‘ಕಾಂತಾರ’ಕ್ಕೆ ಮತ್ತೊಂದು ಪ್ರಶಸ್ತಿಯ ಗರಿ, ಗೋವಾ ಸಿನಿಮೋತ್ಸವದಲ್ಲಿ ವಿಶೇಷ ಗೌರವ
Kantara: ಈಗಾಗಲೇ ಹಲವು ಗೌರವ, ದಾಖಲೆಗಳಿಗೆ ಪಾತ್ರವಾಗಿರುವ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಸಿನಿಮಾಕ್ಕೆ ಗೋವಾ ಅಂತರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.
ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಕ ಮಾಡಿರುವ ‘ಕಾಂತಾರ’ (Kantara) ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ ಬಸ್ಟರ್ ಆಗಿರುವುದು ಮಾತ್ರವೇ ಅಲ್ಲ ಚಿತ್ರಮಂದಿರಗಳಿಂದ ದೂರಾಗಿದ್ದ ಕುಟುಂಬ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತಂದ ಸಿನಿಮಾ ಎನಿಸಿಕೊಂಡಿದೆ. ಒಂದು ಭಾಗದ ನೆಲದ ಸಂಸ್ಕೃತಿಯ ಕತೆಗಳನ್ನು ವಿಶ್ವಕ್ಕೆ ಸಿನಿಮಾ ಮೂಲಕ ಹೇಳಬಹುದು ಆ ಮೂಲಕ ದೊಡ್ಡ ಯಶಸ್ಸು ಗಳಿಸಬಹುದು ಎಂಬುದನ್ನು ಸಹ ತೋರಿಸಿಕೊಟ್ಟಿದೆ. ಪ್ರಾದೇಶಿಕ ಕತೆಗಳನ್ನು ಸಿನಿಮಾ ಮೂಲಕ ಜಗತ್ತಿಗೆ ಪರಿಚಯಿಸಲು ಸಿನಿಮಾ ಕರ್ಮಿಗಳಿಗೆ ಸ್ಪೂರ್ತಿಯನ್ನು ಒದಗಿಸಿದೆ. ಕನ್ನಡ ಚಿತ್ರರಂಗದ ಗರಿಮೆಯನ್ನು ಹೆಚ್ಚಿಸಿದ, ಕರ್ನಾಟಕದ ಸಂಸ್ಕೃತಿಯನ್ನು ಸಾರಿದ ‘ಕಾಂತಾರ’ಕ್ಕೆ ಈಗಾಗಲೇ ಹಲವು ಪ್ರಶಸ್ತಿ, ಗೌರವಗಳು ಸಂದಿವೆ. ಇದೀಗ ಆ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ.
ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಕಾಂತಾರ’ ಸಿನಿಮಾಕ್ಕೆ ವಿಶೇಷ ಪ್ರಶಸ್ತಿಯೊಂದು ಲಭಿಸಿದೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಕಾಂತಾರ ಸಿನಿಮಾಕ್ಕೆ ಲಭಿಸಿದೆ. ಪ್ರಶಸ್ತಿಯನ್ನು ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿ ಪಡೆದುಕೊಂಡಿದ್ದಾರೆ. ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಅಥವಾ ‘ಸಿಲ್ವರ್ ಪೀಕಾಕ್’ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿಗೆ ‘ಕಾಂತಾರ’ ಪಾತ್ರವಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:‘ಕಥೆಯ ಬಗ್ಗೆ ಏನೂ ಹೇಳಲ್ಲ, ಸಿನಿಮಾನೇ ಮಾತನಾಡುತ್ತದೆ’; ‘ಕಾಂತಾರ ಚಾಪ್ಟರ್ 1’ ಬಗ್ಗೆ ರಿಷಬ್ ಶೆಟ್ಟಿ ಮಾತು
ರಿಷಬ್ ಶೆಟ್ಟಿ ಇಂದು (ನವೆಂಬರ್ 28) ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಿನಿಮೋತ್ಸವದಲ್ಲಿ ಸ್ಪರ್ಧಾ ವಿಭಾಗದಲ್ಲಿ ‘ಕಾಂತಾರ’ ಸಿನಿಮಾ ಪ್ರದರ್ಶನ ಮಾಡಲಾಯ್ತು. ಸಿನಿಮಾ ಪ್ರದರ್ಶನದ ಜೊತೆಗೆ ರಿಷಬ್ ಶೆಟ್ಟಿಯ ಸಂವಾದ ಸಹ ಆಯೋಜನೆಯಾಗಿತ್ತು. ಅದಾದ ಬಳಿಕ ‘ಕಾಂತಾರ’ ಸಿನಿಮಾಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಘೋಷಣೆಯಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಟ್ವೀಟ್ ಮಾಡಿ, ”ತೀರ್ಪುಗಾರರ ಗಮನ ಸೆಳೆಯುವುದು ಪ್ರತಿ ವರ್ಷವೂ ವಿಶೇಷ. ಈ ಬಾರಿ ಆ ಗೌರವ ರಿಷಬ್ ಶೆಟ್ಟಿ ಪಾಲಾಗಿದೆ. ‘ಕಾಂತಾರ’ ಸಿನಿಮಾದಲ್ಲಿ ಅದ್ಭುತ ನಟನೆಗೆ ಹಾಗೂ ಅದ್ಭುತವಾಗಿ ಕತೆ ಹೇಳಿರುವ ರೀತಿಗೆ ರಿಷಬ್ ಶೆಟ್ಟಿ ಅವರಿಗೆ ತೀರ್ಪುಗಾರರ ವಿಶೇಷ ಬಹುಮಾನ ನೀಡಲಾಗಿದೆ’’ ಎಂದಿದೆ.
‘ಕಾಂತಾರ’ ಸಿನಿಮಾ ಈಗಾಗಲೇ ಹಲವು ಗೌರವಗಳಿಗೆ ಪಾತ್ರವಾಗಿದೆ. ವಿಶ್ವಸಂಸ್ಥೆಯ ವರೆಗೂ ಸಿನಿಮಾ ಪಯಣ ನಡೆಸಿದೆ. ವಿಶ್ವಸಂಸ್ಥೆಯ ಕೆಲ ಸದಸ್ಯರಿಗೆ ‘ಕಾಂತಾರ’ ಸಿನಿಮಾದ ವಿಶೇಷ ಶೋ ಅನ್ನು ಆಯೋಜಿಸಲಾಗಿತ್ತು. ಅದು ಮಾತ್ರವೇ ಕನ್ನಡ ಸಿನಿಮಾ ಈವರೆಗೆ ತಲುಪದ ಕೆಲವು ದೇಶಗಳಲ್ಲಿಯೂ ‘ಕಾಂತಾರ’ ಸಿನಿಮಾ ಪ್ರದರ್ಶನ ಕಂಡಿತ್ತು. ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಸರ್ಕಾರವು ಹಿರಿಯ ದೈವ ನರ್ತಕರಿಗೆ ಮಾಸಾಷನವನ್ನು ಸಹ ಘೋಷಿಸಿತು. ಇದೆಲ್ಲವೂ ‘ಕಾಂತಾರ’ಕ್ಕೆ ದೊರಕಿದ ಗೌರವ. ಈಗ ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿಯೂ ಪ್ರಶಸ್ತಿ ಲಭಿಸಿದೆ. ಮುಂದಿನ ವರ್ಷದ ರಾಷ್ಟ್ರಪ್ರಶಸ್ತಿಯಲ್ಲಿಯೂ ‘ಕಾಂತಾರ’ ಸಿನಿಮಾಕ್ಕೆ ಪ್ರಶಸ್ತಿ ನಿರೀಕ್ಷಿಸಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ