AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kerala Exit Poll: ಕೇರಳಕ್ಕೆ ಬಿಜೆಪಿ ಗ್ರಾಂಡ್ ಎಂಟ್ರಿ; ಕಾಂಗ್ರೆಸ್ ನೇತೃತ್ವದ ಇಂಡಿಯ ಬಣಕ್ಕೆ 15-18 ಸ್ಥಾನ

ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) 2024ರಲ್ಲಿ ಮತ್ತೊಮ್ಮೆ ಕೇರಳದಲ್ಲಿ ಜಯಭೇರಿ ಬಾರಿಸಲು ಸಿದ್ಧವಾಗಿದೆ. ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ದಕ್ಷಿಣ ರಾಜ್ಯದಲ್ಲಿ ತನ್ನ ಖಾತೆಯನ್ನು ತೆರೆಯಲಿದೆ ಎಂದು ಎಕ್ಸಿಟ್ ಪೋಲ್‌ಗಳ ಸಮೀಕ್ಷೆ ತೋರಿಸುತ್ತದೆ.

Kerala Exit Poll: ಕೇರಳಕ್ಕೆ ಬಿಜೆಪಿ ಗ್ರಾಂಡ್ ಎಂಟ್ರಿ; ಕಾಂಗ್ರೆಸ್ ನೇತೃತ್ವದ ಇಂಡಿಯ ಬಣಕ್ಕೆ 15-18 ಸ್ಥಾನ
ಲೋಕಸಭೆ ಚುನಾವಣೆImage Credit source: istock
ಸುಷ್ಮಾ ಚಕ್ರೆ
|

Updated on: Jun 01, 2024 | 8:58 PM

Share

ಕಮ್ಯುನಿಸ್ಟ್​ ಪಕ್ಷದ ಪ್ರಾಬಲ್ಯವಿರುವ ಕೇರಳದಲ್ಲಿ (Kerala Lok Sabha Elections) ಇದುವರೆಗೂ ಬಿಜೆಪಿ ಒಂದೇ ಒಂದು ಲೋಕಸಭಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಕೇರಳದಲ್ಲಿ ಬಿಜೆಪಿ ಗೆಲ್ಲುವ ಸೂಚನೆಯನ್ನು ಎಕ್ಸಿಟ್ ಪೋಲ್ (Exit Poll) ನೀಡಿದೆ. ಭಾರತೀಯ ಜನತಾ ಪಕ್ಷ (BJP) ನೇತೃತ್ವದ ಎನ್‌ಡಿಎ ದಕ್ಷಿಣದ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದಲ್ಲಿ ಮೊದಲ ಬಾರಿಗೆ ಖಾತೆ ತೆರೆಯಲಿದೆ. ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ (NDA) 57-65 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಹಾಗೇ, ಇಂಡಿಯ (INDIA) ಬ್ಲಾಕ್ 59-66 ಸ್ಥಾನ ಗೆಲ್ಲುವ ಸಾಧ್ಯತೆಯಿದೆ.

ನ್ಯೂಸ್ 18 ಮೆಗಾ ಎಕ್ಸಿಟ್ ಪೋಲ್ ಪ್ರಕಾರ, 1-3 ಸ್ಥಾನಗಳನ್ನು ಪಡೆಯುವ ಮೂಲಕ ಎನ್‌ಡಿಎ ಕೇರಳದಲ್ಲಿ ತನ್ನ ಖಾತೆ ತೆರೆಯಲು ಸಜ್ಜಾಗಿದೆ. 2024 ರ ಲೋಕಸಭಾ ಚುನಾವಣೆಯು ಕೇರಳದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಎರಡಕ್ಕೂ ನಿರ್ಣಾಯಕವಾಗಿದೆ. 20 ಲೋಕಸಭಾ ಕ್ಷೇತ್ರಗಳು ಸ್ಪರ್ಧೆಯಲ್ಲಿದ್ದು, ಕೇರಳ ರಾಜ್ಯದಲ್ಲಿ ಏಪ್ರಿಲ್ 26 ರಂದು ಮತದಾನ ನಡೆದಿದೆ. ಈ ಬಾರಿ 70.35% ರಷ್ಟು ಮತದಾನವಾಗಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇರಳ ಕಾಂಗ್ರೆಸ್​ನ ಭದ್ರಕೋಟೆಯಾಗಿತ್ತು. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇರಳದಲ್ಲಿ ಬಹುಪಾಲು ಸ್ಥಾನಗಳನ್ನು ಪಡೆದುಕೊಂಡಿತ್ತು. ಆದರೆ, ಎನ್​ಡಿಎಗೆ ಒಂದೇ ಒಂದು ಸ್ಥಾನವೂ ಸಿಕ್ಕಿರಲಿಲ್ಲ. ಕೇರಳ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮತ್ತು ಸಿಪಿಐ(ಎಂ) ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಯುಡಿಎಫ್ ತನ್ನ 2019ರ ಸ್ಥಾನಗಳಷ್ಟೇ ಪಡೆಯಬಹುದೇ ಎಂದು ನಿರ್ಧರಿಸುವಲ್ಲಿ ಎನ್‌ಡಿಎ ಮತಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ಇದನ್ನೂ ಓದಿ: Exit Poll: ತಮಿಳುನಾಡಿನಲ್ಲಿ ಕೊನೆಗೂ ಬಿಜೆಪಿ ಖಾತೆ ಓಪನ್?; ಕೊಟ್ಟ ಕುದುರೆಯೇರಿ ಗೆದ್ದ ಅಣ್ಣಾಮಲೈ

ಒಟ್ಟು 5 ಎಕ್ಸಿಟ್ ಪೋಲ್‌ಗಳು ರಾಷ್ಟ್ರೀಯ ಮಟ್ಟದಲ್ಲಿ ಎನ್‌ಡಿಎ 365 ಸ್ಥಾನಗಳನ್ನು ಪಡೆಯಲಿದ್ದು, ವಿರೋಧ ಪಕ್ಷವಾದ ಇಂಡಿಯಾ ಬ್ಲಾಕ್ 142 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿವೆ.

ಕೇರಳದಲ್ಲಿ ಎಬಿಪಿ ನ್ಯೂಸ್-ಸಿ ವೋಟರ್ ಯುಡಿಎಫ್‌ಗೆ 17-19 ಸ್ಥಾನಗಳು ಮತ್ತು ಎನ್‌ಡಿಎಗೆ 1-3 ಸ್ಥಾನಗಳು ಸಿಗಬಹುದೆಂದು ಭವಿಷ್ಯ ನುಡಿದಿದೆ. ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್‌ಗೆ ಶೂನ್ಯ ಸ್ಥಾನಗಳು ದೊರೆಯಲಿದೆ ಎಂದು ಅದು ಭವಿಷ್ಯ ನುಡಿದಿದೆ. ಕೇರಳ ರಾಜ್ಯವು 20 ಲೋಕಸಭಾ ಸ್ಥಾನಗಳನ್ನು ಹೊಂದಿದೆ.

ಇಂಡಿಯಾ ನ್ಯೂಸ್- ಡಿ-ಡೈನಾಮಿಕ್ಸ್ ಯುಡಿಎಫ್‌ಗೆ 14 ಸ್ಥಾನಗಳು, ಆಡಳಿತಾರೂಢ ಎಲ್‌ಡಿಎಫ್‌ಗೆ 4 ಸ್ಥಾನಗಳು ಮತ್ತು ಎನ್‌ಡಿಎಗೆ 2 ಸ್ಥಾನಗಳೆಂದು ಭವಿಷ್ಯ ನುಡಿದಿದೆ.

ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ನಡೆಸಿದ ಸಮೀಕ್ಷೆಯು ಯುಡಿಎಫ್‌ಗೆ 17-18 ಸ್ಥಾನಗಳು, ಎಲ್‌ಡಿಎಫ್‌ಗೆ 0-1 ಸ್ಥಾನಗಳು ಮತ್ತು ಎನ್‌ಡಿಎಗೆ 2-3 ಸ್ಥಾನಗಳೆಂದು ಭವಿಷ್ಯ ನುಡಿದಿದೆ.

ಇದನ್ನೂ ಓದಿ: Karnataka Exit Poll Results: ಬಹುತೇಕ ಎಕ್ಸಿಟ್​ ಪೋಲ್​ಗಳು ಹೇಳೋದು ಒಂದೇ; ಕರ್ನಾಟಕದಲ್ಲಿ ಬಿಜೆಪಿಗೇ ಹೆಚ್ಚು ಸ್ಥಾನ

ಇಂಡಿಯಾ ಟಿವಿ-ಸಿಎನ್‌ಎಕ್ಸ್ ಯುಡಿಎಫ್‌ಗೆ 13-15 ಸ್ಥಾನಗಳು, ಎಲ್‌ಡಿಎಫ್‌ಗೆ 3-5 ಮತ್ತು ಎನ್‌ಡಿಎಗೆ 1-3 ಸೀಟುಗಳು ಬರಬಹುದು ಎಂದು ಹೇಳಿದೆ. ಯುಡಿಎಫ್‌ಗೆ 14-17 ಸ್ಥಾನಗಳು, ಎಲ್‌ಡಿಎಫ್‌ಗೆ 3-5 ಮತ್ತು ಎನ್‌ಡಿಎಗೆ 0-1 ಸ್ಥಾನಗಳು ಸಿಗುತ್ತವೆ ಎಂದು ಜನ್ ಕಿ ಬಾತ್‌ನ ಸಮೀಕ್ಷೆಯಲ್ಲಿ ಭವಿಷ್ಯ ನುಡಿದಿವೆ.

ಟೈಮ್ಸ್ ನೌ-ಇಟಿಜಿ ಯುಡಿಎಫ್‌ಗೆ 14-15 ಸ್ಥಾನಗಳು, ಎಲ್‌ಡಿಎಫ್‌ಗೆ 4 ಸ್ಥಾನಗಳು ಮತ್ತು ಎನ್‌ಡಿಎಗೆ 1 ಸ್ಥಾನಗಳೆಂದು ಭವಿಷ್ಯ ನುಡಿದಿದೆ.

ಕೇರಳದಲ್ಲಿ ಚುನಾವಣಾ ಕಣದಲ್ಲಿದ್ದ ಪ್ರಮುಖ ಅಭ್ಯರ್ಥಿಗಳೆಂದರೆ ಕಾಂಗ್ರೆಸ್‌ನ ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್, ಶಶಿ ತರೂರ್, ಕೆ. ಮುರಳೀಧರನ್ ಮತ್ತು ಕೆ. ಸುಧಾಕರನ್; ಸಿಪಿಐ(ಎಂ)ನ ಎಳಮರಮ್ ಕರೀಂ, ಕೆಕೆ ಶೈಲಜಾ, ಸಿ ರವೀಂದ್ರನಾಥ್ ಮತ್ತು ಎಂವಿ ಜಯರಾಜನ್; ಮತ್ತು ಕೆ ಸುರೇಂದ್ರನ್, ಸುರೇಶ್ ಗೋಪಿ, ವಿ ಮುರಳೀಧರನ್ ಮತ್ತು ರಾಜೀವ್ ಚಂದ್ರಶೇಖರ್.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ