ಉತ್ತರ ಪ್ರದೇಶ ಚುನಾವಣೆಗೆ ಕೆಲವೇ ದಿನಗಳು ಬಾಕಿ; ಅಖಿಲೇಶ್ ಯಾದವ್ ಪಕ್ಷದ ಶಾಸಕ ಅರೆಸ್ಟ್, 14 ದಿನಗಳ ನ್ಯಾಯಾಂಗ ಬಂಧನ
ಹಸನ್ ಪದೇಪದೆ ತಪ್ಪು ಮಾಡುತ್ತಿದ್ದು, ಅವರ ವಿರುದ್ಧ ವರ್ಷದಿಂದಲೂ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ. ನಿನ್ನೆ ಹಸನ್ ಬಂಧನವಾಗಿದ್ದು, ಇಂದು ಫಾಸ್ಟ್ಟ್ರ್ಯಾಕ್ ಕೋರ್ಟ್ಗೆ ಹಾಜರುಪಡಿಸಲಾಗಿತ್ತು.
ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಕೆಲವೇ ದಿನಗಳು ಬಾಕಿ ಇರುವಾಗ ಸಮಾಜವಾದಿ ಪಕ್ಷದ ಶಾಸಕ ನಾಹೀದ್ ಹಸನ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಕೈರಾನಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ಗ್ಯಾಂಗ್ಸ್ಟರ್ ಕಾಯ್ದೆಯಡಿ ಅವರನ್ನು ಬಂಧಿಸಲಾಗಿದೆ. ಸದ್ಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಈ ಬೆಳವಣಿಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ಗೆ ತುಸು ಮಟ್ಟಿಗೆ ಸಂಕಷ್ಟ ತಂದಿದೆ.
ಹಸನ್ ಪದೇಪದೆ ತಪ್ಪು ಮಾಡುತ್ತಿದ್ದು, ಅವರ ವಿರುದ್ಧ ವರ್ಷದಿಂದಲೂ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ. ನಿನ್ನೆ ಹಸನ್ ಬಂಧನವಾಗಿದ್ದು, ಇಂದು ಫಾಸ್ಟ್ಟ್ರ್ಯಾಕ್ ಕೋರ್ಟ್ಗೆ ಹಾಜರುಪಡಿಸಲಾಗಿತ್ತು.ಇವರು ತಮ್ಮ ವಿರುದ್ಧ ಬಂಧನದ ವಾರೆಂಟ್ ಜಾರಿಯಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದರು. ನಂತರ ಶುಕ್ರವಾರ ಸಿಕ್ಕಿಬಿದ್ದಿದ್ದಾರೆ. ಹಾಗೇ, ಇಂದು ವಿಚಾರಣೆ ವೇಳೆ ಸಹ ಕೋರ್ಟ್ ಹೊರಗೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿತ್ತು. ಶಾಸಕ ನಾಹೀದ್ ಹಸನ್ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿದ ಅಖಿಲೇಶ್ ಯಾದವ್, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಆಗುವುದಿಲ್ಲ ಎಂಬ ಹತಾಶೆ ಬಿಜೆಪಿಗೆ ಶುರುವಾಗಿದೆ. ಹೀಗಾಗಿ ಈಗಿನಿಂದಲೇ ಇಂಥ ಪ್ರಯತ್ನಗಳನ್ನು ಮಾಡುತ್ತಿದೆ. ಸಮಾಜವಾದಿ ಪಕ್ಷ ಮತ್ತು ಅದರ ಮಿತ್ರ ಪಕ್ಷಗಳ ಮೇಲೆ ಎಫ್ಐಆರ್ನಂತಹ ಕ್ರಮ ಕೈಗೊಳ್ಳುತ್ತಿರುವುದು ಬಿಜೆಪಿಯ ಶೇ.100ರಷ್ಟು ಅಸಹಾಯಕತೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಇದೀಗ ಬಂಧಿತರಾದ ನಾಹೀದ್ ಹಸನ್ ವಿರುದ್ಧ 2019ರಲ್ಲಿ ಜನವರಿ 7ರಂದು ಕೂಡ ಪ್ರಕರಣ ದಾಖಲಾಗಿತ್ತು. ಭೂವ್ಯವಹಾರದಲ್ಲಿ 80 ಲಕ್ಷ ರೂ.ವಂಚನೆ ಮಾಡಿದ ಆರೋಪ ಇವರ ವಿರುದ್ಧ ಕೇಳಿಬರುತ್ತಿದೆ. 2020ರ ಜನವರಿಯಲ್ಲಿ ಇದೇ ಕೇಸ್ನಡಿ ಜೈಲಿಗೆ ಕೂಡ ಸೇರಿದ್ದರು. ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 420 ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಅದಾದ ನಂತರ ಇನ್ನೂ ಹಲವು ಕೇಸ್ಗಳಡಿ ಎಫ್ಐಆರ್ ದಾಖಲಾಗಿತ್ತು. ಇನ್ನು ಸಮಾಜವಾದಿ ಪಕ್ಷದ 2500 ಕಾರ್ಯಕರ್ತರ ವಿರುದ್ಧ ಕೂಡ ಎಫ್ಐಆರ್ ದಾಖಲಾಗಿದೆ. ಕೊವಿಡ್ 19 ಶಿಷ್ಟಾಚಾರ ಉಲ್ಲಂಘನೆ ಮತ್ತು ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಅವರ ವಿರುದ್ಧ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಪಂಚರಾಜ್ಯಗಳ ಚುನಾವಣೆ; ಪ್ರಚಾರಸಭೆ, ರೋಡ್ಶೋಗಳಿಗೆ ವಿಧಿಸಿದ್ದ ನಿರ್ಬಂಧ ಅವಧಿ ಜ.22ರವರೆಗೆ ವಿಸ್ತರಿಸಿದ ಚುನಾವಣಾ ಆಯೋಗ