UP Election 2022 ನಾಳೆ 4ನೇ ಹಂತದಲ್ಲಿ 59 ಕ್ಷೇತ್ರಗಳಿಗೆ ಮತದಾನ; ಪ್ರಮುಖ ವಿಧಾನಸಭಾ ಕ್ಷೇತ್ರಗಳಿವು
ನಾಲ್ಕನೇ ಹಂತದ ಪ್ರಚಾರ ಸೋಮವಾರ ಅಂತ್ಯಗೊಂಡಿದೆ. ಈ ಹಂತದಲ್ಲಿ ಒಟ್ಟು 624 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಯವರೆಗೆ ನಡೆಯಲಿದೆ
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ(UP Election 2022) ನಾಲ್ಕನೇ ಹಂತದ 59 ಕ್ಷೇತ್ರಗಳಲ್ಲಿ ಬುಧವಾರ ಮತದಾನ ನಡೆಯಲಿದೆ. ನಾಲ್ಕನೇ ಹಂತದಲ್ಲಿ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ನಾಲ್ಕನೇ ಹಂತದ ಪ್ರಚಾರ ಸೋಮವಾರ ಅಂತ್ಯಗೊಂಡಿದೆ. ಈ ಹಂತದಲ್ಲಿ ಒಟ್ಟು 624 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಯವರೆಗೆ ನಡೆಯಲಿದೆ. 2017 ರ ವಿಧಾನಸಭಾ ಚುನಾವಣೆಯಲ್ಲಿ, 59 ಸ್ಥಾನಗಳಲ್ಲಿ ಬಿಜೆಪಿ 51 ಸ್ಥಾನಗಳನ್ನು ಗೆದ್ದಿತ್ತು, ಸಮಾಜವಾದಿ ಪಕ್ಷ (SP) ನಾಲ್ಕು ಸ್ಥಾನಗಳನ್ನು ಗಳಿಸಿತ್ತು, ಆದರೆ ಬಹುಜನ ಸಮಾಜ ಪಕ್ಷ (BSP) ಮೂರು ಸ್ಥಾನಗಳನ್ನು ಗಳಿಸಿತ್ತು. ಬಿಜೆಪಿಯ ಮಿತ್ರ ಪಕ್ಷವಾದ ಅಪ್ನಾ ದಳ (ಸೋನೆಲಾಲ್) ಒಂದು ಸ್ಥಾನವನ್ನು ಪಡೆದುಕೊಂಡಿತ್ತು. ನಾಲ್ಕನೇ ಹಂತದಲ್ಲಿ ನಡೆಯಲಿರುವ ಒಂಬತ್ತು ಜಿಲ್ಲೆಗಳೆಂದರೆ ಪಿಲಿಭಿತ್, ಲಖಿಂಪುರ ಖೇರಿ, ಸೀತಾಪುರ್, ಹರ್ದೋಯ್, ಉನ್ನಾವೋ, ಲಖನೌ, ರಾಯ್ ಬರೇಲಿ, ಬಂದಾ ಮತ್ತು ಫತೇಪುರ್. ಪ್ರಮುಖ ಕ್ಷೇತ್ರಗಳು ಲಖಿಂಪುರ ಖೇರಿ: ಅಕ್ಟೋಬರ್ 3 ರಂದು ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಲಖೀಂಪುರ ಖೇರಿ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತ್ತು. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ನಂತರ ಬಿಜೆಪಿಯನ್ನು ಹೊಣೆಗಾರರನ್ನಾಗಿ ಮಾಡಲು ಪ್ರತಿಪಕ್ಷಗಳು ಪ್ರಯತ್ನಿಸಿದವು. ಮಿಶ್ರಾ ಅವರನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಹೆಸರಿಸಲಾಗಿತ್ತು. ಅಲಹಾಬಾದ್ ಹೈಕೋರ್ಟಿನಿಂದ 3ನೇ ಹಂತದ ಚುನಾವಣೆಗೆ ಮುನ್ನ ಕಳೆದ ವಾರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.ಈ ಕ್ಷೇತ್ರದಲ್ಲಿ ಬಿಜೆಪಿಯ ಯೋಗೇಶ್ ವರ್ಮಾ ಅವರು ತಮ್ಮ ಪ್ರತಿಸ್ಪರ್ಧಿ ಎಸ್‌ಪಿ ಉತ್ಕರ್ಷ್ ವರ್ಮಾ ಮಧುರ್ ವಿರುದ್ಧ ಸೆಣಸಲಿದ್ದಾರೆ. 2017ರಲ್ಲಿ ವರ್ಮಾ ವಿರುದ್ಧ ಮಧುರ್ 37,000 ಮತಗಳ ಅಂತರದಿಂದ ಸೋತಿದ್ದರು.
ಲಖನೌ ಕಂಟೋನ್ಮೆಂಟ್: ಈ ಕ್ಷೇತ್ರದಲ್ಲಿ ಬ್ರಿಜೇಶ್ ಪಾಠಕ್, ಎಸ್‌ಪಿಯ ಎರಡು ಬಾರಿ ಕಾರ್ಪೊರೇಟರ್ ಸುರೇಂದ್ರ ಸಿಂಗ್ ಗಾಂಧಿ, ಕಾಂಗ್ರೆಸ್‌ನ ದಿಲ್‌ಪ್ರೀತ್ ಸಿಂಗ್ ವಿರ್ಕ್ ಮತ್ತು ಬಿಎಸ್‌ಪಿಯ ಅನಿಲ್ ಪಾಂಡೆ ನಡುವೆ ಹಣಾಹಣಿ ಇದೆ. 2017 ರಲ್ಲಿ ಬಿಜೆಪಿಯ ರೀಟಾ ಬಹುಗುಣ ಜೋಶಿ ಅವರು ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರನ್ನು ಸೋಲಿಸಿ ಸ್ಥಾನವನ್ನು ಗೆದ್ದರು. ಅಪರ್ಣಾ ಯಾದವ್ ಈಗ ಬಿಜೆಪಿ ಸೇರಿರುವುದು ಕುತೂಹಲ ಮೂಡಿಸಿದೆ. ಜೋಶಿ ಅವರು 2019 ರಲ್ಲಿ ಲೋಕಸಭೆಯ ಸಂಸದರಾಗಿ ಆಯ್ಕೆಯಾದ ನಂತರ ರಾಜೀನಾಮೆ ನೀಡಬೇಕಾಯಿತು. ಈ ಸ್ಥಾನಕ್ಕೆ ಯಾದವ್ ಕಣ್ಣಿಟ್ಟಿದ್ದಾಗ, ಪಕ್ಷವು ಪಾಠಕ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿತು. ಅವರು 2017 ರಲ್ಲಿ ಲಖನೌ ಸೆಂಟ್ರಲ್ ಸ್ಥಾನವನ್ನು ಗೆದ್ದಿದ್ದರು. ಮತ್ತೋರ್ವ ಸಚಿವ ಅಶುತೋಷ್ ಟಂಡನ್ ಅವರು ಲಕ್ನೋ ಪೂರ್ವ ಕ್ಷೇತ್ರದಿಂದ ಕಣದಲ್ಲಿದ್ದು, ಎಸ್‌ಪಿಯ ರಾಷ್ಟ್ರೀಯ ವಕ್ತಾರ ಅನುರಾಗ್ ಬದೌರಿಯಾ ಅವರಿಗೆ ಸವಾಲೊಡ್ಡಿದ್ದಾರೆ.
ಸರೋಜಿನಿ ನಗರ: ಈ ಕ್ಷೇತ್ರದಲ್ಲಿ ಮಾಜಿ ಇಡಿ ಅಧಿಕಾರಿ ಹಾಗೂ ಎಸ್‌ಪಿ ಸಚಿವರ ನಡುವೆ ಹಣಾಹಣಿ ಏರ್ಪಟ್ಟಿದೆ. ಸಮಾಜವಾದಿ ಪಕ್ಷದ ಸರ್ಕಾರದಲ್ಲಿ ಸಚಿವರಾಗಿದ್ದ ಅಭಿಷೇಕ್ ಮಿಶ್ರಾ ವಿರುದ್ಧ ಬಿಜೆಪಿ ಮಾಜಿ ಇಡಿ ಅಧಿಕಾರಿ ರಾಜೇಶ್ವರ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ. 2017ರಲ್ಲಿ ಈ ಕ್ಷೇತ್ರವನ್ನು ಸ್ವಾತಿ ಸಿಂಗ್ ಗೆದ್ದಿದ್ದರು. ಇವರಿಬ್ಬರು ಕಾಂಗ್ರೆಸ್‌ನ ರುದ್ರ ದಮನ್ ಸಿಂಗ್ ಮತ್ತು ಬಿಎಸ್‌ಪಿಯ ಜಲೀಸ್ ಖಾನ್ ಅವರನ್ನೂ ಎದುರಿಸಲಿದ್ದಾರೆ.
ರಾಯ್ ಬರೇಲಿ: ಕಾಂಗ್ರೆಸ್ ನ ಭದ್ರಕೋಟೆಯಲ್ಲಿ ಬಿಜೆಪಿಯ ಅದಿತಿ ಸಿಂಗ್ ಮತ್ತು ಕಾಂಗ್ರೆಸ್ ನ ಮನೀಶ್ ಚೌಹಾಣ್ ನಡುವೆ ಹಣಾಹಣಿ ನಡೆಯಲಿದೆ. ಸಿಂಗ್ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದರು. ಬಿಜೆಪಿಗೆ ಸೇರ್ಪಡೆಯಾದ ನಂತರ, ಸಿಂಗ್ ಅವರು “ನಾನು ರಾಜಕೀಯದಲ್ಲಿ ಇರುವವರೆಗೂ ಅದೇ ಕ್ಷೇತ್ರದಿಂದ (ರಾಯಬರೇಲಿ) ಸ್ಪರ್ಧಿಸುವುದು ನನ್ನ ಪ್ರಯತ್ನವಾಗಿದೆ, ಆದರೆ, ನಾನು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧಳಾಗಿರುತ್ತೇನೆ . ಅದು ಅತ್ಯಂತ ಮುಖ್ಯ ಎಂದು ಹೇಳಿದ್ದಾರೆ.
“ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾರನ್ನು ತನ್ನ ಕಠಿಣ ಪರಿಶ್ರಮದಿಂದ ಎದುರಿಸುತ್ತೇನೆ” ಎಂದು ಪ್ರತಿಪಾದಿಸಿದ ಸಿಂಗ್, “ಅಭಿವೃದ್ಧಿ ನನಗೆ ಮುಖ್ಯ ವಿಷಯವಾಗಿದೆ ಮತ್ತು ಅದು ಹಾಗೆಯೇ ಉಳಿಯುತ್ತದೆ” ಎಂದು ಹೇಳಿದರು. ಅದಿತಿ ಸಿಂಗ್ ದಿವಂಗತ ಕಾಂಗ್ರೆಸ್ ನಾಯಕ ಅಖಿಲೇಶ್ ಕುಮಾರ್ ಸಿಂಗ್ ಅವರ ಪುತ್ರಿ. ಅವರು 2012 ರವರೆಗೆ ರಾಯ್ ಬರೇಲಿಯನ್ನು ಪ್ರತಿನಿಧಿಸಿದ್ದರು.
ಸೋಮವಾರ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕ್ಷೇತ್ರವಾದ ರಾಯಬರೇಲಿಗೆ ಬಿಜೆಪಿ “ಮಲತಾಯಿ” ಧೋರಣೆ ತೋರಿಸುತ್ತಿದೆ ಎಂದು ಹೇಳಿದ್ದಾರೆ. “ಇದು ಒಂದು ಪ್ರಮುಖ ಚುನಾವಣೆಯಾಗಲಿದೆ. ಏಕೆಂದರೆ ಕಳೆದ ಐದು ವರ್ಷಗಳಿಂದ ಜನರನ್ನು ವಿಭಜಿಸುವುದನ್ನು ಹೊರತುಪಡಿಸಿ ಏನನ್ನೂ ಮಾಡದ ಸರ್ಕಾರವನ್ನು ನೀವು ನೋಡಿದ್ದೀರಿ” ಎಂದು ನಾಲ್ಕನೇ ಹಂತದ ಪ್ರಚಾರದ ಕೊನೆಯ ದಿನದಂದು ವರ್ಚುವಲ್ ಭಾಷಣದಲ್ಲಿ ಗಾಂಧಿ ಹೇಳಿದರು. ಸೋನಿಯಾ ಗಾಂಧಿ ರಾಯ್ ಬರೇಲಿಗೆ ಲೋಕಸಭಾ ಸಂಸದರಾಗಿದ್ದಾರೆ. “ನಾವು ನಿಮಗಾಗಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ತಂದಿದ್ದೇವೆ ಆದರೆ ಮೋದಿ-ಯೋಗಿ ಸರ್ಕಾರವು ಅವೆಲ್ಲವನ್ನೂ ನಿಷೇಧಿಸಿತು. ರಾಯ್ ಬರೇಲಿಯನ್ನು ಮಲತಾಯಿ ಧೋರಣೆಯಲ್ಲಿ ವ್ಯವಹರಿಸಲಾಗುತ್ತಿದೆ ” ಎಂದು ಗಾಂಧಿ ಹೇಳಿದರು.
ಹರ್ದೋಯಿ: ಎಸ್‌ಪಿಯಿಂದ ಬಿಜೆಪಿಗೆ ಕಾಲಿಟ್ಟಿರುವ ಉತ್ತರ ಪ್ರದೇಶ ವಿಧಾನಸಭೆಯ ಮಾಜಿ ಉಪಸಭಾಪತಿ ನಿತಿನ್ ಅಗರ್ವಾಲ್ ಅವರು ಎಸ್‌ಪಿ ಅಭ್ಯರ್ಥಿ ಅನಿಲ್ ವರ್ಮಾ ವಿರುದ್ಧ ಸೆಣಸಲಿದ್ದಾರೆ. ಅಗರ್ವಾಲ್ ಅವರ ಕುಟುಂಬವು ಸುಮಾರು ನಾಲ್ಕು ದಶಕಗಳಿಂದ ಹರ್ದೋಯ್ ಸ್ಥಾನವನ್ನು ಹೊಂದಿದೆ. ಈ ಹಿಂದೆ ನರೇಶ್ ಅಗರವಾಲ್ ಅವರಿಂದ ಸ್ಥಾನ ಪಡೆದ ನಂತರ, ಈಗ ಈ ಸ್ಥಾನವು ಅವರ ಮಗ ನಿತಿನ್ ಅವರದ್ದಾಗಿದೆ, ಅವರು ಎರಡು ಬಾರಿ ಸ್ಥಾನವನ್ನು ಗೆದ್ದಿದ್ದಾರೆ.
2017 ರಲ್ಲಿ ನಿತಿನ್ ಎಸ್‌ಪಿ ಅಭ್ಯರ್ಥಿಯಾಗಿ ಗೆದ್ದಿದ್ದರು.ಅವರು ಅಖಿಲೇಶ್ ಯಾದವ್ ಸರ್ಕಾರದಲ್ಲಿ ಸಚಿವರೂ ಆಗಿದ್ದರು.ಅಗರ್ವಾಲ್ ಅವರು ತಮ್ಮ ಉಪಸಭಾಪತಿ ಸ್ಥಾನವನ್ನು ತ್ಯಜಿಸಿದರು ಮತ್ತು ಜನವರಿ 19, 2022 ರಂದು ಪಕ್ಷಕ್ಕೆ ರಾಜೀನಾಮೆ ನೀಡಿದರು.
ಇದನ್ನೂ ಓದಿ: UP Assembly Elections 2022: ಲಕ್ಷ್ಮಿ ದೇವತೆ ಆನೆ, ಸೈಕಲ್ ಮೇಲೆ ಯಾರ ಮನೆಗೂ ಬರುವುದಿಲ್ಲ; ರಾಜನಾಥ್ ಸಿಂಗ್ ಟೀಕೆ
Published On - 8:47 pm, Tue, 22 February 22