Lok Sabha Elections: ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ನನ್ನ ಆಯ್ಕೆ; ಮಲ್ಲಿಕಾರ್ಜುನ ಖರ್ಗೆ

|

Updated on: May 31, 2024 | 4:36 PM

ಇಂಡಿಯ ಒಕ್ಕೂಟದಿಂದ ಪ್ರಧಾನಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುರಿತು ಬಿಜೆಪಿ ಮತ್ತು ಇತರೆ ಬಲಪಂಥೀಯ ಪಕ್ಷಗಳು ಪ್ರಶ್ನೆ ಮಾಡುತ್ತಲೇ ಇವೆ. ಇದಕ್ಕೆ ಕಳೆದ ವಾರ ಉತ್ತರಿಸಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ಚುನಾವಣೆಯಲ್ಲಿ ಇಂಡಿಯ ಒಕ್ಕೂಟ ಗೆದ್ದ ನಂತರ ಎಲ್ಲರೂ ಒಟ್ಟಿಗೇ ಕುಳಿತು, ಚರ್ಚಿಸಿ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದಿದ್ದರು.

Lok Sabha Elections: ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ನನ್ನ ಆಯ್ಕೆ; ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Follow us on

ನವದೆಹಲಿ: ಇಂಡಿಯ (INDIA) ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರು? ಎಂಬ ಪ್ರಶ್ನೆಗೆ ಆ ಬಣದ ಯಾರೂ ಖಚಿತವಾಗಿ ಉತ್ತರ ನೀಡಿರಲಿಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕೂಡ ಇದಕ್ಕೆ ಸ್ಪಷ್ಟ ಉತ್ತರ ನೀಡಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ (Lok Sabha Elections 2024) ಇಂಡಿಯ ಒಕ್ಕೂಟ ಗೆದ್ದರೆ ಆ ನಂತರ ಪ್ರಧಾನಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುವುದು ಎಂದು ಅವರು ಹೇಳಿದ್ದರು. ಆದರೆ, ಇದೀಗ ಆ ಪ್ರಶ್ನೆಗೆ ಉತ್ತರಿಸಿರುವ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ (Rahul Gandhi) ನನ್ನ ಆಯ್ಕೆ ಎಂದಿದ್ದಾರೆ.

ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದರೆ ಕಾಂಗ್ರೆಸ್ ಪಕ್ಷದ ನೇತೃತ್ವದ ಇಂಡಿಯ ಬಣದಿಂದ ದೇಶದ ಪ್ರಧಾನಿಯಾಗಿ ರಾಹುಲ್ ಗಾಂಧಿ ಅವರ ಆಯ್ಕೆಗೆ ನನ್ನ ಬೆಂಬಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಗಾಂಧಿ ಕುಟುಂಬದ ಆಪ್ತರಾಗಿರುವ ಮಲ್ಲಿಕಾರ್ಜುನ ಖರ್ಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಸತತ 5 ಗೆಲುವಿನ ನಂತರ ಸೋನಿಯಾ ಗಾಂಧಿ ಅವರಿಂದ ತೆರವಾದ ರಾಯ್​ಬರೇಲಿಯ ಸ್ಪರ್ಧೆಯ ಬಗ್ಗೆ ಚರ್ಚೆ ನಡೆದಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೊನೆಕ್ಷಣದಲ್ಲಿ ಚುನಾವಣೆಯಿಂದ ಹೊರಗುಳಿದಿದ್ದರು. ಅವರ ಬದಲಾಗಿ ಅವರ ಸಹೋದರ ರಾಹುಲ್ ಗಾಂಧಿ ರಾಯ್​ಬರೇಲಿಯಿಂದ ಸ್ಪರ್ಧಿಸಿದ್ದರು. ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.

ಇದನ್ನೂ ಓದಿ: Mamata Banerjee: ಚುನಾವಣೆ ಪ್ರಚಾರದ ವೇಳೆ ಸಿಎಂ ಮಮತಾ ಬ್ಯಾನರ್ಜಿ ಡ್ಯಾನ್ಸ್; ವಿಡಿಯೋ ವೈರಲ್

ಎನ್‌ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಈ ಲೋಕಸಭೆ ಚುನಾವಣೆಗೂ ಮೊದಲು ಎರಡು ‘ಭಾರತ್ ಜೋಡೋ ಯಾತ್ರೆ’ಗಳನ್ನು ಮುನ್ನಡೆಸಿದ್ದರು. ದೇಶಾದ್ಯಂತ ವ್ಯಾಪಕವಾಗಿ ಪ್ರಚಾರ ಮಾಡಿದ್ದರು. ಯಾವುದೇ ಹಿಂಜರಿಕೆಯಿಲ್ಲದೆ ಪ್ರಧಾನಿ ಮೋದಿ ವಿರುದ್ಧ ನೇರ ದಾಳಿಯನ್ನು ಮಾಡುವ ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೆ ಅತ್ಯುತ್ತಮ ಆಯ್ಕೆಯಾಗುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

“ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬೇಕೆಂಬುದು ನನ್ನ ಆಯ್ಕೆ. ಅವರು ಯುವಕರನ್ನು ಪ್ರತಿನಿಧಿಸುತ್ತಾರೆ ಮತ್ತು ದೇಶದ ಉದ್ದ ಮತ್ತು ಅಗಲವನ್ನು ಪ್ರತಿನಿಧಿಸುತ್ತಾರೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ರಾಹುಲ್ ಗಾಂಧಿಯನ್ನು ಅನೇಕರು ಪ್ರಧಾನಿ ಹುದ್ದೆಗೆ ಒಮ್ಮತದ ಅಭ್ಯರ್ಥಿಯಾಗಿ ನೋಡುತ್ತಾರೆ. “ನಾವು ಒಟ್ಟಾಗಿ ಹೋರಾಡುತ್ತೇವೆ ಎಂದು ಇಂಡಿಯ ಬಣದವರಾದ ನಾವು ನಿರ್ಧರಿಸಿದ್ದದೇವೆ. ಈ ಬಣ ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿ ಯಾರು ಎಂದು ಜಂಟಿಯಾಗಿ ನಿರ್ಧರಿಸಲಾಗುತ್ತದೆ.” ಎಂದು ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: Elections 2024: ಚುನಾವಣೆಯಲ್ಲಿ ಇಂಡಿಯಾ ಬಣ ಗೆದ್ದರೆ ಪ್ರಧಾನಿ ಹೆಸರನ್ನು ನಿರ್ಧರಿಸುತ್ತೇವೆ; ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

ಕಳೆದ ವಾರವಷ್ಟೇ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದರು. “ಇದು ‘ಕೌನ್ ಬನೇಗಾ ಕೋಟ್ಯಧಿಪತಿ (ಕೋಟ್ಯಧಿಪತಿ ಯಾರಾಗಲಿದ್ದಾರೆ?)’ ಎಂದು ಕೇಳುವಂತಿದೆ ಎಂದು ಹಾಸ್ಯಮಯವಾಗಿ ಉತ್ತರಿಸಿದ್ದರು.

ಇಂಡಿಯ ಬಣದಿಂದ ಪ್ರಧಾನಮಂತ್ರಿ ಅಭ್ಯರ್ಥಿ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ, ನಿತೀಶ್ ಕುಮಾರ್, ಅರವಿಂದ್ ಕೇಜ್ರಿವಾಲ್ ಹೆಸರು ಕೂಡ ಹರಿದಾಡಿತ್ತು. ಕೊನೆಗೆ ಮಮತಾ ಬ್ಯಾನರ್ಜಿ ಹೆಸರು ಕೂಡ ಕೇಳಿಬಂದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ