ ಲೆಕ್ಕಾಚಾರ
108 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದ್ದು, ಉಳಿದವು 50:50. ಬಿಜೆಪಿಯಿಂದ ಹೊರ ಹೋಗಿ ಗೆಲ್ಲುವ ಪಕ್ಷೇತರರನ್ನು ಸಂಪರ್ಕ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದು ರಾಜಕೀಯ ಮೂಲಗಳಿಂದ ಮಾಹಿತಿ ದೊರೆತಿದೆ.
ಸಿಎಂ ಬೊಮ್ಮಾಯಿಯನ್ನ ಭೇಟಿಯಾದ ನಾಯಕರು
ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳುವ ಮುನ್ನ ಬಿಜೆಪಿ ನಾಯಕ ಎಂಟಿಬಿ ನಾಗರಾಜ್, ಸಚಿವ ವಿ.ಸೋಮಣ್ಣ ಸಿಎಂ ಬೊಮ್ಮಾಯಿಯವರನ್ನು ಭೇಟಿಯಾಗಿದ್ದರು. ಎಂಟಿಬಿ ನಾಗರಾಜ್, ಸಚಿವ ವಿ.ಸೋಮಣ್ಣ ಆರ್ಟಿ ನಗರದಲ್ಲಿರುವ ಸಿಎಂ ಬೊಮ್ಮಾಯಿ ಅವರ ನಿವಾಸಕ್ಕೆ ಆಗಮಿಸಿ ಮಹತ್ವದ ಮಾತುಕತೆ ನಡೆಸಿದ್ದರು.
ಇದನ್ನೂ ಓದಿ: ಫಲಿತಾಂಶಕ್ಕೂ ಮೊದಲೇ ಅಲರ್ಟ್, ಗೆಲ್ಲುವ ಅಭ್ಯರ್ಥಿಗಳಿಗೆ ಕಾಂಗ್ರೆಸ್ನಿಂದ ಮಹತ್ವದ ಸಂದೇಶ ರವಾನೆ
ಆಕ್ಟಿವ್ ಆದ ಕಾಂಗ್ರೆಸ್ನ ರಾಜ್ಯ ನಾಯಕರು, ಸರಣಿ ಸಭೆ
ಸರ್ಕಾರ ರಚನೆಗೆ ಕಾಂಗ್ರೆಸ್ ನಾಯಕರು ಸಿದ್ದವಾಗಿದ್ದು, ಸೂಟು-ಬೂಟು ಖರೀದಿಸಿದ್ದಾರೆ. ಇನ್ನೂ ಕೈ ಪಾಳಯ ಫಲಿತಾಂಶಕ್ಕೂ ಮುನ್ನ ಅಲರ್ಟ್ ಆಗಿದ್ದು, ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದೆ. ಈ ಹಿನ್ನೆಲೆ ರಾತ್ರಿ ಶಾಲೆ ತೆರೆದಿದೆ. ಈ ಶಾಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭ್ಯರ್ಥಿಗಳಿಗೆ ಎರಡು ತಾಸು ವರ್ಚುವಲ್ ಮೂಲಕ ಪಾಠ ಮಾಡಿದ್ದಾರೆ.
ವರ್ಚೂವಲ್ ಸಭೆಯಲ್ಲಿ ನಾಯಕರು, ಸ್ಟ್ರಾಂಗ್ ರೂಂಗಳ ಮೇಲೆ ಗಮನ ಇಡುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ ರಚಿಸುವ ಅವಕಾಶ ಸಿಗಲಿದೆ. ಆಪರೇಷನ್ಗೆ ಒಳಗಾಗಬೇಡಿ, ಅನ್ಯ ಪಕ್ಷಗಳ ಆಮಿಷಗಳಿಗೆ ಬಲಿಯಾಗಬೇಡಿ. ಲೀಡ್ ಸಿಗುತ್ತಿದ್ದಂತೆ ಬೆಂಗಳೂರಿಗೆ ಬನ್ನಿ. ಸರ್ಕಾರ ರಚನೆಯಾಗುವವರೆಗೂ ನಾವು ಸೂಚಿಸಿದ ಸ್ಥಳದಲ್ಲಿ ಇರಬೇಕು ಎಂದು ಅಭ್ಯರ್ಥಿಗಳಿಗೆ ನಾಯಕರು ಸೂಚನೆ ನೀಡಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ ಮತ್ತು ಜಿ ಪರಮೇಶ್ವರ ಮಹತ್ವದ ಮಾತುಕತೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಭೇಟಿ ಮಾಡಿ ಚರ್ಚೆ ತಂತ್ರಕಾರಿಕೆ ಹೆಣೆಯಲಾಗಿದೆ. ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ ಜಿ.ಪರಮೇಶ್ವರ್ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿ ಹಿಂದಿರುಗಿದ್ದಾರೆ. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಪರಮೇಶ್ವರ್, ರಾಜ್ಯದಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.
ಮಲ್ಲಿಕಾರ್ಜು ಖರ್ಗೆ, ಡಿಕೆ ಶಿವಕುಮಾರ್ ಸಭೆ
ಡಾ.ಜಿ ಪರಮೇಶ್ವರ ಭೇಟಿ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸದಾಶಿವನಗರದ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಮಹತ್ವದ ಸಭೆ ನಡೆಸಿದ್ದಾರೆ. ಸಭೆ ಬಳಿಕ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತ ತಿರುವಣ್ಣಾಮಲೈಗೆ ತೆರಳಲಿದ್ದಾರೆ. ಅಲ್ಲಿ ಅರುಣಾಚಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:38 pm, Fri, 12 May 23