ನಾಳೆಯೇ 28 ಶಾಸಕರು ಸಚಿವರಾಗಿ ಪದಗ್ರಹಣ ಸಾಧ್ಯತೆ: ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

|

Updated on: May 19, 2023 | 9:06 AM

ಸಿದ್ದರಾಮಯ್ಯ ಕೋಟಾದಲ್ಲಿ 10 ಮಂದಿ, ಡಿಕೆ ಶಿವಕುಮಾರ್ ಕೋಟಾದಲ್ಲಿ 10 ಜನರಿಗೆ ಸಚಿವ ಸ್ಥಾನ ಹಂಚಿಕೆ ಮಾಡಲುನಿರ್ಧರಿಸಲಾಗಿದೆ. ಇನ್ನುಳಿದ ಸ್ಥಾನಗಳನ್ನ ಹೈಕಮಾಂಡ್ ಕೋಟಾದಲ್ಲಿ ಹಂಚಿಕೆಯಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹಾಗಾದ್ರೆ, ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಎನ್ನುವ ವಿವರ ಇಲ್ಲಿದೆ ನೋಡಿ.

ನಾಳೆಯೇ 28 ಶಾಸಕರು ಸಚಿವರಾಗಿ ಪದಗ್ರಹಣ ಸಾಧ್ಯತೆ: ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ
Follow us on

ಬೆಂಗಳೂರು:  ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್‌ ಅವರನ್ನು ಉಪಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹೈಕಮಾಂಡ್​ ಘೋಷಣೆ ಮಾಡಿದ್ದು, ನಾಳೆ ಅಂದರೆ ಮೇ 20ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೊತೆಗೆ ಕೆಲವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೀಗಾಗಿ ಸಿಎಂ ಆಯ್ಕೆ ಸರ್ಕಸ್ ಬಳಿಕ ಕೈ ಪಾಳಯದಲ್ಲಿ ಸಚಿವ ಸಂಪುಟ ಕಸರತ್ತು ಶುರುವಾಗಿದ್ದು, ಆಯ್ಕೆ ಮಾಡಿರುವ ಹೈಕಮಾಂಡ್‌ ನಿರ್ಧಾರವನ್ನು ಸ್ವಾಗತಿಸಿರುವ ಹಲವು ಶಾಸಕರು ಇದೀಗ ನೂತನ ಸಚಿವ ಸಂಪುಟ ಸೇರುವ ಆಶಯ ವ್ಯಕ್ತಪಡಿಸಿದ್ದಾರೆ. ಕೆಲವರು ತಮ್ಮ ಜಿಲ್ಲೆಗೆ ಹೆಚ್ಚು ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ: ಸಿಎಂ ಆಯ್ಕೆ ಕಗ್ಗಂಟಿಗೆ ಮುಕ್ತಿ, ಈಗ ಸಚಿವ ಸ್ಥಾನಕ್ಕಾಗಿ ಲಾಬಿ ಶುರು: ತಂಡೋಪತಂಡವಾಗಿ ದೆಹಲಿಗೆ ತೆರಳಿದ ಶಾಸಕರು

ನಾಳೆ ಮಧ್ಯಾಹ್ನ 12.30ಕ್ಕೆ ಕಾಂಗ್ರೆಸ್ ಕಲಿಗಳಿಗೆ ಪಟ್ಟಾಭಿಷೇಕ ನಡೆಯಲಿದೆ. ಕಂಠೀರವ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿ 2ನೇ ಬಾರಿಗೆ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ 28 ಶಾಸಕರು ಸಚಿವರಾಗಿ ಪದಗ್ರಹಣ ಸಾಧ್ಯತೆ ಇದೆ. ಆದ್ರೆ ಎಷ್ಟು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನುವುದೇ ಕೈ ನಾಯಕರು ಗುಟ್ಟಾಗೇ ಇಟ್ಟಿದ್ದಾರೆ.

2 ಡಜನ್ ಸಚಿವ ಸ್ಥಾನಕ್ಕೆ ಕಾಂಗ್ರೆಸ್​ನಲ್ಲಿ 80ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದಾರೆ. ಚುನಾವಣಾ ಫಲಿತಾಂಶ ಹೊರ ಬಿದ್ದಾಗಿನಿಂದ ನಾ ಮುಂದು.. ತಾ ಮುಂದು ಅಂತ ಸಚಿವ ಸ್ಥಾನಕ್ಕಾಗಿ ಬಹಿರಂಗ ಸ್ಟೇಟ್​ಮೆಂಟ್ ಕೊಡುತ್ತಿದ್ದಾರೆ. ಐದಾರು ಮಂದಿ ಡಿಸಿಎಂ ಸ್ಥಾನಕ್ಕೂ ಲಾಬಿ ಮಾಡಿದ್ರು. ಆದ್ರೆ ಒಬ್ಬರೇ ಡಿಸಿಎಂ ಎಂದು ಹೈಕಮಾಂಡ್ ಸ್ಪಷ್ಟಪಡಿಸಿದೆ. ಇತ್ತ ಪಕ್ಷದಲ್ಲಿ ಭಿನ್ನಮತ ಆಗದಂತೆ ಹೈ ನಾಯಕರೇ ಎಚ್ಚರವಹಿಸಿದ್ದಾರೆ. ಸಂಭಾವ್ಯ ಸಚಿವರ ಪಟ್ಟಿಯನ್ನ ಕಾಂಗ್ರೆಸ್​ನ ರಾಜ್ಯ ಉಸ್ತುವಾರಿ ಸುರ್ಜೇವಾಲ ಹಾಗೂ ವೇಣುಗೋಪಾಲ್ ಫೈನಲ್ ಮಾಡಿದ್ದಾರೆ. ಸಿದ್ದರಾಮಯ್ಯ ಕೋಟಾದಲ್ಲಿ 10 ಮಂದಿ, ಡಿಕೆ ಶಿವಕುಮಾರ್ ಕೋಟಾದಲ್ಲಿ 10 ಮಂದಿ, ಉಳಿದ ಸ್ಥಾನಗಳನ್ನ ಹೈಕಮಾಂಡ್ ಕೋಟಾದಲ್ಲಿ ಹಂಚಿಕೆಯಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದೇ ಪಟ್ಟಿ ಹಿಡಿದು ಇಂದು ಬೆಳಗ್ಗೆ ಸಿದ್ದರಾಮಯ್ಯ ಹಾಗೂ ಡಿಕೆ. ಶಿವಕುಮಾರ್ ದೆಹಲಿ ಫ್ಲೈಟ್ ಹತ್ತಲಿದ್ದಾರೆ. ಯಾರೆಲ್ಲ ಮಂತ್ರಿ ಆಗುತ್ತಾರೆ ಎನ್ನುವುದು ಇಂದೇ ಹೊರಬೀಳುವ ಸಾಧ್ಯತೆ ಇದೆ. ಹಾಗಾದ್ರೆ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಯಾರ್ಯಾರ ಹೆಸರು ಇದೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

‘ಕೈ’ ಸಂಭಾವ್ಯ ಸಚಿವರ ಪಟ್ಟಿ

ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಬೆಳಗಾವಿ ಜಿಲ್ಲೆ ಹೊಂದಿದೆ. ಈ ಬಾರಿ ಕಾಂಗ್ರೆಸ್ ಒಟ್ಟು ಜಿಲ್ಲೆಯ 18 ಕ್ಷೇತ್ರಗಳ ಪೈಕಿ 11ರಲ್ಲಿ ಗೆದ್ದು ಬೀಗಿದೆ. ಹೀಗಾಗಿ ಈ ಸಲ ಬೆಳಗಾವಿ ಜಿಲ್ಲೆಗೆ ಮೂರು ಸಚಿವ ಸ್ಥಾನಗಳನ್ನು ನೀಡಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ಆ ಮೂವರು ಯಾರು ಅಂದರೆ ಬಿಜೆಪಿ ತೊರೆದು ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದಿರುವ ಲಕ್ಷ್ಮಣ ಸವದಿ, ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸತತ ಎರಡನೇ ಬಾರಿ ಗೆದ್ದಿರುವ ಲಕ್ಷ್ಮಿ ಹೆಬ್ಬಾಳ್ಕರ್ ಹೆಬ್ಬಾಳ್ಕರ್​ ಅವರಿಗೆ ಮಹಿಳಾ ಕೋಟಾದಲ್ಲಿ ಸಚಿವ ಸ್ಥಾನ ಲಭಿಸುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಕಾಂಗ್ರೆಸ್​ ಹಿರಿಯ ನಾಯಕ, ಕೆಪಿಸಿಸಿ ಕಾರ್ಯಧ್ಯಕ್ಷ ಬೆಳಗಾವಿಯಲ್ಲಿ ಹಿಡಿತ ಸಾಧಿಸಿರುವ ಸತೀಶ್ ಜಾರಕಿಹೊಳಿ ಅವರಿಗೂ ಪ್ರಮುಖ ಖಾತೆ ಸಿಗುವುದು ಖಚಿತವಾಗಿದೆ.

ಇನ್ನು ಬೆಂಗಳೂರ ನಗರ ಜಿಲ್ಲೆಯಲ್ಲಿ ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಹ್ಯಾರಿಸ್, ದಿನೇಶ್ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್​ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ಆರ್.ಬಿ.ತಿಮ್ಮಾಪುರ್, ಎಂ.ಬಿ. ಪಾಟೀಲ್, ಕೆ.ಎಚ್. ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ಈಶ್ವರ್ ಖಂಡ್ರೆ. ಹೆಚ್.ಕೆ.ಪಾಟೀಲ್, ಭೀಮಣ್ಣ ನಾಯಕ, ಎಸ್​ಎಸ್​ ಮಲ್ಲಿಕಾರ್ಜುನ, ರುದ್ರಪ್ಪ ಲಮಾಣಿ , ನಾಗೇಂದ್ರ, ಮಧು ಬಂಗಾರಪ್ಪ, ಯು.ಟಿ. ಖಾದರ್, ಬಿ.ಕೆ. ಹರಿಪ್ರಸಾದ್, ಸಲೀಂ ಅಹಮದ್ ಸೇರಿ ಪ್ರಮುಖರ ಹಸರು ಪಟ್ಟಿಯಲ್ಲಿದೆ ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ಕೈ ಪಾಳಯದಲ್ಲಿ ಸಚಿವ ಸ್ಥಾನಕ್ಕೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ. ಆದ್ರೆ ಯಾರಿಗೆ ಅದೃಷ್ಟ ಒಲಿಯಲಿದೆ ಎಂದು ಕಾದು ನೋಡಬೇಕಿದೆ.