Karnataka Election 2023: ಕರ್ನಾಟಕದಲ್ಲಿ ಏ. 10-12ರೊಳಗೆ ವಿಧಾನಸಭಾ ಚುನಾವಣೆ ಸಾಧ್ಯತೆ; ಮಾಜಿ ಸಿಎಂ ಯಡಿಯೂರಪ್ಪ ಭವಿಷ್ಯ

ಏಪ್ರಿಲ್ 10-12ರ ಮೊದಲು ವಿಧಾನಸಭಾ ಚುನಾವಣೆಯನ್ನು ನಿರೀಕ್ಷಿಸಲಾಗಿದೆ. ಈ ಚುನಾವಣೆಯಲ್ಲಿ 130-140 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

Karnataka Election 2023: ಕರ್ನಾಟಕದಲ್ಲಿ ಏ. 10-12ರೊಳಗೆ ವಿಧಾನಸಭಾ ಚುನಾವಣೆ ಸಾಧ್ಯತೆ; ಮಾಜಿ ಸಿಎಂ ಯಡಿಯೂರಪ್ಪ ಭವಿಷ್ಯ
ಬಿಎಸ್ ಯಡಿಯೂರಪ್ಪ
Follow us
ಸುಷ್ಮಾ ಚಕ್ರೆ
|

Updated on: Feb 04, 2023 | 3:36 PM

ಬೆಂಗಳೂರು: ಕರ್ನಾಟಕದಲ್ಲಿ ಏಪ್ರಿಲ್ 10ರಿಂದ 12ರೊಳಗೆ ವಿಧಾನಸಭಾ ಚುನಾವಣೆ (Karnataka Assembly Polls) ನಡೆಯುವ ಸಾಧ್ಯತೆಯಿದೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ (BS Yediyurappa) ಭವಿಷ್ಯ ನುಡಿದಿದ್ದಾರೆ. ಕರ್ನಾಟಕ ಸರ್ಕಾರದ ಸಾಧನೆಗಳನ್ನು ಆಧರಿಸಿ ರಾಜ್ಯದಲ್ಲಿ ಬಿಜೆಪಿ (BJP) ಸಂಪೂರ್ಣ ಬಹುಮತದೊಂದಿಗೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಣ, ಬಲ ಮತ್ತು ಕೋಮು ರಾಜಕಾರಣವನ್ನು ಬಳಸಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನಗಳು ಕಳೆದು ಹೋಗಿವೆ. ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ. ಮಹಿಳೆಯರು, ಯುವಜನರ ಬೆಂಬಲ ಪಡೆಯುವತ್ತ ವಿಶೇಷ ಗಮನಹರಿಸುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಮನೆ-ಮನೆಗೆ ಕೊಂಡೊಯ್ಯಲು ಕಾರ್ಯಕರ್ತರು ಮತ್ತು ಮುಖಂಡರು ಶ್ರಮ ವಹಿಸಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಏಪ್ರಿಲ್ 10-12ರ ಮೊದಲು ವಿಧಾನಸಭಾ ಚುನಾವಣೆಯನ್ನು ನಿರೀಕ್ಷಿಸಲಾಗಿದೆ. ಈ ಚುನಾವಣೆಯಲ್ಲಿ 130-140 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಸರ್ಕಾರದ ರಚನೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಇದನ್ನೂ ಓದಿ: Assembly Polls: ಡಿಕೆ ಶಿವಕುಮಾರ್ ಗೈರು ಹಾಜರಿಯಲ್ಲಿ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕದಲ್ಲಿ ಪ್ರಜಾಧ್ವನಿ ಯಾತ್ರೆ ಆರಂಭಿಸಿದರು

ಮುಂದಿನ ಮುಖ್ಯಮಂತ್ರಿ ನಾವೇ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಯಡಿಯೂರಪ್ಪ, ರಾಹುಲ್ ಗಾಂಧಿ ನಿಮ್ಮ ನಾಯಕನಾ? ನಮ್ಮ ಪಕ್ಷದಲ್ಲಿ ಪ್ರಧಾನಿ ಮೋದಿಯಂತಹ ಪ್ರಬಲ ನಾಯಕ ಇದ್ದಾರೆ. ನರೇಂದ್ರ ಮೋದಿ ಅವರು ಜಾಗತಿಕವಾಗಿ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ. ಆದರೆ, ನಿಮ್ಮ ಪಕ್ಷದಲ್ಲಿ ಯಾವ ನಾಯಕ ಇದ್ದಾರೆ? ಎಂದು ನಾನು ಕಾಂಗ್ರೆಸ್ ನಾಯಕರನ್ನು ಕೇಳಲು ಬಯಸುತ್ತೇನೆ ಎಂದು ಟೀಕಿಸಿದ್ದಾರೆ.

ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನಾಯಕತ್ವದಲ್ಲಿ ಕರ್ನಾಟಕ ಸೇರಿದಂತೆ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುವುದರಲ್ಲಿ ಸಂದೇಹವಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿಯ ಉನ್ನತ ಸಂಸದೀಯ ಮಂಡಳಿಯ ಸದಸ್ಯರೂ ಆಗಿರುವ ಮಾಜಿ ಸಿಎಂ ಯಡಿಯೂರಪ್ಪ ಬೆಂಗಳೂರಿನಲ್ಲಿ ಬಿಜೆಪಿಯ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ್ದಾರೆ.

ಇದನ್ನೂ ಓದಿ: Assembly Polls | ರಾಜ್ಯದ ಪ್ರತಿಯೊಂದು ಮನೆಗೆ ನಮ್ಮ ಸರ್ಕಾರ ಸೌಲಭ್ಯಗಳನ್ನು ತಲುಪಿಸಿದೆ: ಬಿಎಸ್ ಯಡಿಯೂರಪ್ಪ

ಕಾಂಗ್ರೆಸ್ ಪಕ್ಷದ ನಾಯಕರು ಭಿನ್ನಾಭಿಪ್ರಾಯ ಮತ್ತು ಅಸಮಾಧಾನವನ್ನು ತುಂಬಿಕೊಂಡು ರಾಜ್ಯಾದ್ಯಂತ ಬಸ್ ಯಾತ್ರೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಬಸ್ ಯಾತ್ರೆ ಪಂಕ್ಚರ್ ಆಗಲಿದೆ. ಭಿನ್ನಾಭಿಪ್ರಾಯಗಳ ನಡುವೆಯೇ ಮತ್ತೋರ್ವ ಹಿರಿಯ ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದ ಯಡಿಯೂರಪ್ಪ, ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದಿದ್ದಾರೆ.

ಅಧಿಕಾರ, ಹಣ, ಮಾಂಸ, ಮದ್ಯ, ಕೋಮುವಾದ ಅಥವಾ ಜಾತಿ ದ್ವೇಷವನ್ನು ಬಿತ್ತಿ ಅಧಿಕಾರಕ್ಕೆ ಬರುವ ಕಾಂಗ್ರೆಸ್‌ನ ದಿನಗಳು ಕೊನೆಗೊಂಡಿವೆ ಎಂದಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ