ಫಲಿತಾಂಶಕ್ಕೂ ಮೊದಲೇ ಅಲರ್ಟ್, ಗೆಲ್ಲುವ ಅಭ್ಯರ್ಥಿಗಳಿಗೆ ಕಾಂಗ್ರೆಸ್ನಿಂದ ಮಹತ್ವದ ಸಂದೇಶ ರವಾನೆ
ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆಗೆ ಕೌಂಟ್ಡೌನ್ ಶುರುವಾಗಿದೆ. ಫಲಿತಾಂಶ ಏನಿರಲಿದೆ ಎನ್ನುವ ಕುತೂಹಲ ಕ್ಷಣಕ್ಷಣಕ್ಕೂ ಕೆರಳಿ ನಿಂತಿದೆ. ಅದರಲ್ಲೂ ಮತದಾನೋತ್ತರ ಸಮೀಕ್ಷೆಗಳಲ್ಲಿ ಬಹುತೇಕ ಸಮೀಕ್ಷಾ ಸಂಸ್ಥೆಗಳು ಕಾಂಗ್ರೆಸ್‌ಗೆ ಬಹುಪರಾಕ್ ಹೇಳಿರುವುದು ಕೈ ಪಾಳಯದಲ್ಲಿ ಹುರುಪು ಹೆಚ್ಚಿಸಿದೆ. ಸಭೆಗಳ ಮೇಲೆ ಸಭೆ ನಡೆಯೋಕೆ ಶುರುವಾಗಿದೆ. ಒಂದು ವೇಳೆ ಅತಂತ್ರ ಫಲಿತಾಂಶ ಬಂದರೂ ಅದಕ್ಕೆ ಕೈ ಪಡೆ ಭರ್ಜರಿಯಾಗೇ ಪ್ಲ್ಯಾನ್ ರೂಪಿಸಿದೆ.
ಬೆಂಗಳೂರು: ಮೊನ್ನೇ ಬುಧವಾರವಷ್ಟೇ(ಮೇ.10) ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ಮುಗಿದಿದೆ. ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್‌ಗೆ (Congress) ಅಧಿಕಾರದ ಗದ್ದುಗೆ ಎಂಬ ಭವಿಷ್ಯ ನುಡಿದಿವೆ. ಹೀಗಾಗಿ ಕೈ ಪಾಳಯದಲ್ಲಿ ಹುರುಪು ಹೆಚ್ಚಿಸಿದೆ. ಇನ್ನು ಕೆಲವು ಸಮೀಕ್ಷೆಗಳು ಬಿಜೆಪಿ ಅಧಿಕಾರದ ಸನಿಹಕ್ಕೆ ಬರಲಿದೆ ಎಂದಿವೆ. ಕೆಲ ಕೆಲ ಸಮೀಕ್ಷೆಗಳು ಈ ಬಾರಿ ಅತಂತ್ರ ಫಲಿತಾಂಶ ಎಂದು ಸರ್ವೇ ರಿಪೋರ್ಟ್ ನೀಡಿವೆ. ಮತದಾನೋತ್ತರ ಸಮೀಕ್ಷೆ ಕಾಂಗ್ರೆಸ್ ಪಾಳಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಚಟುವಟಿಕೆ ಗರಿಗೆದರುವಂತೆ ಮಾಡಿದೆ. ಇದರಿಂದ ಕಾಂಗ್ರೆಸ್, ತನ್ನ ಅಭ್ಯರ್ಥಿಗಳಿಗೆ ಫಲಿತಾಂಶಕ್ಕೂ ಮುನ್ನವೇ ಮಹತ್ವದ ಸಂದೇಶವನ್ನು ರವಾನಿಸಿದೆ.
ನಾಳೆ ಮತದಾರನ ತೀರ್ಪು ಹೊರಬೀಳಲಿದೆ. ಏನ್ ಬೇಕಾದ್ರೂ ಆಗುವ ಸಾಧ್ಯತೆ ಇದೆ. ಹೀಗಾಗಿ ಕೈ ಪಡೆ ಫುಲ್ ಅಲರ್ಟ್ ಆಗಿದೆ. ನಿನ್ನೆ ರಾತ್ರಿ ಸಿದ್ದರಾಮಯ್ಯರ ನಿವಾಸದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಜತೆ ಹೋವೋಲ್ಟೇಜ್ ಸಭೆ ನಡೆಸಿದ್ದು, ಸಭೆಯಲ್ಲಿ ಸ್ವತಂತ್ರವಾಗಿ ಕಾಂಗ್ರೆಸ್ ಪಕ್ಷ ಗೆದ್ದರೆ ಮುಂದೆ ಏನ್ ಮಾಡಬೇಕು. ಅತಂತ್ರವಾದ್ರೆ ಯಾವ ರಣತಂತ್ರ ರೂಪಿಸಬೇಕು ಎನ್ನುವ ಬಗ್ಗೆ ಗಂಭೀರವಾದ ಚರ್ಚೆ ನಡೆದಿದೆ. ಎಕ್ಸಿಟ್ ಪೋಲ್‌ನಲ್ಲಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮುತ್ತಿರುವ ಹಿನ್ನೆಲೆಯಲ್ಲಿ ಚಟುವಟಿಕೆ ಗರಿಗೆದರಿದೆ. ನಿನ್ನೆ ತಡರಾತ್ರಿ ಸಿದ್ದರಾಮಯ್ಯ, ಡಿಕೆಶಿ, ಸುರ್ಜೇವಾಲ 224 ಕ್ಷೇತ್ರದ ಅಭ್ಯರ್ಥಿಗಳೊಂದಿಗೆ ಝೂಮ್ ಮೀಟಿಂಗ್ ನಡೆಸಿದ್ದು ಸರ್ಕಾರ ರಚನೆ ಸಂಬಂಧ ಚರ್ಚೆ ನಡೆಸಿದ್ದಾರೆ.ಈ ವೇಳೆ ಅಭ್ಯರ್ಥಿಗಳಿಗೆ ಹಲವು ಸಲಹೆ, ಸೂಚನೆಗಳನ್ನು ನೀಡಿದ್ದಾರೆ.
ಮುಖ್ಯವಾಗಿ ಸ್ಟ್ರಾಂಗ್ ರೂಂಗಳ ಮೇಲೆ ಗಮನ ಇಡುವಂತೆ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ ರಚಿಸುವ ಅವಕಾಶ ಸಿಗಲಿದೆ. ಅನ್ಯ ಪಕ್ಷಗಳ ಆಮಿಷಗಳಿಗೆ ಬಲಿಯಾಗದಂತೆ ಅಭ್ಯರ್ಥಿಗಳಿಗೆ ಸಲಹೆ ನೀಡಲಾಗಿದೆ. ಅಲ್ಲದೇ ಲೀಡ್ ಸಿಗುತ್ತಿದ್ದಂತೆ ಬೆಂಗಳೂರಿಗೆ ಬರಲು ಅಭ್ಯರ್ಥಿಗಳಿಗೆ ಸೂಚಿಸಿದ್ದು, ಸರ್ಕಾರ ರಚನೆಯಾಗುವವರೆಗೂ ನಾವು ಸೂಚಿಸಿದ ಸ್ಥಳದಲ್ಲಿ ಇರಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ.
ಜಿಲ್ಲಾಧ್ಯಕ್ಷರಿಗೆ ಹೊಣೆ
ಗೆದ್ದವರನ್ನು ಬೆಂಗಳೂರಿಗೆ ಕರೆತರುವ ಹೊಣೆಯನ್ನು ಕಾಂಗ್ರೆಸ್, ಆಯಾ ಜಿಲ್ಲಾಧ್ಯಕ್ಷರಿಗೆ ವಹಿಸಿದೆ. ಪ್ರತಿ ಜಿಲ್ಲೆಯ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಿಗೆ ಡಿಕೆ ಶಿವಕುಮಾರ್ ಹಾಗೂ ಸುರ್ಜೆವಾಲಾ ಸೂಚನೆ ನೀಡಿದ್ದಾರೆ. ಜಿಲ್ಲಾ ಅಧ್ಯಕ್ಷರ ಜೊತೆಗೆ ಇನ್ನೊಬ್ಬ ನಾಯಕರಿಗೆ ಪ್ರತಿ ಜಿಲ್ಲೆಯ ಜವಾಬ್ದಾರಿ ನೀಡಲಾಗಿದೆ. ಗೆದ್ದ ಅಭ್ಯರ್ಥಿ ಗಳನ್ನು ಬೇರೆಯವರ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳಿ. ಯಾರ ಕೈಗೂ ಸಿಗದಂತೆ ಬೆಂಗಳೂರಿಗೆ ಕರೆತನ್ನಿ ಎಂದು ಸಂದೇಶ ಕೊಟ್ಟಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 1:06 pm, Fri, 12 May 23