ನಾನು ಭೂತವೂ ಅಲ್ಲ ಪಿಶಾಚಿಯೂ ಅಲ್ಲ; ವರುಣಾದಲ್ಲಿ ಸಿದ್ದರಾಮಯ್ಯ ಪ್ರಚಾರದ ಬಗ್ಗೆ ಪ್ರಶ್ನಿಸಿದಾಗ ಹೀಗೆಂದಿದ್ದೇಕೆ ಸೋಮಣ್ಣ?
ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಹೆಚ್ಚು ದಿನ ಪ್ರಚಾರಕ್ಕೆ ಬರುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ (V Somanna), ಪ್ರಚಾರ ಮಾಡುವುದು ಅವರ ಕರ್ತವ್ಯ. ಅದನ್ನವರು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಚಾಮರಾಜನಗರ: ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಹೆಚ್ಚು ದಿನ ಪ್ರಚಾರಕ್ಕೆ ಬರುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ (V Somanna), ಪ್ರಚಾರ ಮಾಡುವುದು ಅವರ ಕರ್ತವ್ಯ. ಅದನ್ನವರು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು, ನಾನು ಭೂತವೂ ಅಲ್ಲ ಪಿಶಾಚಿಯೂ ಅಲ್ಲ. ನಾನೊಬ್ಬ ಮನುಷ್ಯ. ಸಿದ್ದರಾಮಯ್ಯ ಹಾಗೂ ನಾನು ಜೊತೆಯಲ್ಲಿ ಕೆಲಸ ಮಾಡಿದವರು. ಅವರು ನನಗಿಂತ ದೊಡ್ಡ ನಾಯಕರು. ಅವರು ಪ್ರಚಾರಕ್ಕೆ ಎಷ್ಟು ಬಾರಿ ಬೇಕಾದರೂ ಬರುತ್ತಾರೆ, ನಾನ್ಯಾಕೆ ಪ್ರಶ್ನೆ ಮಾಡಲಿ. ಅವರು ಬರುವುದರಿಂದ ಮತದಾರರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ವರುಣಾದಲ್ಲಿ ಒಂದೇ ದಿನ ಪ್ರಚಾರ ಮಾಡುವುದಾಗಿ ತಿಳಿಸಿದ್ದ ಸಿದ್ದರಾಮಯ್ಯ ಇದೀಗ ಮತ್ತೆ ಮತ್ತೆ ಕ್ಷೇತ್ರದತ್ತ ಧಾವಿಸುತ್ತಿದ್ದಾರೆ. ಈ ವಿಚಾರವಾಗಿ ಬಿಜೆಪಿ ಶುಕ್ರವಾರ ವ್ಯಂಗ್ಯವಾಡಿತ್ತು. ಹೇಳುವುದು ಒಂದು ಮಾಡುವುದು ಇನ್ನೊಂದು! ವರುಣಾದಲ್ಲಿ ಮೊಮ್ಮಗನ ಜತೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯನವರು, ಮತ್ತೆ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರುವುದಿಲ್ಲ ಎಂದಿದ್ದರು. ನಾಮಪತ್ರ ಸಲ್ಲಿಸಿ ಮೂರು ದಿನ ಕಳೆದಿಲ್ಲ, ಆಗಲೇ ಸೋಲುವ ಸೂಚನೆ ಸಿಕ್ಕಿದ್ದೇ, ಕ್ಷೇತ್ರಕ್ಕೆ ಓಡಿದ್ದಾರೆ. ಇದು ಒಳ ಏಟಿನ ಭಯವೇ ಎಂದು ಟ್ವೀಟ್ ಮಾಡಿತ್ತು.
ಡಿಕೆ ಶಿವಕುಮಾರ್ ಹಗಲುಗನಸು ಕಾಣುತ್ತಿದ್ದಾರೆ; ಸೋಮಣ್ಣ
ಬಿಜೆಪಿಯ ಲಿಂಗಾಯತ ಡ್ಯಾಂ ಒಡೆದಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ, ಅವರು (ಡಿಕೆಶಿ) ಹಗಲು ಕನಸು ಕಾಣುತ್ತಿದ್ದಾರೆ. ಬಿಜೆಪಿ ವೀರಶೈವ, ಲಿಂಗಾಯತರನ್ನು, ಅನ್ಯ ಪಕ್ಷದವರನ್ನು ಒಂದೇ ರೀತಿ ಕಾಣುತ್ತಿದೆ. ಇತಿಹಾಸ ಏನು ಎಂದು ಕಾಂಗ್ರೆಸ್ನವರು ಅರ್ಥ ಮಾಡಿಕೊಳ್ಳಬೇಕು. ಒಳಮೀಸಲಾತಿ ಆಯಿತು, ಲಿಂಗಾಯತರನ್ನು ವಿಭಜಿಸಲು ಮುಂದಾದಿರಿ, ಅದು ಪ್ರಯೋಜನ ನೀಡಲಿಲ್ಲ. ನೀವು ಯಾವುದರಲ್ಲಿ ಯಶಸ್ವಿಯಾದಿರಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಬಡವರು ಬಡವರಾಗಿಯೇ ಇರಲಿ ಎಂದು ಬಯಸಿದ್ದ ಕಾಂಗ್ರೆಸ್; ವಿಜಯೇಂದ್ರ ವಾಗ್ದಾಳಿ
125 ವರ್ಷಗಳ ಇತಿಹಾಸವಿರುವ ರಾಷ್ಟ್ರೀಯ ಪಕ್ಷದ ನಾಯಕರಾಗಿ ಯಾಕೆ ಈ ರೀತಿ ಮಾತನಾಡುತ್ತಿದ್ದೀರಿ. ಲಿಂಗಾಯತರು ಅಲ್ಲೂ ಇಲ್ಲವೇ? ಆದರೆ, ಆದ್ರೆ ಹೆಚ್ಚಿನವರು ಬಿಜೆಪಿಯಲ್ಲಿದ್ದಾರೆ. ನಿಜಲಿಂಗಪ್ಪ, ವಿರೇಂದ್ರ ಪಾಟೀಲ್ ಅವರಿಗೆ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಸೋಮಣ್ಣ ಹೇಳಿದ್ದಾರೆ.
ಪ್ರತಾಪ್ ಸಿಂಹ ಭವಿಷ್ಯದ ನಾಯಕ ಎಂದ ಸೋಮಣ್ಣ
ಬೇರೆ ಕ್ಷೇತ್ರ ಕಡೆಗಣಿಸಿ ಪ್ರತಾಪ ಸಿಂಹ ವರುಣಾದಲ್ಲಿ ಹೆಚ್ಚು ಪ್ರಚಾರ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವನು ಪ್ರತಾಪ ಸಿಂಹ. ಎಲ್ಲಿಗೆ ಆದ್ಯತೆ ನೀಡಬೇಕು ಎಂದು ಅವನಿಗೆ ಗೊತ್ತಿದೆ. ನಾನು ಚಾಮರಾಜನಗರದಲ್ಲಿದ್ದೇನೆ. ಆತ ವರುಣಾದಲ್ಲಿದ್ದಾನೆ. ಪ್ರತಾಪ ಸಿಂಹ ಒಬ್ಬ ಶಿಸ್ತಿನ ಸಿಪಾಯಿ, ಭವಿಷ್ಯದ ನಾಯಕ. ಪ್ರತಾಪಸಿಂಹನ ದೂರದೃಷ್ಟಿ ಬೇರೆಯವರಿಗೂ ಬಂದರೆ ಒಳ್ಳೆಯದು ಎಂದು ಹೇಳಿದ್ದಾರೆ.
ಬಿಜೆಪಿಯಿಂದ ಲಿಂಗಾಯತ ಮುಖ್ಯಮಂತ್ರಿ ಅಸ್ತ್ರ ಬಳಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸೋಮಣ್ಣ, ಒಂದು ವರ್ಷದ ಹಿಂದೆಯೇ ಅಮಿತ್ ಶಾ ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ಎಂದು ಹೇಳಿದ್ದರು. ಇದನ್ನು ನೀವೆ ಅರ್ಥ ಮಾಡಿಕೊಳ್ಳಬೇಕು. ಮುಂದಿನ ಸಿಎಂ ಆಗುವ ಬಗ್ಗೆ ನಾನು ಭ್ರಮೆ ಇಟ್ಟುಕೊಂಡಿಲ್ಲ. ಇನ್ನು ಇಪ್ಪತ್ತು ದಿನ ಕಾಯಿರಿ, ಎಲ್ಲಾ ಸರಿಹೋಗುತ್ತೆ. ತಾಯಿ ಚಾಮುಂಡಿ ಏನು ಹೇಳ್ತಾಳೆ ಅದನ್ನು ಕೇಳುತ್ತೇನೆ ಎಂದು ಹೇಳಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ