
ಬಾಲಿವುಡ್ (Bollywood) ಸ್ಟಾರ್ ನಟ ಆಮಿರ್ ಖಾನ್ (Aamir Khan) ಸತತ ಸೋಲುಗಳನ್ನು ನೋಡುತ್ತಿದ್ದಾರೆ. 2016 ರಲ್ಲಿ ಬಿಡುಗಡೆ ಆದ ‘ದಂಗಲ್’ ಸಿನಿಮಾದ ಬಳಿಕ ದೊಡ್ಡ ಗೆಲುವೊಂದನ್ನು ಆಮಿರ್ ಖಾನ್ ನೋಡಿಯೇ ಇಲ್ಲ. ಸಲ್ಮಾನ್, ಶಾರುಖ್ ಖಾನ್ ಸಹ ಸತತ ಸೋಲು ಕಂಡಿದ್ದರು. ಆದರೆ ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರ ದೆಸೆಯಿಂದ ಶಾರುಖ್ ಖಾನ್ ದೊಡ್ಡ ಗೆಲುವು ಕಂಡರೆ, ಸಲ್ಮಾನ್ ಖಾನ್ ಸಹ ಗೆಲುವಿನ ಹಳಿಗೆ ಮರಳಿದರು. ಇದೀಗ ಆಮಿರ್ ಖಾನ್ ಸಹ ದಕ್ಷಿಣ ಭಾರತದ ನಿರ್ದೇಶಕರ ಹಿಂದೆ ಬಿದ್ದಿದ್ದಾರೆ.
ಈ ಹಿಂದೆ ತಮಿಳಿನ ಮುರುಗದಾಸ್ ನಟನೆಯ ‘ಗಜಿನಿ’ ಸಿನಿಮಾದಲ್ಲಿ ನಟಿಸಿ ಭಾರಿ ಹಿಟ್ ಸಿನಿಮಾ ನೀಡಿದ್ದ ಆಮಿರ್ ಖಾನ್ ಪ್ರಸ್ತುತ ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆದರೆ ಅದು ರಜನೀಕಾಂತ್ ನಾಯಕನಾಗಿ ನಟಿಸಿರುವ ಸಿನಿಮಾ. ಆಮಿರ್ ಖಾನ್ ಅವರದ್ದು ‘ಕೂಲಿ’ ಸಿನಿಮಾನಲ್ಲಿ ಅತಿಥಿ ಪಾತ್ರವಷ್ಟೆ. ಆದರೆ ಇದೀಗ ತೆಲುಗಿನಲ್ಲಿ ಕೆಲ ಹಿಟ್ ಸಿನಿಮಾಗಳನ್ನು ನೀಡಿರುವ ಪಕ್ಕಾ ಕಮರ್ಶಿಯಲ್ ನಿರ್ದೇಶಕ ವಂಶಿ ಪೈಡಪಲ್ಲಿ ನಿರ್ದೇಶನದ ಸಿನಿಮಾದಲ್ಲಿ ಆಮಿರ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ತೆಲುಗಿನ ಹಿಟ್ ಸಿನಿಮಾಗಳಾದ ‘ಮುನ್ನಾ’, ‘ಬೃಂದಾವನಮ್’, ‘ಯೆವಡು’, ‘ಮಹರ್ಶಿ’ ತಮಿಳು ಸಿನಿಮಾ ‘ವಾರಿಸು’ ಗಳನ್ನು ವಂಶಿ ಪೈಡಪಲ್ಲಿ ನಿರ್ದೇಶನ ಮಾಡಿದ್ದಾರೆ. ವಂಶಿ ಪೈಡಪಲ್ಲಿ ಪಕ್ಕಾ ಕಮರ್ಶಿಯಲ್, ಹೀರೋ ಓರಿಯೆಂಟೆಡ್ ಸಿನಿಮಾಗಳ ನಿರ್ದೇಶಕ. ಆದರೆ ಆಮಿರ್ ಖಾನ್ ಕಂಟೆಂಟ್ ನೋಡಿ ಕತೆ ಒಪ್ಪಿಕೊಳ್ಳುವ ನಟ. ಹಾಗಿದ್ದರೂ ಸಹ ಈ ಇಬ್ಬರು ಹೇಗೆ ಒಂದಾಗುತ್ತಿದ್ದಾರೆ ಎಂಬುದು ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ:‘ಸಿತಾರೆ ಜಮೀನ್ ಪರ್’ ಸಿನಿಮಾಕ್ಕೆ ಆಮಿರ್ ಖಾನ್ ಹೊಸ ಅವತಾರ
ಅಂದಹಾಗೆ ವಂಶಿ ಪೈಡಪಲ್ಲಿ ಮಾತ್ರವೇ ಅಲ್ಲದೆ ತಮಿಳಿನ ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆಗೆ ಸಹ ಆಮಿರ್ ಖಾನ್ ಪ್ರತ್ಯೇಕ ಸಿನಿಮಾ ಒಂದರಲ್ಲಿ ನಟಿಸುವ ಸಾಧ್ಯತೆ ಇದೆ. ಈ ಹಿಂದೆ ಲೋಕೇಶ್ ಕನಗರಾಜ್, ಸೂರ್ಯಗಾಗಿ ಮಾಡಿಕೊಂಡಿದ್ದ ‘ಇರುಂಬು ಕೈ ಮಾಯಾವಿ’ ಕತೆಯನ್ನು ಲೋಕೇಶ್ ಈಗ ಆಮಿರ್ ಖಾನ್ಗಾಗಿ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸೂರ್ಯ ಸಹ ಒಮ್ಮೆ ಹೇಳಿದ್ದರು. ‘ಇರುಂಬು ಕೈ ಮಾಯಾವಿ’ ಸಿನಿಮಾ ಈಗ ನನ್ನ ಕೈಯಲ್ಲಿದೆಯೋ ಇಲ್ಲವೋ ಗೊತ್ತಿಲ್ಲ ಎಂದಿದ್ದರು. ಆ ಮೂಲಕ ಆ ಸಿನಿಮಾ ಬಹುತೇಕ ತಮ್ಮ ಕೈ ತಪ್ಪಿದೆ ಎಂದು ಪರೋಕ್ಷವಾಗಿ ಹೇಳಿದ್ದರು.
ಆಮಿರ್ ಖಾನ್ ಪ್ರಸ್ತುತ ‘ಸಿತಾರೆ ಜಮೀನ್ ಪರ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇದು ಸ್ಪ್ಯಾನಿಷ್ ಸಿನಿಮಾ ‘ಚಾಂಪಿಯನ್’ ಇಂದ ಸ್ಪೂರ್ತಿ ಪಡೆದ ಸಿನಿಮಾ ಆಗಿದೆ. ಸಿನಿಮಾದಲ್ಲಿ ಆಮಿರ್ ಖಾನ್, ವಿಶೇಷ ಚೇತನ ಮಕ್ಕಳ ಕೋಚ್ ಪಾತ್ರದಲ್ಲಿ ನಟಿಸಿದ್ದಾರೆ. ಪ್ಯಾರಾ ಒಲಿಂಪಿಕ್ಗೆ ವಿಶೇಷ ಚೇತನ ಮಕ್ಕಳನ್ನು ತಯಾರು ಮಾಡುವ ಕೋಚ್ ಪಾತ್ರ ಅವರದ್ದು. ಸಿನಿಮಾದಲ್ಲಿ ಜೆನಿಲಿಯಾ ಡಿಸೋಜಾ ಸಹ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:04 pm, Fri, 18 April 25