ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಳ ಎಣಿಕೆ ಪ್ರಾರಂಭವಾಗಿದ್ದು, ಮೂರು ರಾಜಕೀಯ ಪಕ್ಷಗಳು ಪ್ರಚಾರದ ಅಬ್ಬರದ ಜೊತೆಗೆ ತಂತ್ರ-ಪ್ರತಿತಂತ್ರ ಹೆಣೆಯುತ್ತಿವೆ. ನಿನ್ನೆ (ಜ.20) ನೆಲಮಂಗಲದ ಜೆಡಿಎಸ್ ನಗರಸಭೆ ಅಧ್ಯಕ್ಷರು, ಸದಸ್ಯರು ಮತ್ತು ಇತರರು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದರು. ಇನ್ನು ಬಿಜೆಪಿ ಪಾಳಯದಲ್ಲಿ ಮಹತ್ವದ ಸಭೆಗಳಾಗಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ರಾಜ್ಯ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಈ ಸೂಚನೆಯಲ್ಲಿ ಕೋಲಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆಯನ್ನು ಗಂಭಿರವಾಗಿ ತೆಗೆದುಕೊಳ್ಳುವುದು ಬೇಡ ಎನ್ನುವುದು ಗಮನಾರ್ಹವಾಗಿದೆ. ಈ ಸಭೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಜರಾಗದಿದ್ದ್ದು ಕುತೂಹಲ ಕೆರಳಿಸಿದೆ. ಈ ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಜೆಡಿಎಸ್ ಪಂಚ ಯೋಜನೆಗಳನ್ನು ಮುಂದಿಟ್ಟುಕೊಂಡು ಪಂಚರತ್ನಯಾತ್ರೆ ಮಾಡುತ್ತಿದ್ದು, ವಿಜಯಪುರ ನಗರಕ್ಕೆ ತಲುಪಿದೆ. ಇಂದು ಕೂಡ ಅನೇಕ ಬೆಳವಣಿಗೆಗಳು ಆಗಲಿವೆ.
ಚಿಕ್ಕಮಗಳೂರು: ನಾನು 25 ಸಾವಿರ ಜನಕ್ಕೆ ಕೆಲಸ ನೀಡಿದ್ದೇನೆ. ಒಂದೇ ಒಂದು ರೂಪಾಯಿ ಲಂಚ ಪಡೆದಿದ್ರೆ ಹೇಳಿ. ಇವತ್ತೇ ರಾಜಕೀಯ ಬಿಟ್ಟು ಬಿಡ್ತೀನಿ. ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿದ್ರು. ಒಂದೇ ಒಂದು ಅವ್ಯವಹಾರ ಮಾಡಿದ್ರೆ ಹೇಳಿ ಎಂದು ಬಿಜೆಪಿಗೆ ಡಿ.ಕೆ ಶಿವಕುಮಾರ್ ಪ್ರಶ್ನೆ ಮಾಡಿದರು.
ಹಾಸನ: ಕಾಂಗ್ರೆಸ್ ಪ್ರಜಾದ್ವನಿ ಸಮಾವೇಶದಲ್ಲಿ ಮಾತಿಗೆ ನಿಂತ ಸಿದ್ದರಾಮಯ್ಯಗೆ ಜೈಕಾರಗಳ ಸುರಿಮಳೆ. ಸಾಕು ಸಾಕು ನಿಲ್ಲಿಸಿ ಎಂದ ಸಿದ್ದರಾಮಯ್ಯ. ಸಿದ್ದರಾಮಯ್ಯ ಮಾತಿಗಾಗಿ ಎದ್ದು ಬರುತ್ತಲೇ ಮೊಳಗಿದ ಜಯಘೋಷಗಳು.
ಹೊಸಕೋಟೆ: ಕಾಂಗ್ರೆಸ್ ಡಿ.ಕೆ.ಶಿವಕುಮಾರ್ರನ್ನು ಸೋಲಿಸಲು 500 ಕೋಟಿ ರೂಪಾಯಿ ಸುಫಾರಿ ಕೊಟ್ಟಿರುವುದು ಡಿ ಕಾಂಗ್ರೆಸ್ ವರ್ಸಸ್ ಎಸ್ ಕಾಂಗ್ರೆಸ್. ಡಿ ಕಾಂಗ್ರೆಸ್ನ ಸೋಲಿಸಲು ಎಸ್ ಕಾಂಗ್ರೆಸ್ಗೆ 500 ಕೋಟಿ ಕೆಸಿಆರ್ ಕೊಟ್ಟಿದ್ದಾರೆ. ಇವರಿಬ್ಬರಿಂದ ಬಿಜೆಪಿಗೆ ಲಾಭವಾಗುತ್ತೆ ಇವರಿಲ್ಲದಿದ್ರು ಲಾಭವಾಗುತ್ತೆ. ಮೋದಿ, ಅಮಿತ್ ಶಾ ಹವಾ ಈಗಾಗಲೇ ಶುರುವಾಗಿದ್ದು, ಬ್ಯಾಂಡ್ ಬಾರಿಸುತ್ತಿದ್ದಾರೆ. ಮೂರು ನಾಲ್ಕು ದಿನಗಳಲ್ಲಿ ಅಮಿತ್ ಶಾ ಮತ್ತೆ ರಾಜ್ಯಕ್ಕೆ ಬರ್ತಿದ್ದಾರೆ. 05 ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಬರ್ತಿದ್ದಾರೆ ಎಂದು ಸಚಿವ ಆರ್.ಅಶೋಕ್ ಹೇಳಿದರು.
ಚಿಕ್ಕಮಗಳೂರು: ಕಾಂಗ್ರೆಸ್ನಿಂದ ಪ್ರಜಾಧ್ವನಿ ಸಮಾವೇಶಕ್ಕೆ ಕ್ಷಣಗಣನೆ ಶುರುವಾಗಿದೆ. ಪ್ರಜಾಧ್ವನಿ ಸಮಾವೇಶದಲ್ಲಿ 25 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಿದ್ದಾರೆ. AICC ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.
ತುಮಕೂರು: ದೇಶ ಹಾಗೂ ರಾಜ್ಯದಲ್ಲಿ ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಬಿ.ವೈ.ವಿಜಯೇಂದ್ರ ಹೇಳಿದರು. ಕಾಂಗ್ರೆಸ್ಸಿಗರು ಅಧಿಕಾರಕ್ಕೆ ಬರ್ತೀವಿ ಅಂತಾ ಹಗಲುಗನಸು ಕಾಣ್ತಿದ್ದಾರೆ. ಹೇಗಾದ್ರೂ ಮಾಡಿ ಅಧಿಕಾರಕ್ಕೆ ಬರಬೇಕೆಂದು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಜೆಡಿಎಸ್ ಯಾವತ್ತೂ ಬಹುಮತದ ಬಗ್ಗೆ ಯೋಚನೆ ಮಾಡುವುದಿಲ್ಲ. ಜೆಡಿಎಸ್ನವ್ರು 30-40 ಸ್ಥಾನ ಗೆಲ್ಲುವ ಬಗ್ಗೆಯಷ್ಟೇ ಯೋಚಿಸುತ್ತಾರೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ನವರು ಏನು ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು. PFI ಸಂಘಟನೆ ರಾಜ್ಯಾದ್ಯಂತ ವಿಸ್ತರಿಸಿದ್ದೇ ಸಿದ್ದರಾಮಯ್ಯ ಸಾಧನೆ. 32 ಹಿಂದೂ ಕಾರ್ಯಕರ್ತರ ಕೊಲೆಗಳೇ ಕಾಂಗ್ರೆಸ್ ಸಾಧನೆನಾ ಎಂದು ಪ್ರಶ್ನಿಸಿದರು. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಹಗರಣಗಳು ನಡೆದಿದೆ. ಶಿಕ್ಷಕರ, ಪೊಲೀಸರ ನೇಮಕಾತಿಯಲ್ಲಿ ದೊಡ್ಡ ಹಗರಣ ನಡೆದಿವೆ. ಸಿದ್ದರಾಮಯ್ಯ ಆಡಳಿತದಲ್ಲಿನ ಹಗರಣಗಳ ಪಟ್ಟಿ ನಮ್ಮ ಬಳಿ ಇದೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ: ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು. ಪ್ರಧಾನಿ ಮೋದಿ ಎಲ್ಲಾ ಕಡೆ ಸಂಚರಿಸುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ರಾಜ್ಯದ ಜನ ಡಬಲ್ ಇಂಜಿನ್ ಸರ್ಕಾರಕ್ಕೆ ಮತ ಹಾಕುತ್ತಾರೆ ಎಂದು ಹೇಳಿದರು.
ದಾವಣಗೆರೆ: ಕಾಂಗ್ರೆಸ್ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದೆ. ರಾಜಸ್ಥಾನ ಸೇರಿ ವಿವಿಧ ರಾಜ್ಯಗಳಲ್ಲಿ ನೀಡಿದ ಆಶ್ವಾಸನೆ ಏನಾಗಿದೆ. ರಾಜಸ್ಥಾನದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ಅಂದ್ರೆ ಬರಿ ಸುಳ್ಳು ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ಮಾಡಿದರು. ಚುನಾವಣೆ ಅಂದ್ರೆ ಗಾಂಧಿ, ಗೋಡ್ಸೆ ನಡುವಿನ ಯುದ್ಧ ಅಂದಿದ್ದಾರೆ. ಗಾಂಧಿ, ಗೋಡ್ಸೆ ನಡುವಿನ ಯುದ್ಧ ಅಂತಾ ಹರಿಪ್ರಸಾದ್ ಹೇಳ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಈಗ ಇರುವವರು ನಕಲಿ ಗಾಂಧಿಗಳು ಎಂದು ಕಿಡಿಕಾರಿದರು.
ಚಿಕ್ಕಬಳ್ಳಾಪುರ: ಫೆಬ್ರವರಿಯಲ್ಲಿ ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೆರೇಸಂದ್ರ ಗ್ರಾಮದಲ್ಲಿ ಮೆಡಿಕಲ್ ಕಾಲೇಜು ಕಟ್ಟಡ ಉದ್ಘಾಟನೆಗೆ ಮೋದಿ ಆಗಮಿಸಲಿದ್ದಾರೆ. ಮೋದಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಬೇಕು ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
ದಾವಣಗೆರೆ: ಬರುವ ಫೆಬ್ರುವರಿ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ದಾವಣಗೆರೆಗೆ ಬರಲಿದ್ದಾರೆ. ದೊಡ್ಡ ಸಮಾವೇಶ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹಾಸನ: ರಾಜ್ಯದ ಜನರ ಸಮಸ್ಯೆ ತಿಳಿಯುವುದು ನಮ್ಮ ಯಾತ್ರೆಯ ಉದ್ದೇಶ ಎಂದು ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಹೇಳಿದರು. ಬಿಜೆಪಿ ಅಪಾಯಕಾರಿ, ಅವರು ಭಾವನೆ ಮೇಲೆ ಆಡಳಿತ ನಡೆಸುತ್ತಾರೆ. ನಮ್ಮ ಸ್ವಾಭಿಮಾನ ಬದಿಗೊತ್ತಿ ಜೆಡಿಎಸ್ಗೆ ಅಧಿಕಾರ ಕೊಟ್ಟಿದ್ದೆವು. ಒಟ್ಟಿಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಹೆಚ್ಡಿಕೆ ಮೇಲಿತ್ತು. ಆದರೆ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ ಎಂದು ಹೇಳಿದರು.
ಹಾಸನ: ಕಾಂಗ್ರೆಸ್ ಪ್ರಜಾದ್ವನಿ ಯಾತ್ರೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನೂತನ ಜಿಲ್ಲಾದ್ಯಕ್ಷ ಇ.ಎಚ್.ಲಕ್ಷ್ಮಣ್ ಪದಗ್ರಹಣ ಮಾಡಲಾಯಿತು.
ವಿಜಯಪುರ: 2014ಕ್ಕಿಂತ ಮೊದಲು ವಿದೇಶದಿಂದ ಮೊಬೈಲ್ಗಳ ಆಮದು ಮಾಡಲಾಗುವುದು. ಬಿಜೆಪಿ ಸರ್ಕಾರ ಬಂದ ಮೇಲೆ ಮೇಕ್ ಇನ್ ಇಂಡಿಯಾ ಅಡಿ ದೇಶದಲ್ಲೇ ಮೊಬೈಲ್ಗಳನ್ನ ಉತ್ಪಾದಿಸುತ್ತಿದ್ದೇವೆ. ಆಟೋಮೋಬೈಲ್ ಇಂಡಸ್ಟ್ರಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದರು.
ವಿಜಯಪುರ: ಪವಿತ್ರ ಭೂಮಿ ವಿಜಯಪುರಕ್ಕೆ ನನ್ನ ನಮನ ಸಲ್ಲಿಸುತ್ತೇನೆ. ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಹಾಗೂ ಸಬ್ಕಾ ಪ್ರಯಾಸ್ ಅಡಿ ದೇಶವನ್ನು ಅಭಿವೃದ್ಧಿಗೊಳಿಸುವ ಗುರಿ ಹೊಂದಲಾಗಿದೆ. ಕರ್ನಾಟಕದ ಅಭಿವೃದ್ಧಿಯಾದರೆ ದೇಶದ ಅರ್ಥವ್ಯವಸ್ಥೆ ಸುಧಾರಣೆ ಆಗುತ್ತದೆ. ಆ ನಿಟ್ಟಿನಲ್ಲಿ ನಾವು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುತ್ತಿದ್ದೇವೆ. ಭಾರತದ ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯದ ಕೊಡುಗೆ ಸಾಕಷ್ಟಿದೆ. ದೇಶದಲ್ಲಿ ಮೋದಿ ಸರ್ಕಾರದಿಂದ ಡಿಜಿಟಲ್ ಕ್ರಾಂತಿ ಆಗಿದೆ ಎಂದು ಹೇಳಿದರು.
ವಿಜಯಪುರ: ದೇಶದ 100 ಕೋಟಿಗೂ ಹೆಚ್ಚು ಜನರಿಗೆ ಕೊವಿಡ್ ಲಸಿಕೆ ನೀಡಲಾಗಿದೆ. ಚೀನಾ ಮಹಾಮಾರಿ ಕೊವಿಡ್ನಿಂದ ಸಂಪೂರ್ಣ ನಲುಗಿ ಹೋಗಿದೆ. ಸಾವಿನ ಸಂಖ್ಯೆ ಹೆಚ್ಚುತ್ತಿದ್ದರೂ ಚೀನಾ ಸರ್ಕಾರ ಮಾಹಿತಿ ಬಚ್ಚಿಟ್ಟಿದೆ. ಕೊವಿಡ್ ಸಂದರ್ಭದಲ್ಲಿ ಅನೇಕ ರಾಷ್ಟ್ರಗಳಿಗೆ ಲಸಿಕೆ ರಫ್ತು ಮಾಡಿದ್ದೇವೆ. ಭಾರತ ಇಂದು ಬೇಡುವ ರಾಷ್ಟ್ರವಲ್ಲ, ಕೊಡುವ ದೇಶವಾಗಿ ನಿರ್ಮಾಣವಾಗಿ ಎಂದು ಜಿಲ್ಲೆಯ ಸಿಂದಗಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಶಿವಮೊಗ್ಗ: ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ, ಭದ್ರಾವತಿ ಕಾರ್ಖಾನೆ ಮುಚ್ಚಿದರು ಎಂದು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಆರೋಪಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಸಂಗಮೇಶ್ವರ್, ಯಡಿಯೂರಪ್ಪ ಹಾಗೂ ಪುತ್ರ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಈ ತನಕ ಕಾರ್ಖಾನೆ ಉಳಿಸುತ್ತೇವೆಂದು ಬಡಾಯಿ ಕೊಚ್ಚಿಕೊಂಡು ಚುನಾವಣಾ ಅಸ್ತ್ರ ಮಾಡಿಕೊಂಡು ಬಂದು ಜನರಿಗೆ ಮೋಸ ಮಾಡಿದರು. ಬಿಜೆಪಿಯವರಿಗೆ ಮಾನ ಮರ್ಯಾದೆ ಏನು ಇಲ್ಲ. ಯಾಕಂದರೆ ಐದು ವರ್ಷಗಳ ಹಿಂದೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕಾರ್ಖಾನಗೆ ಗಣಿ ನೀಡಿತ್ತು. ಆಗ ವಿಐಎಸ್ಎಲ್ ಫ್ಯಾಕ್ಟರಿಯನ್ನ ವ್ಯವಸ್ಥಿತವಾಗಿ ನಡೆಸುವುದಾಗಿ ಕೇಂದ್ರ ಭರವಸೆ ನೀಡಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಮಣದುರ್ಗದಲ್ಲಿ ಗಣಿ ನೀಡಿತ್ತು. ಆದರೆ ಕೇಂದ್ರ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಇಲ್ಲ. ಈತನಕ ಮೂರು ಜನ ಕೇಂದ್ರ ಮಂತ್ರಿಗಳು ಬಂದು ಒಬ್ಬರು 6,000ಕೋಟಿ ಅಂದರು, ಇನ್ನೊಬ್ರು 3000 ಕೋಟಿ ಅಂದರು. ಆದರೆ ಒಂದು ರೂಪಾಯಿ ಕೂಡ ಬಂದು ತಲುಪಿಲ್ಲ ಎಂದರು. ನಾನೀಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರ ಬಳಿ ಮಾತನಾಡಿದ್ದೇನೆ. ಕಾಂಗ್ರೆಸ್ಸಿನ ರಾಜ್ಯಸಭಾ ಸದಸ್ಯರು ಹಾಗೂ ಸಂಸದ ಡಿ.ಕೆ ಸುರೇಶ್ ಕರ್ಖಾನೆಯ ಗೇಟಿನ ಎದುರು ಪ್ರತಿಭಟನೆಗೆ ಹಾಜರಾಗಲಿದ್ದಾರೆ. ಸಂಸತ್ತಿನಲ್ಲಿ ಈ ವಿಷಯವನ್ನು ಎತ್ತುತ್ತೇವೆ ಎಂದು ಹೇಳಿದ್ದಾರೆ. ಈ ಕುರಿತಾಗಿ ಉಗ್ರ ಹೋರಾಟ ಕೂಡ ಮಾಡಲಿದ್ದೇವೆ. ಯಾವುದೇ ಕಾರಣಕ್ಕೂ ಕಾರ್ಖಾನೆ ಮುಚ್ಚುವುದಕ್ಕೆ ಬಿಡುವುದಿಲ್ಲ ಎಂದರು.
ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರವಾಸ ಕೈಗೊಂಡಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಜಿಲ್ಲೆಗೆ ಬಂದರೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ವಿಜಯಪುರ ಹೆಲಿಪ್ಯಾಡ್, ಜ್ಞಾನ ಯೋಗಾಶ್ರಮ, ನಾಗಠಾಣ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಅಭಿಯಾನ ಎಲ್ಲೂ ಕಾಣಿಸಿಕೊಂಡಿಲ್ಲ. ವಿಜಯಪುರದ ಸೈನಿಕ ಶಾಲೆ ಹೆಲಿಪ್ಯಾಡ್ ಯತ್ನಾಳ್ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುತ್ತದೆ. ಸಿಂಧಗಿ ಸಾರ್ವಜನಿಕ ಸಮಾವೇಶದಲ್ಲೂ ಯತ್ನಾಳ್ ಈವರಗೆ ಕಾಣಿಸಿಕೊಂಡಿಲ್ಲ. ಆದರೆ ಅವರು ವಿಜಯಪುರ ನಗರದಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪ ಇದ್ದಾರೆ ಎಂಬ ಕಾರಣಕ್ಕೆ ನಡ್ಡಾ ಭೇಟಿಯಿಂದ ಅಂತರ ಕಾಯ್ದುಕೊಂಡ್ರಾ? ಎಂಬ ಪ್ರಶ್ನೆಯೂ ಎದ್ದಿದೆ.
ಹಾವೇರಿ ಜಿಲ್ಲೆಯ ಹಾಲಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿದ ಬ್ಯಾಡಗಿ ಕ್ಷೇತ್ರದ ಶಾಸಕ ವಿರೂಪಾಕ್ಷ ಬಳ್ಳಾರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಜೆ ಮಾತಾಡಿರಬಹುದು. ಸಾಯಂಕಾಲ ವೇಳೆ ಡಿಕೆಶಿ ಡಬಲ್ ಆಗುತ್ತಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಆ ಪಕ್ಷಕ್ಕೆ ಯಾರು ಹೋಗ್ತಾರೆ ಎಂದು ಪ್ರಶ್ನಿಸಿದರು. ಈ ಹಿಂದೆ ಕಾಂಗ್ರೆಸ್ ನಾಯಕರು ಟಿಕೆಟ್ ಕೊಡುತ್ತೇವೆ ಎಂದು ಹೇಳಿದ್ದರು. ನಮ್ಮ ಮನೆ ಬಾಗಿಲಿಗೆ ಬಂದು ಟಿಕೆಟ್ ಕೊಡುತ್ತೇವೆ ಎಂದು ಹೇಳಿದ್ದರು. ಆ ಸಂದರ್ಭದಲ್ಲಿ ನಾನು ಕಾಂಗ್ರೆಸ್ಗೆ ಹೋಗಿಲ್ಲ ಎಂದರು. ಬಿಜೆಪಿಯ ಯಾವೊಬ್ಬ ಶಾಸಕ ಕೂಡ ಕಾಂಗ್ರೆಸ್ಗೆ ಹೋಗುವುದಿಲ್ಲ. ನನಗೆ ಟಿಕೆಟ್ ಕೊಡಲಿ ಬಿಡಲಿ ನಾನು ಬಿಜೆಪಿಯಲ್ಲೇ ಇರುತ್ತೇನೆ. ಪಕ್ಷ ಸೂಚಿಸುವ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. ಸುರೇಶ್ ಗೌಡ, ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪಕ್ಷ ಯಾರಿಗೆ ಟಿಕೆಟ್ ಕೊಡುತ್ತೋ ಅವರ ಪರ ಕೆಲಸ ಮಾಡುತ್ತೇನೆ ಎಂದು ಟಿವಿ9ಗೆ ವಿರೂಪಾಕ್ಷಪ್ಪ ಹೇಳಿದರು.
ವಿಮಾನ ತುರ್ತು ನಿರ್ಗಮನ ಬಾಗಿಲು ತೆರೆದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮೇಲೆ ಗಂಭೀರ ಆರೋಪ ಮಾಡಿರುವ ಕೆಪಿಸಿಸಿ ವಕ್ತಾರ ಶಂಕರ್ ಗುಹಾ, ಇದು ಮೂರು ಜನರ ಮೂರು ಕಥೆಗಳು. ಯಾವ ಅಮಲಿನಲ್ಲಿ ಡೋರ್ ತೆಗೆದರೋ ಗೊತ್ತಿಲ್ಲ. ತೇಜಸ್ವಿ ಸೂರ್ಯ ಡೋರ್ ತೆಗೆದರಂತೆ, ನಂತರ ಎಲ್ಲ ಪ್ರಯಾಣಿಕರ ಬಳಿ ಹೋಗಿ ಕ್ಷಮೆ ಕೇಳಿದರಂತೆ. ಅಣ್ಣಾ ಮಲೈ ಡೋರ್ ಓಪನ್ ಆಗಿತ್ತಂತೆ. ಅದನ್ನ ಮುಚ್ಚೋಕೆ ಹೋದರಂತೆ, ಪಾಪ ಪ್ರಯಾಣಿಕರನ್ನ ರಕ್ಷಣೆ ಮಾಡಿದರಂತೆ ಎಂದರು. ಅವರ ಕೂದಲು, ಸ್ಯಾಂಪಲ್ ಪಡೆದು ತನಿಖೆ ಮಾಡಲಿ. ಆಗ ಯಾವ ಅಮಲು ಅಂತ ಗೊತ್ತಾಗುತ್ತದೆ, ಅವರಿಗೆ ಅದಕ್ಕೆ ಭಯವೇಕೆ. ನಮಗೇನೋ ಅವರ ಅಮಲಿನ ಬಗ್ಗೆ ಶಂಕೆಯಿದೆ, ಹಾಗಾಗಿ ತನಿಖೆ ಮಾಡಲಿ ಗೊತ್ತಾಗುತ್ತೆ ಏನು ಅಂತ ಎಂದು ಹೇಳಿದರು.
ಬಿಜೆಪಿಯಿಂದ ಮುನಿಸಿಕೊಂಡು ಹೊರ ಬಂದು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಹೊಸ ರಾಜಕೀಯ ಪಕ್ಷ ಸ್ಥಾಪಿಸಿರುವ ಮಾಜಿ ಸಚಿವ, ಗಣಿ ಧಣಿ ಜಿ.ಜನಾರ್ದನ ರೆಡ್ಡಿ ಮನವೊಲಿಸಲು ಬಿಜೆಪಿ ನಾಯಕರು ಪ್ರಯತ್ನ ನಡೆಸಿವೆ. ಈ ವಿಚಾರವಾಗಿ ನಿನ್ನೆ (ಜ.20) ಬೆಂಗಳೂರಿನಲ್ಲಿ ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಜನಾರ್ದನ ರೆಡ್ಡಿಯನ್ನು ಪಕ್ಷಕ್ಕೆ ವಾಪಸ್ ಕರೆತರುವುದು ಸೂಕ್ತವೆಂದು ರಾಜ್ಯ ಬಿಜೆಪಿ ನಾಯಕರು ಬಿ.ಎಲ್.ಸಂತೋಷ್ ಎದುರು ಅಭಿಪ್ರಾಯ ತಿಳಿಸಿದ್ದಾರೆ.
ಈ ಬಗ್ಗೆ ಭೆಯಲ್ಲಿ ಮಾತನಾಡಿದ ಬಿ ಎಲ್ ಸಂತೋಷ್ ಜನಾರ್ದನ್ ರೆಡ್ಡಿಯನ್ನು ವಾಪಸ್ ಕರೆತರುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿ. ಜನಾರ್ದನ ರೆಡ್ಡಿ ಹಾಗೂ ಪಿ.ಚಿದಂಬರಂ ನಡುವೆ ಏನು ವ್ಯತ್ಯಾಸ ಇದೆ? ಪಿ.ಚಿದಂಬರಂ ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿಲ್ಲವೇ? ಗಂಗಾವತಿ ಕಳೆದುಕೊಳ್ಳುವ ಬದಲು ಸಿಂಧನೂರು ಬಿಡುವುದು ಸೂಕ್ತ. ಇಲ್ಲದಿದ್ದರೆ 3-4 ಜಿಲ್ಲೆಗಳಲ್ಲಿ ನಮ್ಮ ಪಕ್ಷಕ್ಕೆ ಸಮಸ್ಯೆ ಆಗುತ್ತೆ ಎಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿ ನಾವು 130 ರಿಂದ 150 ಸ್ಥಾನ ಗೆಲ್ಲುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರಾಜ್ಯದ ಜನ ಕಾಂಗ್ರೆಸ್ ಅಧಿಕಾರದಲ್ಲಿ ಆಗಿದ್ದ ಕೆಲಸಗಳ ಬಗ್ಗೆ ತಿಳಿದುಕೊಂಡಿದ್ದಾರೆ. ನಾವು ಹಿಂದೆ ಪ್ರಣಾಳಿಕೆಯಲ್ಲಿ ಹೇಳಿದ್ದ ಶೇಕಡ 99 ರಷ್ಟು ಕೆಲಸ ಮಾಡಿದ್ದೇವೆ. ಈ ಬಾರಿ 200 ಯುನಿಟ್ ಉಚಿತ ವಿದ್ಯುತ್, ಕುಟುಂಬ ಮುಖ್ಯಸ್ಥೆಗೆ ತಿಂಗಳಿಗೆ 2 ಸಾವಿರ ಹಣ ನೀಡುವುದಾಗಿ ಘೊಷಣೆ ಮಾಡಿದ್ದೇವೆ. ಇನ್ನೂ ಹಲವು ಘೋಷಣೆಗಳನ್ನು ಮಾಡಲಿದ್ದೇವೆ. ಇವುಗಳು ಚುನಾವಣೆಯಲ್ಲಿ ನಮ್ಮ ಕೈ ಹಿಡಿಯುತ್ತವೆ. ಯಾರು ಏನೇ ಹೇಳಿದರೂ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾರೇ ಬಂದರೂ ಕೋಲಾರ ಕ್ಷೇತ್ರದಲ್ಲಿ ನಾನೇ ಗೆಲ್ಲುತ್ತೇನೆ
ಯಾರೇ ಬಂದರೂ ಕೋಲಾರ ಕ್ಷೇತ್ರದಲ್ಲಿ ನಾನೇ ಗೆಲ್ಲುತ್ತೇನೆ. ಬಾದಾಮಿಯಲ್ಲೂ ನನ್ನನ್ನು ಸೋಲಿಸಲು ಕೇಂದ್ರ ಸಚಿವ ಅಮಿತ್ ಶಾ ಬಂದಿದ್ದರು. ಆಶೋಕ್ ಪಟ್ಟಣಶೆಟ್ಟಿ ಬದಲು ಶ್ರೀರಾಮುಲುರನ್ನು ಕಣಕ್ಕಿಳಿಸಿದರು. ಆದರೂ ಬಿಜೆಪಿಗೆ ನನ್ನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಬಾದಾಮಿ ಕ್ಷೇತ್ರದಲ್ಲಿ 2 ದಿನಗಳ ಕಾಲವಷ್ಟೇ ಪ್ರಚಾರ ಮಾಡಿದ್ದೆ. ದೂರ ಅನ್ನೋ ಕಾರಣಕ್ಕೆ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಬಾದಾಮಿ ಕ್ಷೇತ್ರದ ಜನರು ಹೆಲಿಕಾಪ್ಟರ್ ಕೊಡಿಸುತ್ತೇವೆ ಎಂದಿದ್ದರು. ಎಲ್ಲದಕ್ಕೂ ಹತ್ತಿರವಾಗುತ್ತದೆ ಎಂಬ ಕಾರಣಕ್ಕೆ ಕೋಲಾರದಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹೇಳಿದರು.
ರಾಜ್ಯ ಸರ್ಕಾರಕ್ಕೆ ಪ್ರಧಾನಿ ಮೋದಿ ಸರ್ಟಿಫಿಕೇಟ್ ಅನಗತ್ಯ
ರಾಜ್ಯ ಸರ್ಕಾರಕ್ಕೆ ಪ್ರಧಾನಿ ಮೋದಿ ಸರ್ಟಿಫಿಕೇಟ್ ಅನಗತ್ಯ. ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ಹಗರಣ ನಡೆದಿದ್ದು ಸುಳ್ಳಾ? ಪಿಎಸ್ಐ ಹಗರಣದಲ್ಲಿ ಎಡಿಜಿಪಿ ಜೈಲು ಸೇರಿರುವುದು ಸುಳ್ಳಾ? ಏನೂ ಆಗಿಲ್ಲ ಅಂದರೆ ಆತ ಇನ್ನೂ ಯಾಕೆ ಜೈಲಿನಲ್ಲಿ ಇದ್ದಾನೆ? ಎಂದು ಪ್ರಶ್ನಿಸಿದರು. ರಾಜ್ಯಕ್ಕೆ ಪದೇ ಪದೆ ಬಿಜೆಪಿ ಕೇಂದ್ರ ನಾಯಕರ ಭೇಟಿ ವಿಚಾರವಾಗಿ ಮಾತನಾಡಿದ ಅವರು ಯಾರೇ ಬಂದರೂ ಏನೂ ಪ್ರಯೋಜನ ಆಗಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾಗೂ ರಾಜ್ಯಕ್ಕೂ ಏನು ಸಂಬಂಧ? ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಯಾಕೆ ರಾಜ್ಯಕ್ಕೆ ಬರುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ಬೇರೆ ಸಭೆಗೆ ಹೋಗಿದ್ದರಿಂದ ನಿನ್ನೆ ಬಿಜೆಪಿ ಸಭೆಗೆ ನಾನು ಹೋಗಿಲ್ಲ. ನಿನ್ನೆ ಬಿಜೆಪಿ ಸಭೆಗೆ ಹೋಗದಿದ್ದಕ್ಕೆ ವಿಶೇಷ ಕಾರಣವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದರು. ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಡಿದ ಅವರು ಬಿಜೆಪಿ ನನಗೆ ಎಲ್ಲ ಸ್ಥಾನಮಾನವನ್ನು ನೀಡಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ನನ್ನನ್ನು ಗೌರವಯುತವಾಗಿ ಕಾಣುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಋಣಿಯಾಗಿದ್ದೇನೆ ಎಂದು ಹೇಳಿದರು.
ಬಿಜೆಪಿ ಅಧಿವೃದ್ಧಿ ಕೆಲಸ ಮಾಡಿಲ್ಲ ಎಂಬ ಕಾಂಗ್ರೆಸ್ಸಿಗರ ಆರೋಪವಿಚಾರವಾಗಿ ಮಾತನಾಡಿದ ಅವರು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯಗೆ ತಲೆ ಕೆಟ್ಟಿದೆ. ನಾವು ಮಾಡಿದ ಕಾರ್ಯಕ್ರಮಗಳನ್ನು ಜನ ಹಾಡಿ ಹೊಗಳುತ್ತಿದ್ದಾರೆ. ಅವರು ಒಳ್ಳೆ ಕೆಲಸ ಮಾಡಿದರೆ ಯಾಕೆ ಅಧಿಕಾರ ಕಳೆದುಕೊಂಡರು? ಹುಚ್ಚುಚ್ಚಾಗಿ ಮಾತಾಡೋದು ಡಿಕೆಶಿ, ಸಿದ್ದರಾಮಯ್ಯಗೆ ಶೋಭೆ ತರಲ್ಲ. ವಿರೋಧ ಪಕ್ಷದ ನಾಯಕರು ಜವಾಬ್ದಾರಿಯಿಂದ ವರ್ತಿಸಬೇಕು. ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಅನೇಕ ನಾಯಕರು ನಾವೇ ಸಿಎಂ ಅಂತಾ ತಿರುಕನ ಕನಸು ಕಾಣುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಯೇ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರಿನ ಶೆಟ್ಟಿಹಳ್ಳಿಯ ಖಾಸಾಗಿ ಕನ್ವೇಷನ್ ಹಾಲ್ನಲ್ಲಿ ಇಂದು (ಜ.21) ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವಾನತಿ ಶ್ರೀನಿವಾಸನ್ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಭಗವತ್ ಕೂಬಾ, ಬಿ.ಎಲ್.ಸಂತೋಷ್ ಸೇರಿ ಹಲವರು ಭಾಗಿಯಾಗಲಿದ್ದಾರೆ. 37 ರಾಜ್ಯದ ಮಹಿಳಾ ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಪಾಲ್ಗೊಳ್ಳುತ್ತಾರೆ.
ಸಭೆಯಲ್ಲಿ ಮಹಿಳೆಯರ ಕಾರ್ಯಕ್ರಮಗಳ ಬಗ್ಗೆ, ಮಹಿಳೆಯರ ಸಬಲೀಕರಣ ಹಾಗೂ ಸ್ವಾಲಂಭಿ ಬದುಕಿಗಾಗಿ ರೂಪಿಸಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಬಿಜೆಪಿ ಸರ್ಕಾರ ಮಹಿಳೆಯರಿಗಾಗಿ ಮಾಡಿರುವ ಕಾರ್ಯಕ್ರಮಗಳನ್ನು ಮನೆ ಮನೆಗೆ ಹೇಗೆ ತಲುಪಿಸಬೇಕು. ಮಹಿಳೆಯರ ಸುರಕ್ಷತೆಯ ಬಗ್ಗೆ ಬಿಜೆಪಿಯ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಹಾಗೂ ಹೊಸದಾಗಿ ಮಾಡಬೇಕಾದ ಕ್ರಮಗಳ ಬಗ್ಗೆ, ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದೆ ಮಹಿಳೆಯರ ಮನ ಗೆಲ್ಲೋದು ಹೇಗೆ? ಮಹಿಳಾ ಮೋರ್ಚಾ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಮಹಿಳೆಯರನ್ನ ಕರೆತರುವುದರ ಬಗ್ಗೆ ಚರ್ಚಿಸಲಾಗುವುದು. ಮಹಿಳೆಯರಿಗಾಗಿ ಇನ್ನು ಏನೆಲ್ಲ ಕಾರ್ಯಕ್ರಮಗಳನ್ನ ರೂಪಿಸಬೇಕು ಎಂಬುದರ ಬಗ್ಗೆ, ಹೀಗೆ ಹಲವು ವಿಷಯಗಳ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆಯಾಗಲಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 6ರಂದು ರಾಜ್ಯಕ್ಕೆ ಮತ್ತೆ ಭೇಟಿ ನೀಡಲಿದ್ದಾರೆ. ಧಾರವಾಡ ಮತ್ತು ತುಮಕೂರು ಜಿಲ್ಲೆಗೆ ಭೇಟಿ ನೀಡುವ ಮೋದಿ ಧಾರವಾಡದ ಐಐಟಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಂತರ ತುಮಕೂರು ಜಿಲ್ಲೆಯ ಗುಬ್ಬಿಗೆ ಭೇಟಿ ನೀಡಿ, ಗುಬ್ಬಿ ಬಳಿಯ ಹೆಚ್ಎಎಲ್ ಹೆಲಿಕಾಪ್ಟರ್ ಘಟಕ ಉದ್ಘಾಟಿಸಲಿದ್ದಾರೆ. ಪ್ರಧಾನಿ ಮೋದಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಗುವ ಹಿನ್ನೆಲೆ ಪಕ್ಷದ ವತಿಯಿಂದ ಜನರನ್ನು ಸೇರಿಸುವ ಬಗ್ಗೆ ಬಿಜೆಪಿ ರಾಜ್ಯ ನಾಯಕರಿಗೆ ಬಿ.ಎಲ್. ಸಂತೋಷ್ ಸೂಚನೆ ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ವರ್ಸಸ್ ಲಕ್ಷ್ಮೀ ಹೆಬ್ಬಾಳ್ಕರ್ ಫೈಟ್ ಜೋರಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ ಗ್ರಾಮದಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಸಮಾವೇಶ ನಡೆದಿದ್ದು, ಸಮಾವೇಶಕ್ಕೆ ಜನರನ್ನು ಕರೆತಂದ ವಾಹನ ಚಾಲಕರಿಗೆ ಬಹಿರಂಗವಾಗಿಯೇ ಹಣ ಹಂಚಲಾಗಿದೆ. ರಮೇಶ್ ಜಾರಕಿಹೋಳಿ ಬೆಂಬಲಿಗರು ಕೈಯಲ್ಲಿ ಬುಕ್ ಹಿಡಿದು ಪಟ್ಟಿ ಮಾಡಿ ಹಣ ಹಂಚಿದ್ದಾರೆ. ವಾಹನ ಚಾಲಕರಿಗೆ ಹಣ ನೀಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ರಮೇಶ್ ಜಾರಕಿಹೋಳಿ ಹಣ ನೀಡೋದಾಗಿ ಬಹಿರಂಗ ಘೋಷಣೆ ಮಾಡಿದ್ದಾರೆ. ಟಿಫಿನ್ ಬಾಕ್ಸ್, ಮಿಕ್ಸಿ ಸೇರಿ ಮತ್ತೊಂದು ಐಟಮ್ ನೀಡಬಹುದು ಎಲ್ಲಾ ಸೇರಿ 3 ಸಾವಿರ ರೂ. ಆಗಬಹುದು. ನಾವು 6 ಸಾವಿರ ರೂ. ನೀಡಿದರೇ ವೋಟ್ ಹಾಕಿ. ಅವರು ಖರ್ಚು ಮಾಡಿದ್ದಕ್ಕಿಂತ 10 ಕೋಟಿ ರೂ. ಹೆಚ್ಚು ಖರ್ಚು ಮಾಡುತ್ತೇನೆ ಎಂದಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಹರ್ಷಾ ಶುಗರ್ಸ್ ವತಿಯಿಂದ ಮಿಕ್ಸರ್, ಪಾತ್ರೆ ಹಂಚಿಕೆ
ಮತ್ತೊಂದೆಡೆ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಮಾವೇಶದ 2 ಕಿಮೀ ಅಂತರದಲ್ಲೇ ಮಿಕ್ಸರ್ ಹಂಚಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಹರ್ಷಾ ಶುಗರ್ಸ್ ವತಿಯಿಂದ ಮಿಕ್ಸರ್, ಪಾತ್ರೆ ಹಂಚಿಕೆ ಮಾಡಲಾಗಿದೆ. ಗ್ರಾಮೀಣ ಉತ್ಸವ ಹೆಸರಲ್ಲಿ ಮಿಕ್ಸರ್ ಮತ್ತು ಪಾತ್ರೆ ಹಂಚಲಾಗಿದೆ.
ರಾಜ್ಯ ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿದ್ರಾ ಎಂಬ ಚರ್ಚೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಬೆಂಗಳೂರಿನ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಿನ್ನೆ (ಜ.20) ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಡಿಯೂರಪ್ಪ ಗೈರಾಗಿದ್ದರು. ಈ ಹಿಂದೆ ಪ್ರಧಾನಿ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಪಾಲ್ಗೊಳ್ಳಬಹುದಾಗಿತ್ತು. ಆದರೆ ಸರ್ಕಾರಿ ಕಾರ್ಯಕ್ರಮ ಹಿನ್ನೆಲೆ ವೇದಿಕೆ ಮೇಲೆ ಬರಲು ಆಗುವುದಿಲ್ಲ ನಿಜ ಆದರೆ ಪ್ರಧಾನಿಯನ್ನು ಪ್ರತ್ಯೇಕವಾಗಿ ಮಾತನಾಡಿಸಲು ಬರಬಹುದಿತ್ತು? ಅಮಿತ್ ಶಾ ಭೇಟಿ ಸಂದರ್ಭದಲ್ಲೂ ಯಡಿಯೂರಪ್ಪ ಸಿಂಗಾಪುರಕ್ಕೆ ಹೋಗಿದ್ದರು. ಕೊಪ್ಪಳಕ್ಕೆ ಬಿಜೆಪಿ ಅಧ್ಯಕ್ಷ ನಡ್ಡಾ ಬಂದಾಗಲೂ ಗೊಂದಲ ಆಯಿತು. ಹೀಗೆ ಯಡಿಯೂರಪ್ಪ ಅನುಪಸ್ಥಿತಿ ಬಗ್ಗೆ ಬಿಜೆಪಿ ನಾಯಕರ ಮಧ್ಯೆ ಚರ್ಚೆಯಾಗುತ್ತಿದೆ.
ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿ ಇಂದು (ಜ.21) ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ಆಯೋಜನೆ ಮಾಡಲಾಗಿದೆ. ಮಧ್ಯಾಹ್ನ 3.30 ಕ್ಕೆ ಆರಂಭವಾಗಲಿರುವ ಪ್ರಜಾಧ್ವನಿ ಸಮಾವೇಶವು AICC ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ನೇತೃತ್ವದಲ್ಲಿ ನಡೆಯಲಿದೆ. ಪ್ರಜಾಧ್ವನಿ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಸಮಾವೇಶದಲ್ಲಿ 30 ಸಾವಿರ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಲಿದ್ದಾರೆ.
ಬಿಜೆಪಿ ಇಂದಿನಿಂದ (ಜ.21) 9 ದಿನ ರಾಜ್ಯದಲ್ಲಿ ಬೂತ್ ವಿಜಯ ಸಂಕಲ್ಪ ಅಭಿಯಾನ ನಡೆಸಲಿದೆ. ಈ ಹಿನ್ನೆಲೆ ಇಂದು ವಿಜಯಪುರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಿಂದಗಿಯಲ್ಲಿಬೂತ್ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಹಾಗೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಆರಂಭವಾಗುತ್ತಿದ್ದು, ನಾಗಠಾಣ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ, ಚಿಕ್ಕಬಳ್ಳಾಪುರ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ದಾವಣಗೆರೆಯಲ್ಲಿ ಕೇಂದ್ರ ಗಣಿ ಇಲಾಖೆಯ ಸಚಿವ ಪ್ರಹ್ಲಾದ್ ಜೋಶಿ, ದಾಬಸ್‌ಪೇಟೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಯನಗರ, ಬಿಟಿಎಂ ಲೇಔಟ್ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಸಹ ಉಸ್ತುವಾರಿ ಡಿ.ಕೆ.ಅರುಣಾ ಮಹಾಲಕ್ಷ್ಮೀ ಲೇಔಟ್ನಲ್ಲಿ ಚಾಲನೆ ನೀಡಲಿದ್ದಾರೆ.
Published On - Jan 21,2023 10:21 AM