ಫೆ.29ರಿಂದ ಮಾ.7ರ ತನಕ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಇಲ್ಲಿದೆ ಮಾಹಿತಿ..

|

Updated on: Jan 19, 2024 | 7:12 PM

ಈ ಬಾರಿಯ ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ ಹಲವು ವಿಶೇಷಗಳನ್ನು ಹೊಂದಿರಲಿದೆ. ಸಿನಿಮೋತ್ಸವದ ಉದ್ಘಾಟನಾ ಸಮಾರಂಭ ಫೆಬ್ರವರಿ 29ರಂದು ನಡೆಯಲಿದೆ. ಚಿತ್ರೋತ್ಸವ ನಡೆಯುವ ಸ್ಥಳ, ಶುಲ್ಕ, ವಿಭಾಗ, ಕಾರ್ಯಗಾರ, ಸಂವಾದ, ಗೋಷ್ಠಿ ಇತ್ಯಾದಿ ಕುರಿತು ಮಾಹಿತಿಗಾಗಿ ಈ ಲೇಖನ ಓದಿ..

ಫೆ.29ರಿಂದ ಮಾ.7ರ ತನಕ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಇಲ್ಲಿದೆ ಮಾಹಿತಿ..
ಬೆಂಗಳೂರು ಸಿನಿಮೋತ್ಸವದ ಸುದ್ದಿಗೋಷ್ಠಿ
Follow us on

ಸಿನಿಪ್ರಿಯರ ಪಾಲಿಗೆ ಫಿಲ್ಮ್​ ಫೆಸ್ಟಿವಲ್​ (Film Festival) ಎಂದರೆ ಎಲ್ಲಿಲ್ಲದ ಸಂಭ್ರಮ. ಕರ್ನಾಟಕ ಸರ್ಕಾರ ಆಯೋಜಿಸುವ ‘15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಭಾಗಿಯಾಗಲು ಸಾವಿರಾರು ಆಸಕ್ತರು ಕಾದಿದ್ದಾರೆ. ಈ ಸಿನಿಮೋತ್ಸವದ (15th Bengaluru International Film Festival) ಉದ್ಘಾಟನಾ ಸಮಾರಂಭ ಫೆಬ್ರವರಿ 29ರಂದು ನಡೆಯಲಿದೆ. ಅಂದು ವಿಧಾನಸೌಧದ ಮುಂಭಾಗ ಅದ್ದೂರಿ ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಬ್ಯಾಂಕ್ವೆಟ್ ಹಾಲ್​ನಲ್ಲಿ ಮಾರ್ಚ್ 7ರಂದು ಸಮಾರೋಪ ಸಮಾರಂಭ ನಡೆಯಲಿದೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಏಷ್ಯನ್​​, ಭಾರತೀಯ ಮತ್ತು ಕನ್ನಡ ಚಲನಚಿತ್ರ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಈ ಬಾರಿಯ ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ ಹಲವು ವಿಶೇಷಗಳನ್ನು ಹೊಂದಿರಲಿದೆ. ಚಲನಚಿತ್ರ ಸಂಘಟನೆಗಳ ಅಂತಾರಾಷ್ಟ್ರೀಯ ಮಹಾ ಒಕ್ಕೂಟದಿಂದ (FIAPF) ಬೆಂಗಳೂರು ಚಲನಚಿತ್ರೋತ್ಸವ ಮಾನ್ಯತೆ ಪಡೆದಿದೆ. ಸಿನಿಮಾ ನಿರ್ಮಾಪಕರು, ರಾಷ್ಟ್ರೀಯ ಚಲನಚಿತ್ರ ಪ್ರತಿನಿಧಿಗಳು, ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಸೇರಿದಂತೆ ಅನೇಕ ಗಣ್ಯರು ಇದರಲ್ಲಿ ಭಾಗಿ ಆಗಲಿದ್ದಾರೆ.

ಸಿನಿಮೋತ್ಸವ ನಡೆಯು ಸ್ಥಳ:

ಬೆಂಗಳೂರಿನ ರಾಜಾಜಿನಗರದ ಒರಿಯಾನ್ ಮಾಲ್​ನ ‘ಪಿವಿಆರ್ ಸಿನಿಮಾ’ದ 11 ಪರದೆಗಳು, ಚಾಮರಾಜಪೇಟೆಯ ಕಲಾವಿದರ ಸಂಘದ ಕಟ್ಟಡದಲ್ಲಿ ಇರುವ ಡಾ. ರಾಜ್​ಕುಮಾರ್​ ಭವನ ಮತ್ತು ಬನಶಂಕರಿ 2ನೇ ಹಂತದ ‘ಸುಚಿತ್ರಾ ಫಿಲ್ಮ್​ ಸೊಸೈಟಿ’ಯಲ್ಲಿ ಮಾರ್ಚ್ 1ರಿಂದ ಸಿನಿಮಾಗಳ ಪ್ರದರ್ಶನ ಆರಂಭವಾಗಲಿದೆ. ಅಂದಾಜು 50ಕ್ಕೂ ಹೆಚ್ಚು ದೇಶಗಳ 200ಕ್ಕೂ ಅಧಿಕ ಸಿನಿಮಾಗಳು ಬೇರೆ ಬೇರೆ ವಿಭಾಗಗಳಲ್ಲಿ ಪ್ರದರ್ಶನ ಆಗಲಿದೆ.

ಬೆಂಗಳೂರು ಚಲನಚಿತ್ರೋತ್ಸವದ ವಿಭಾಗಗಳು:

ಸ್ಪರ್ಧಾವಿಭಾಗ: ಇದರಲ್ಲಿ ಮೂರು ವಿಭಾಗಗಳು ಇವೆ. ​ಏಷ್ಯಾ ಸಿನಿಮಾ ವಿಭಾಗ, ಭಾರತೀಯ ಸಿನಿಮಾಗಳ ವಿಭಾಗ ಹಾಗೂ ​ಕನ್ನಡ ಸಿನಿಮಾ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಉಳಿದಂತೆ, ಸಮಕಾಲೀನ ವಿಶ್ವ ಸಿನಿಮಾ, ಕನ್ನಡ ಜನಪ್ರಿಯ ಮನರಂಜನಾ ಸಿನಿಮಾಗಳು, ವಿಮರ್ಶಕರ ವಾರ (ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟದ ಆಯ್ಕೆಯ ಸಿನಿಮಾಗಳು), ಬಯೋಪಿಕ್‌ಗಳು, ದೇಶ ಕೇಂದ್ರಿತ ಸಿನಿಮಾ, ದೇಶದಲ್ಲಿ ಹೆಚ್ಚು ಪರಿಚಿತವಲ್ಲದ ಉಪ ಭಾಷೆಗಳಲ್ಲಿ ತಯಾರಾದ ಚಿತ್ರ ಸೇರಿದಂತೆ ಅನೇಕ ವಿಭಾಗಗಳಲ್ಲಿ ಸಿನಿಮಾ ಪ್ರದರ್ಶನ ನಡೆಯಲಿದೆ. ಪುನರಾವಲೋಕನ ವಿಭಾಗದಲ್ಲಿ ಮೃಣಾಲ್ ಸೇನ್ ಅವರ ಚಿತ್ರಗಳು ಪ್ರದರ್ಶನ ಆಗಲಿದೆ. ಶತಮಾನೋತ್ಸವ ನೆನಪು ಹಾಗೂ ಶ್ರದ್ಧಾಂಜಲಿ ವಿಭಾಗದಲ್ಲಿ ಸಂಗೀತ ನಿರ್ದೇಶಕ ವಿಜಯ್​ ಭಾಸ್ಕರ್‌, ನಟ ಸಾಬು ದಸ್ತಗೀರ್‌, ನಿರ್ದೇಶಕ ಭಗವಾನ್‌, ನಟಿ ಲೀಲಾವತಿ, ನಿರ್ಮಾಪಕ ಸಿ.ವಿ.ಶಿವಶಂಕ, ಗಾಯಕಿ ವಾಣಿ ಜಯರಾಂ ಮುಂತಾದವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಆಗಲಿದೆ.

ಇದನ್ನೂ ಓದಿ: ಮೆಲ್ಬೋರ್ನ್ ಸಿನಿಮೋತ್ಸವದಲ್ಲಿ ಕನ್ನಡ ಕಲರವ, ಬಾಲಿವುಡ್ ನಟರೊಟ್ಟಿಗೆ ಸೆಣೆಸಲಿರುವ ಕನ್ನಡ ನಟ-ನಟಿ

‘ಕನ್ನಡ ಸಿನಿಮಾ 90’, ‘ಕರ್ನಾಟಕ 50’ ವಿಭಾಗದಲ್ಲಿ ಆಯ್ದ ಚಿತ್ರಗಳ ಪ್ರದರ್ಶನ ನಡೆಯಲಿದೆ. ಮಾನವ ಹಕ್ಕು ಮತ್ತು ಮೌಲ್ಯಗಳನ್ನು ಪ್ರತಿಪಾದಿಸುವ ಸಾಕ್ಷ್ಯಚಿತ್ರಗಳ ವಿಭಾಗ ಕೂಡ ಇದೆ. ಈಗಾಗಲೇ ವಿಶ್ವದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಚಿತ್ರಗಳು ‘ಸಮಕಾಲೀನ ವಿಶ್ವ ಸಿನಿಮಾ’ ವಿಭಾಗದಲ್ಲಿ ಪ್ರದರ್ಶನವಾಗಲಿವೆ. www.biffes.org ಮೂಲಕ ಸಿನಿಮಾಗಳ ವಿವರ ಸಿಗಲಿದೆ.

ಕಾರ್ಯಾಗಾರ, ಸಂವಾದ, ಉಪನ್ಯಾಸ:

ಸಿನಿಮಾ ಮಾಧ್ಯಮ ಮತ್ತು ಉದ್ಯಮಕ್ಕೆ ಸಂಬಂಧಿಸಿದ ತಜ್ಞರಿಂದ ಸಂವಾದ, ಉಪನ್ಯಾಸ ಹಾಗೂ ಕಾರ್ಯಾಗಾರಗಳು ನಡೆಯಲಿವೆ. ಸಿನಿಮಾ ಸಂಕಲನ ಕಲೆ, ಕನ್ನಡ ಸಿನಿಮಾ-90, ಕರ್ನಾಟಕ-50 ಕುರಿತಂತೆ ಚರ್ಚೆ, ಚಿತ್ರಕಥೆ ರಚನೆ ಕುರಿತಂತೆ ಕಾರ್ಯಾಗಾರ ನಡೆಯಲಿದೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವಿ.ಕೆ. ಮೂರ್ತಿ ಸ್ಮರಣಾರ್ಥ ವಿಶೇಷ ಉಪನ್ಯಾಸ ನಡೆಯಲಿದೆ. ಸಿನಿಮಾದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಕುರಿತು ಉಪನ್ಯಾಸ ಇರಲಿದೆ. ಮೃಣಾಲ್‌ ಸೇನ್‌ ಜನ್ಮ ಶತಮಾನೋತ್ಸವ ಉಪನ್ಯಾಸ, ಚಲನಚಿತ್ರದಲ್ಲಿ ಸಂಗೀತದ ಕುರಿತು ಸಂವಾದ ನಡೆಯಲಿದೆ. ಸಿನಿಮಾಗಳಲ್ಲಿ ಮಾನವಹಕ್ಕು ಹಾಗೂ ಮೌಲ್ಯ ಪ್ರತಿಪಾದನೆ ಕುರಿತು ಗೋಷ್ಠಿ ಇರಲಿದೆ. ಕಲೆ, ಚಲನಚಿತ್ರ ವಿನ್ಯಾಸ ಕುರಿತ ಕಾರ್ಯಾಗಾರ, ಧ್ವನಿ ವಿನ್ಯಾಸ ಕಾರ್ಯಾಗಾರ, ಸಿನಿಮಾಗಳಲ್ಲಿ ಮಹಿಳಾ ಸಂವೇದನೆ ಕುರಿತು ಚರ್ಚೆ ಮುಂತಾದ ಎಲ್ಲ ಕಾರ್ಯಕ್ರಮಗಳು ‘ಪಿವಿಆರ್ ಸಿನಿಮಾ’ದ ಪ್ರದರ್ಶನ ಮಂದಿರದಲ್ಲಿ ಜರುಗಲಿವೆ.

ಇದನ್ನೂ ಓದಿ: ‘ಕಾಂತಾರ’ಕ್ಕೆ ಮತ್ತೊಂದು ಪ್ರಶಸ್ತಿಯ ಗರಿ, ಗೋವಾ ಸಿನಿಮೋತ್ಸವದಲ್ಲಿ ವಿಶೇಷ ಗೌರವ

ನೋಂದಣಿ ಬಗ್ಗೆ ಮಾಹಿತಿ:

ಚಿತ್ರೋತ್ಸವದಲ್ಲಿ ಭಾಗವಹಿಸಲು ಬಯಸುವ ಪ್ರತಿನಿಧಿಗಳ ನೋಂದಣಿ ಕಾರ್ಯ ಫೆಬ್ರವರಿ 15ರಿಂದ ಚಿತ್ರೋತ್ಸವದ ಜಾಲತಾಣದಲ್ಲಿ ಶುರುವಾಗಲಿದೆ. ಆಸಕ್ತರು ಚಿತ್ರೋತ್ಸವದ ವೆಬ್​ಸೈಟ್​ಗೆ ಹೋಗಿ, ನಿಯಮಗಳನ್ನು ಅನುಸರಿಸಿ, ನಿಗದಿ ಆಗಿರುವ ಶುಲ್ಕ ಪಾವತಿಸಿ ನೋಂದಾಣಿ ಮಾಡಿಕೊಳ್ಳಬಹುದು. ಸಾರ್ವಜನಿಕರಿಗೆ 800 ರೂಪಾಯಿ ಶುಲ್ಕ ಇದೆ. ಚಿತ್ರೋದ್ಯಮದ ಸದಸ್ಯರು, ಚಿತ್ರ ಸಮಾಜಗಳ ಸದಸ್ಯರು, ಹಿರಿಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ 400 ರೂ. ಶುಲ್ಕವಿದೆ. ನೋಂದಣಿ ಸಹಾಯಕ್ಕೆ 080-23493410 ದೂರವಾಣಿ ಸಂಖ್ಯೆ ಹಾಗೂ biffesblr@gmail.com ಇ-ಮೇಲ್​ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ