Sindagi Election Result: ಸಿಂದಗಿ ವಿಧಾನಸಭಾ ಎಲೆಕ್ಷನ್ 2023 ರಿಸಲ್ಟ್: ಮರು ಆಯ್ಕೆಯೊಂದಿಗೆ ಹೊಸ ದಾಖಲೆ ಬರೆಯುತ್ತಾರಾ ರಮೇಶ್ ಭೂಸನೂರ?
Sindagi Assembly Election Result 2023 Live Counting Updates: ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ಇಲ್ಲಿಯವರೆಗೆ ಯಾರೂ ಹ್ಯಾಟ್ರಿಕ್ ಸಾಧನೆ ಮಾಡಿಲ್ಲ. ಪ್ರತಿ ಬಾರಿ ಹೊಸಬರಿಗೆ ಮಣೆ ಹಾಕುವ ಜೊತೆಗೆ ನಂತರದ ವಿಧಾನಸಭೆ ಚುನಾವಣೆಯಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಸೋಲುಕಂಡವರಿಗೆ ಗೆಲುವಿನ ಉಡುಗೊರೆ ನೀಡಿದ್ದು ಸಿಂದಗಿ ವಿಧಾನಸಭಾ ಕ್ಷೇತ್ರ. ಈ ಬಾರಿಗೆ ಯಾರಿಗೆ ಗೆಲುವು?

Sindagi Assembly Election Result 2023: ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತರಾಯ ಪದಕಿ ಸೆರೆಸಿಕ್ಕ ದೇವರನಾವದಗಿ ದೇವಾಲಯ, 12ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ಇತಿಹಾಸ ಪ್ರಸಿದ್ಧ ಸಂಗಮೇಶ್ವರ ದೇಗುಲಗಳಿರುವುದು ಸಿಂದಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ. ಇದು ಹೈದರಾಬಾದ್ – ಕರ್ನಾಟಕ ವಿಮೋಚನಾ ಹೋರಾಟಗಾರ ರಮಾನಂದ ತೀರ್ಥರ ನೆಲೆ. ಇನ್ನು ಸಿಂದಗಿ ಬಸವಾದಿ ಶರಣರ ವಚನಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಗದೇವ ಮಲ್ಲಿಬೊಮ್ಮ ಶರಣರ ಆಲಮೇಲ ನೆಲೆಯನ್ನು ಮಡಿಲಲ್ಲಿ ಕಟ್ಟಿಕೊಂಡಿರುವ ಕ್ಷೇತ್ರ. ಕರ್ನಾಟಕದ ಉತ್ತರದ ಗಡಿಯಲ್ಲಿರುವ ಸಿಂದಗಿ ಉತ್ತರಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಇಂಡಿ ತಾಲೂಕು, ದಕ್ಷಿಣಕ್ಕೆ ವಿಜಯಪುರ ತಾಲ್ಲೂಕು ಮತ್ತು ಪೂರ್ವಕ್ಕೆ ಅಫಜಲಪೂರ ತಾಲೂಕುಗಳಿವೆ.
ರಾಜಕೀಯ ಇತಿಹಾಸ ನೋಡುವುದಾದರೆ ರಾಜಕೀಯ ಇತಿಹಾಸ ನೋಡುವುದಾದರೆ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಗಳು ಸೇರಿ 16 ಚುನಾವಣೆಗಳು ನಡೆದಿದ್ದು, 1957ರಿಂದ ಈ ವರೆಗೆ ಸಿಂದಗಿ ವಿಧಾನಸಭೆ ಕ್ಷೇತ್ರವನ್ನು ಕಾಂಗ್ರೆಸ್ ಏಳು ಸಲ ಗೆದ್ದಿದ್ದರೆ, ನಾಲ್ಕು ಬಾರಿ ಬಿಜೆಪಿ ಗೆಲುವು ಕಂಡಿದೆ. ಇನ್ನು ಜೆಡಿಎಸ್ ಎರಡು ಬಾರಿ ಮತ್ತು ಜನತಾ ಪಕ್ಷ ಒಂದು ಸಲ ಗೆಲುವಿನ ನಗೆ ಬೀರಿದೆ. ಸಿಂದಗಿ ಪ್ರಸಿದ್ಧ ಪಾವನ ನೆಲ, ಸಿಂದಗಿ ವಿಧಾನಸಭಾ ಕ್ಷೇತ್ರ ಅನೇಕರಿಗೆ ಅವಕಾಶದ ಬಾಗಿಲು ತೆರೆದು ಶಾಸನಸಭೆಗೆ ಪ್ರವೇಶಿಸುವಂತೆ ಮಾಡಿದೆ. ಆದ್ರೆ, ಈ ಕ್ಷೇತ್ರದಲ್ಲಿ ಪುನರಾಯ್ಕೆಯೇ ಅಪರೂಪ. ಹೌದು…ಈ ಕ್ಷೇತ್ರದ ಮತದಾರರು ಒಮ್ಮೆ ಗೆದ್ದವರನ್ನು ಮತ್ತೆ ಸತತವಾಗಿ ಗೆಲ್ಲಿಸುವುದಿಲ್ಲ ಎಂಬ ವಿಶೇಷತೆ ಇತ್ತು. ಆದ್ರೆ, ಇದಕ್ಕೆ ರಮೇಶ್ ಭೂಸನೂರ ಬ್ರೇಕ್ ಹಾಕಿದ್ದಾರೆ.
ಸಿಂದಗಿ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ 1962 ಹಾಗೂ 1967ರಲ್ಲಿ ಸತತ ಎರಡು ಬಾರಿ ಗೆಲುವು ಕಂಡಿದ್ದ ಸಿ ಎಂ ದೇಸಾಯಿ ಅವರನ್ನು ಹೊರತುಪಡಿಸಿದರೆ ಉಳಿದ ಯಾವ ಅಭ್ಯರ್ಥಿಯು ಸತತವಾಗಿ ಜಯ ಗಳಿಸಿರಲಿಲ್ಲ. 2008 ಮತ್ತು 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರಮೇಶ್ ಭೂಸನೂರ ಎರಡೂ ಬಾರಿಯೂ ಗೆಲುವು ಪಡೆದು ಕಮಲ ಪಕ್ಷಕ್ಕೆ ಹ್ಯಾಟ್ರಿಕ್ ಜಯ ಕರುಣಿಸಿದರು. ಆದ್ರೆ, ರಮೇಶ ಭೂಸನೂರು 2008 ಹಾಗೂ 2013ರಲ್ಲಿ ಬಿಜೆಪಿ ಶಾಸಕರಾಗಿ ಗೆದ್ದು, 2018ರಲ್ಲಿ ಹ್ಯಾಟ್ರಿಕ್ ವಿಜಯದ ಕನಸು ಭಗ್ನಗೊಳಿಸಿದ್ದು ಎಂ.ಸಿ.ಮನಗೂಳಿ. 2004ರಲ್ಲಿ ಮೊದಲ ಬಾರಿಗೆ ಇಲ್ಲಿ ಬಿಜೆಪಿಯ ಕಮಲ ಅರಳಿಸಿದ್ದು ಅಶೋಕ ಶಾಬಾದಿ.
1957ರಿಂದ ಚುನಾವಣೆ ಇತಿಹಾಸ ಹೊಂದಿರುವ ಸಿಂದಗಿ ಕ್ಷೇತ್ರ 14 ಸಾರ್ವತ್ರಿಕ ಹಾಗೂ ಒಂದು ಉಪ ಚುನಾವಣೆ ಕಂಡಿದೆ. ಮೊದಲ 6 ಅವ ಧಿಯಲ್ಲಿ ಕಾಂಗ್ರೆಸ್ ಇಲ್ಲಿ ಅಧಿಪತ್ಯ ಸಾಧಿಸಿದೆ. ಎರಡು ಬಾರಿ ಎಸ್.ವೈ..ಪಾಟೀಲ, ಎರಡು ಬಾರಿ ಸಿ.ಎಂ.ದೇಸಾಯಿ, ಒಂದು ಬಾರಿ ಎಂ.ಎಚ್. ಬೆಕನಾಳಕರ ಹಾಗೂ ಒಂದು ಬಾರಿ ಎಲ್.ಆರ್.ಪಾಟೀಲ ಅವರನ್ನು ಕಾಂಗ್ರೆಸ್ ಪಕ್ಷದಿಂದ ಗೆಲ್ಲಿಸಿದೆ. 1985ರಲ್ಲಿ ನಡೆದ ಚುನಾವಣೆಯಲ್ಲಿ ಎಂ.ಡಿ.ಬಿರಾದಾರ ಮೂಲಕ ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಂಡಿತ್ತು. 1989ರಲ್ಲಿ ಆರ್.ಬಿ.ಚೌಧರಿ ಮೂಲಕ ಕಾಂಗ್ರೆಸ್ ವಶಕ್ಕೆ ಬಂದಿದ್ದರೂ ಬಳಿಕ ನಡೆದ 1994ರ ಚುನಾವಣೆಯಲ್ಲಿ ಜನತಾದಳದಿಂದ ಗೆದ್ದಿದ್ದ ಎಂ.ಸಿ.ಮನಗೂಳಿ ಸಚಿವರಾಗಿದ್ದರು. 2013ರಲ್ಲಿ ಕೂದಲೆಳೆ ಅಂತರದಲ್ಲಿ ಸೋತಿದ್ದ ಎಂ.ಸಿ.ಮನಗೂಳಿ, 2018ರಲ್ಲಿ ಜೆಡಿಎಸ್ ಪಕ್ಷದಿಂದ ಮತ್ತೆ ಗೆದ್ದು ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ತೋಟಗಾರಿಕೆ ಸಚಿವರಾಗಿದ್ದರು. ಶಾಸಕರಾಗಿದ್ದಾಗಲೇ ಎಂ.ಸಿ.ಮನಗೂಳಿ ನಿಧನರಾಗಿದ್ದರಿಂದ 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ರಮೇಶ ಭೂಸನೂರು ಜಯ ಸಾಧಿಸಿ ಶಾಸಕರಾಗಿದ್ದಾರೆ.
2023ರ ಚುನಾವಣೆಯ ಕಣ ಹೇಗಿದೆ?
ಜೆಡಿಎಸ್ ಅಭ್ಯರ್ಥಿಯಾಗಿ ವಿಶಾಲಾಕ್ಷಿ ಶಿವಾನಂದ ಈ ಬಾರಿ ಕಣದಲ್ಲಿದ್ದರೆ, ಕಾಂಗ್ರೆಸ್ನಿಂದ ಎಂ.ಸಿ.ಮನಗೂಳಿ ಪುತ್ರ ಅಶೋಕ್ ಎಂ ಮನಗೂಳಿ ಮತ್ತೊಮ್ಮೆ ಸ್ಪರ್ಧೆಗಿಳಿದಿದ್ದಾರೆ. ಇನ್ನು ಬಿಜೆಪಿಯಿಂದ 2021ರಲ್ಲಿ ಉಪಚುನಾವಣೆಯಲ್ಲಿ ಗೆದ್ದಿದ್ದ ರಮೇಶ್ ಭೂಸನೂರು ಇದೀಗ 2023ರ ವಿಧಾನಸಭೆಗೆ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದ್ರೆ, ಮತದಾರ ಯಾರನ್ನು ಕೈಹಿಡಿಯುತ್ತಾರೆ ಎನ್ನುವುದನ್ನು ನೋಡಬೇಕಿದೆ.