ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ವಿಳಂಬ ಆಗುತ್ತಿರುವುದ್ಯಾಕೆ? ಕಾಂಗ್ರೆಸ್​ನಲ್ಲಿ ಏನಾಗ್ತಿದೆ? ಇಲ್ಲಿದೆ ನೋಡಿ

ಸಿಎಂ ಆಯ್ಕೆ ವಿಳಂಬ ಆಗ್ತಿರೋದು ಯಾಕೆ? ಸಿದ್ದು ಹಿಡಿದಿರೋ ಬಿಗಿಪಟ್ಟು ಏನು? ಡಿಕೆ ಶಿವಕುಮಾರ್‌ ಹೈಕಮಾಂಡ್‌ ಮುಂದೆ ಹೇಳಿದ್ದೇನು? ಸಿದ್ದು ಬೆಂಬಲಿಗರಿಗೆ ಡಿಕೆಶಿ ಕೊಟ್ಟ ಸಂದೇಶವೇನು ಅನ್ನೋ ಕಂಪ್ಲೀಟ್‌ ವಿವರ ಇಲ್ಲಿದೆ.

ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ವಿಳಂಬ ಆಗುತ್ತಿರುವುದ್ಯಾಕೆ? ಕಾಂಗ್ರೆಸ್​ನಲ್ಲಿ ಏನಾಗ್ತಿದೆ? ಇಲ್ಲಿದೆ ನೋಡಿ
ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್
Follow us
ಆಯೇಷಾ ಬಾನು
|

Updated on: May 18, 2023 | 7:16 AM

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ(Karnataka Assembly Elections 2023 Result) ಬಂದು ಐದು ದಿನಗಳೇ ಕಳೆದಿವೆ. ಆದ್ರೆ ಬಹುಮತದಿಂದ ಗೆದ್ದು ಬೀಗಿದ ಕಾಂಗ್ರೆಸ್(Congress) ಪಕ್ಷ ಮಾತ್ರ ಇನ್ನೂ ಆಳ್ವಿಕೆ ಶುರು ಮಾಡಿಲ್ಲ. ಸಿಎಂ ಆಯ್ಕೆ ವಿಚಾರ ಕಾಂಗ್ರೆಸ್​ನಲ್ಲಿ ಕಗ್ಗಂಟಾಗಿಯೇ ಉಳಿದಿದೆ. ಇನ್ನು ಸಿದ್ದರಾಮಯ್ಯ(Siddaramaiah) ಸಿಎಂ ಪಟ್ಟಕ್ಕೇರುವುದು ಹಾಗೂ ಡಿಕೆ ಶಿವಕುಮಾರ್​ಗೆ(DK Shivakumar) ಡಿಸಿಎಂ ಸ್ಥಾನ ನೀಡುವುದು ಬಹುತೇಕ ಖಚಿತವಾಗಿದೆ. ಆದ್ರೆ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಇಂದು ಸಂಜೆ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಘೋಷಣೆ ಆಗುವ ಸಾಧ್ಯತೆ ಇದೆ. ಅಷ್ಟಕ್ಕೂ ಸಿಎಂ ಆಯ್ಕೆ ವಿಳಂಬ ಆಗ್ತಿರೋದು ಯಾಕೆ? ಸಿದ್ದು ಹಿಡಿದಿರೋ ಬಿಗಿಪಟ್ಟು ಏನು? ಡಿಕೆ ಶಿವಕುಮಾರ್‌ ಹೈಕಮಾಂಡ್‌ ಮುಂದೆ ಹೇಳಿದ್ದೇನು? ಸಿದ್ದು ಬೆಂಬಲಿಗರಿಗೆ ಡಿಕೆಶಿ ಕೊಟ್ಟ ಸಂದೇಶವೇನು ಅನ್ನೋ ಕಂಪ್ಲೀಟ್‌ ವಿವರ ಇಲ್ಲಿದೆ.

ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆ, ಕಾಂಗ್ರೆಸ್‌ ಕೊಟ್ಟಿದ್ದ ಗ್ಯಾರಂಟಿ ಕಾರ್ಡ್‌. ಕೈ ಪಡೆಯ ಸಾಮೂಹಿಕ ನಾಯಕತ್ವ, ಕಾಂಗ್ರೆಸ್‌ನನ್ನ ಅಧಿಕಾರದ ಗದ್ದುಗೆಗೆ ತಂದು ನಿಲ್ಲಿಸಿದೆ. ಹೀಗೆ ಸುಲಭವಾಗಿ ಗದ್ದುಗೆ ಏರಿರೋ ಕಾಂಗ್ರೆಸ್‌ಗೆ ನಾಯಕನ ಆಯ್ಕೆ ಮಾತ್ರ ಕಬ್ಬಿಣದ ಕಡಲೆಯಾಗಿದೆ. ಸಿಎಂ ಪಟ್ಟಕ್ಕಾಗಿ ಟಗರು ಸಿದ್ದರಾಮಯ್ಯ ಪಟ್ಟು ಹಿಡಿದು ನಿಂತಿದ್ರೆ, ಬಂಡೆ ಡಿಕೆ ಶಿವಕುಮಾರ್ ಕ್ಷಣಕ್ಷಣಕ್ಕೂ ಗಟ್ಟಿಯಾಗ್ತಿದ್ದಾರೆ.

ಇದನ್ನೂ ಓದಿ: Siddaramaiah new Karnataka Chief Minister: ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಪಟ್ಟ, ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ – ಎಐಸಿಸಿ ಅಧ್ಯಕ್ಷ ಖರ್ಗೆ ಸರ್ವಾನುಮತದ ನಿರ್ಣಯ

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಚುನಾವಣೆಯ ಸಮಯದಲ್ಲಿ ಜೊತೆಯಾಗಿ ಓಡಾಡ್ತಿದ್ರು. ಜೊತೆಯಾಗೇ ಪ್ರಚಾರ ಮಾಡ್ತಿದ್ರು, ಏನೇ ಪ್ರಮುಖ ನಿರ್ಧಾರ ಕೈಗೊಂಡ್ರು ಇಬ್ರು ಜೊತೆಯಾಗಿ ಇರ್ತಿದ್ರು. ಅಷ್ಟೇ ಅಲ್ಲ ಪ್ರಚಾರದ ಕೊನೆ ಕ್ಷಣದಲ್ಲಿ ನಾವಿಬ್ಬರು, ಹೇಗೆ ಒಗ್ಗಟ್ಟಾಗಿದ್ದೇವೆ ಅನ್ನೋದನ್ನ ಈ ವಿಡಿಯೋ ಮೂಲಕ ತೋರಿಸಿಕೊಟ್ಟಿದ್ರು. ಹೀಗಿದ್ದವರ ನಡುವೆ ಈಗ ಸಿಎಂ ಕುರ್ಚಿಗಾಗಿ ದೊಡ್ಡ ಕದನವೇ ನಡೆಯುತ್ತಿದೆ. ಯೆಸ್‌… ಸಿದ್ದು ಮೊದಲೇ ದೆಹಲಿಗೆ ಹಾರಿದ್ರೂ ಹಲವು ಲೆಕ್ಕಾಚಾರ ಹಾಕಿಕೊಂಡಿದ್ದ ಡಿಕೆಶಿ ನಂತರ ರಾಷ್ಟ್ರರಾಜಧಾನಿ ತಲುಪಿದ್ರು. ಮಲ್ಲಿಕಾರ್ಜುನ ಖರ್ಗೆ ಜೊತೆ ಮಾತನಾಡಿರೋ ಡಿಕೆ ಶಿವಕುಮಾರ್‌, ಮುಖ್ಯಮಂತ್ರಿ ಪದವಿ ಬಿಟ್ಟು ನನಗೇ ಬೇಱವ ಪಟ್ಟವೂ ಬೇಡ ಅಂತಾ ಖಡಕ್‌ ಆಗಿ ಹೇಳಿದ್ದಾರೆ.

ಏಕಾಂಗಿ ಎನ್ನುತ್ತಲೇ ಬೆಂಬಲಿಗರ ಜೊತೆ ಸಭೆ

ಇನ್ನು ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಜೊತೆ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ನಾಯಕರ ಯಾವ ಆಫರ್‌ಗೂ ತಲೆಬಾಗಿಲ್ಲ. ಕೊಡೋದಾದ್ರೆ ಸಿಎಂ ಪಟ್ಟವನ್ನೇ ಕೊಡಿ ಎಂದಿದ್ದಾರೆ ಎನ್ನಲಾಗ್ತಿದೆ. ಡಿಸಿಎಂ ಪಟ್ಟ, ಪ್ರಮುಖ ಖಾತೆ ಸೇರಿದಂತೆ ಎಲ್ಲಾ ಆಫರ್‌ಗಳನ್ನೂ ತಿರಸ್ಕರಿಸಿದ್ದಾರೆ ಎನ್ನಲಾಗ್ತಿದೆ. ಇನ್ನು ನಾನು ಏಕಾಂಗಿ ಅಂತಾ ದೆಹಲಿಗೆ ಹಾರಿದ್ದ ಡಿಕೆಶಿ ತಮ್ಮ ಸಹೋದರ ಸಂಸದ ಸುರೇಶ್‌ ದೆಹಲಿ ನಿವಾಸದಲ್ಲೇ ಬೆಂಬಲಿಗರ ಜೊತೆ ಚರ್ಚಿಸಿದ್ರು. ಡಿಕೆಶಿ ಬೆಂಬಲಕ್ಕೆ ಹಲವು ಶಾಸಕರು ನಿಂತಿದು, ಡಿಕೆಶಿ ಕೂಡಾ ಶಕ್ತಿ ಪ್ರದರ್ಶನಕ್ಕೆ ನಿಂತ್ರಾ ಅನ್ನೋ ಪ್ರಶ್ನೆ ಮೂಡಿದೆ.

ಸಿದ್ದು ಸಿಎಂ ಅಂತಿದ್ದವರ ವಿರುದ್ಧ ಪರೋಕ್ಷ ಕಿಡಿ

ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಅಧಿಕೃತ ಘೋಷಣೆವೊಂದೇ ಬಾಕಿ ಅನ್ನೋ ಸುದ್ದಿ ನಿನ್ನೆ(ಮೇ 17) ಬೆಳಗ್ಗೆ 11 ರಿಂದಲೇ ಹರಿದಾಡಿತ್ತು. ಸಿದ್ದರಾಮಯ್ಯ ಬೆಂಬಲಿಗ ಶಾಸಕರೇ ಈ ಮಾತು ಹೇಳಿದ್ರು. ಚರ್ಚೆ ನಡೆಯುತ್ತಿರುವಾಗ್ಲೇ ಈ ಸುದ್ದಿಗಳು ಬಂದಿದ್ರಿಂದ ಡಿಕೆಶಿ ಕೆರಳಿ ಕೆಂಡವಾಗಿದ್ರು. ಹೀಗಾಗಿ ಸುರ್ಜೇವಾಲ ಕೂಡಾ ಮಾಧ್ಯಮಗಳ ಮುಂದೆ ಬಂದು ಸ್ಪಷ್ಟನೆ ನೀಡಿದ್ರು. ಇನ್ನು ಸ್ವತಃ ಶಿವಕುಮಾರ್‌ ಅವೆಲ್ಲಾ ಫೇಕ್‌ ನ್ಯೂಸ್‌ ಅಂತಾ ಪರೋಕ್ಷವಾಗಿ ಸಿದ್ದು ಬೆಂಬಲಿಗರ ವಿರುದ್ಧ ಕಿಡಿಕಾರಿದ್ರು.

ಇದನ್ನೂ ಓದಿ: ಸಿದ್ದರಾಮಯ್ಯ 2009 ರಲ್ಲಿ ಸೋನಿಯಾ ಗಾಂಧಿಯನ್ನು ಬ್ಲ್ಯಾಕ್​ಮೇಲ್ ಮಾಡಿದಂತೆ ಈಗಲೂ ಮಾಡುತ್ತಿದ್ದಾರೆ: ಚಲವಾದಿ ನಾರಾಯಣಸ್ವಾಮಿ

ಇನ್ನು ನಿನ್ನೆ ಸಂಜೆ ಬೆಂಬಲಿಗರ ಜೊತೆಗಿನ ಚರ್ಚೆ ಬಳಿಕ ಸುರೇಶ್‌ ನಿವಾಸದಿಂದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ ನಿವಾಸಕ್ಕೆ ತೆರಳಿದ್ರು. ಈ ವೇಳೆ ಸಿಎಂ ಆಯ್ಕೆ ಬಗ್ಗೆ ಪ್ರತಿಕ್ರಿಯಿಸದ ಡಿಕೆಶಿ, ಎಲ್ಲವನ್ನೂ ಸುರ್ಜೇವಾಲ ಅವರೇ ಹೇಳಿದ್ದಾರಲ್ಲ ಅಂದ್ರು.

ಒಟ್ನಲ್ಲಿ ಸಿಎಂ ಆಯ್ಕೆ ವಿಷಯ ಸುಲಭವಾಗಿ ಬಗೆಹರಿಯುತ್ತೆ ಅನ್ನೋ ನಾಯಕರ ಲೆಕ್ಕಾಚಾರ ತಲೆಕೆಳಗಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದು ಬಿಗಿಪಟ್ಟು ಹಿಡಿದ್ರೆ, ಡಿಕೆಶಿ ಕೂಡಾ ಕನಕಪುರ ಬಂಡೆಗಿಂತಲೂ ಗಟ್ಟಿಯಾಗಿದ್ದಾರೆ. ಇದೇ ಪಟ್ಟುಗಳೇ ಕೈ ಹೈಕಮಾಂಡ್‌ಗೆ ದೊಡ್ಡ ಸವಾಲ್ ಆಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ