ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿ ಅವರ ಸಂಬಂಧಿಯೊಬ್ಬರ ಮೇಲೆ ಇಂದು ಮುಂಜಾನೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ದಾಳಿ ಮಾಡಿದ್ದಾರೆ. ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಡಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಮೊಹಾಲಿ ಸೇರಿ ಪಂಜಾಬ್ನ ಸುಮಾರು 10-12 ಸ್ಥಳಗಳಲ್ಲಿ ಇಡಿ ದಾಳಿಯಾಗಿದೆ. ಅದರಲ್ಲಿ ಛನ್ನಿ ಸಂಬಂಧಿಗಳಿಗೆ ಸೇರಿದ ಸ್ಥಳವೂ ಸಿಕ್ಕಿದೆ. ಅಂದಹಾಗೆ, ಅಕ್ರಮ ಮರಳು ಗಣಿಗಾರಿಕೆ ಆರೋಪ ಹೊತ್ತಿರುವವರ ಹೆಸರು ಭೂಪಿಂದರ್ ಸಿಂಗ್ ಹನಿ ಎಂದಾಗಿದ್ದು, ಪಂಜಾಬ್ ಮುಖ್ಯಮಂತ್ರಿಮಂತ್ರಿಯ ಸೋದರಳಿಯನೇ ಆಗಿದ್ದಾರೆ ಎಂದೂ ಹೇಳಲಾಗಿದೆ. ಪಂಜಾಬ್ನಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಪಟ್ಟಂತೆ ಅಕ್ರಮ ಹಣವರ್ಗಾವಣೆಯಲ್ಲಿ ಭಾಗಿಯಾಗಿರುವ ಕಂಪನಿಗಳ ವಿರುದ್ಧ ಇ.ಡಿ.ತನಿಖೆ ನಡೆಸುತ್ತಿದೆ. ಈ ಭಾಗವಾಗಿ ದಾಳಿಗಳನ್ನು ನಡೆಸುತ್ತಿದ್ದು, ಇದರಲ್ಲಿ ಪಂಜಾಬ್ ಸಿಎಂ ಸೋದರಳಿಯನ ಹೆಸರೂ ಕೇಳಿಬರುತ್ತಿದೆ.
ಪಂಜಾಬ್ನಲ್ಲಿ ಫೆ.20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿಂದೆ ಫೆ.14ರಂದು ಮತದಾನ ಎಂದು ಚುನಾವಣಾ ಆಯೋಗ ಹೇಳಿತ್ತು. ಆದರೆ ಗುರು ರವಿದಾಸರ ಜಯಂತಿ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿ ಮತ್ತು ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಅದನ್ನು ಪುರಸ್ಕರಿಸಿದ ಇಲೆಕ್ಷನ್ ಕಮಿಷನ್ ನಿನ್ನೆ ಮತ್ತೊಮ್ಮೆ ಹೊಸತಾದ ಪ್ರಕಟಣೆ ಹೊರಡಿಸಿದೆ. ಅದರಂತೆ ಪಂಜಾಬ್ ಚುನಾವಣೆ ಫೆ.20ರಂದು ನಡೆಯಲಿದ್ದು, ಮತ ಎಣಿಕೆ ಮಾರ್ಚ್ 10ಕ್ಕೆ ನಡೆಯಲಿದೆ.
ಯಾವುದೇ ಚುನಾವಣೆ ಬಂದಾಗಲೂ ಕೇಂದ್ರ ಬಿಜೆಪಿ ಸರ್ಕಾರ ತನಿಖಾ ದಳಗಳನ್ನು ಮುಂದೆಬಿಟ್ಟು ಪ್ರತಿಪಕ್ಷಗಳ ಮೇಲೆ ದಾಳಿ ನಡೆಸುತ್ತದೆ ಎಂಬ ಆರೋಪವನ್ನು ವಿರೋಧ ಪಕ್ಷಗಳು ಹಲವು ಸಾರಿ ಮಾಡಿವೆ. ಇದೀಗ ಪಂಜಾಬ್ನಲ್ಲಿ ನಡೆದ ಇ.ಡಿ.ದಾಳಿಯನ್ನೂ ಕೆಲವರು ಅದಕ್ಕೇ ತಳುಕು ಹಾಕಿ ಮಾತನಾಡುತ್ತಿದ್ದಾರೆ. ಆದರೆ ಪಂಜಾಬ್ನಲ್ಲಿ ಅಕ್ರಮ ಮರಳು ಗಣಿಗಾರಿಕೆ ಹೆಚ್ಚುತ್ತಿರುವ ಬಗ್ಗೆ ಆಮ್ ಆದ್ಮಿ ಪಕ್ಷ ಕೂಡ ಧ್ವನಿ ಎತ್ತಿತ್ತು ಪಂಜಾಬ್ನಲ್ಲಿ ಅದರಲ್ಲೂ ಮುಖ್ಯಮಂತ್ರಿ ಛನ್ನಿ ಅವರ ಸ್ವಕ್ಷೇತ್ರ ಚಮಕೌರ್ ಸಾಹಿಬ್ನಲ್ಲಿಯೇ ಅಕ್ರಮ ಮರಳು ಗಣಿಗಾರಿಕೆ ಜಾಸ್ತಿಯಾಗುತ್ತಿದೆ ಎಂದು ಆರೋಪಿಸಿತ್ತು.
ಇದನ್ನೂ ಓದಿ: Theatre : ಗಂಡುಹೆಣ್ಣುಗಳ ನಡುವಿನ ಅಭೀಪ್ಸೆಯ ತೊಳಲಾಟದ ‘ಚದುರಂಗ ಮತ್ತು ಕತ್ತೆ’ ನಾಳೆ ರಂಗಶಂಕರದಲ್ಲಿ