ವಿವಾದಾತ್ಮಕ ನಟ ಮನ್ಸೂರ್ ಪುತ್ರ ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್

Mansoor Ali Khan: ತಮಿಳು ನಟ ಮನ್ಸೂರ್ ಅಲಿ ಖಾನ್ ಪುತ್ರ ತುಘಲಕ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ಈ ಹಿಂದೆ ನಟಿ ತ್ರಿಷಾ ಬಗ್ಗೆ ಅವಾಚ್ಯವಾಗಿ ಮಾತನಾಡಿ ಮನ್ಸೂರ್ ಅಲಿ ಖಾನ್ ತೀವ್ರ ಟೀಕೆಗೆ ಗುರಿಯಾಗಿದ್ದ. ಹಲವು ಪ್ರಕರಣಗಳಲ್ಲಿ ಮನ್ಸೂರ್ ಅಲಿ ಖಾನ್ ಸಹ ಬಂಧನಕ್ಕೆ ಒಳಗಾಗಿದ್ದರು.

ವಿವಾದಾತ್ಮಕ ನಟ ಮನ್ಸೂರ್ ಪುತ್ರ ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್

Updated on: Dec 05, 2024 | 11:14 AM

ತಮಿಳು ಸೇರಿದಂತೆ ದಕ್ಷಿಣದ ಕೆಲವು ಭಾಷೆಗಳ ಸಿನಿಮಾದಲ್ಲಿ ನಟಿಸಿರುವ ನಟ ಮನ್ಸೂರ್ ಅಲಿ ಖಾನ್ ಕಳೆದ ವರ್ಷ ತಮ್ಮ ಹೇಳಿಕೆಗಳಿಂದ ವಿವಾದಕ್ಕೆ ಗುರಿಯಾಗಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಹಲವು ಬಾರಿ ವಿವಾದಗಳಿಗೆ ಮನ್ಸೂರ್ ಅಲಿ ಖಾನ್ ಸಿಲುಕಿದ್ದು ಜೈಲು ವಾಸವನ್ನೂ ಅನುಭವಿಸಿದ್ದಾರೆ. ಇದೀಗ ಅವರ ಪುತ್ರನೂ ತಂದೆಯ ಹಾದಿಯನ್ನೇ ಹಿಡಿದಂತಿದ್ದು, ಮನ್ಸೂಲಿ ಅಲಿ ಖಾನ್​ ಪುತ್ರನ್ನು ಡ್ರಗ್ಸ್ ಪ್ರಕರಣದಲ್ಲಿ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ಮನ್ಸೂರ್ ಅಲಿ ಖಾನ್ ಪುತ್ರ ತುಘಲಕ್ ಅನ್ನು ತಿರುಮಂಗಳಂ ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಮುಂಚೆ ಸಹ 10 ಜನರನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ತನಿಖೆ ನಡೆಸಿದಾಗ ಮನ್ಸೂರ್ ಅಲಿ ಖಾನ್ ಪುತ್ರ ತುಘಲಕ್ ಸಹ ಇದೇ ಗುಂಪಿನ ಭಾಗವಾಗಿರುವುದು ತಿಳಿದು ಬಂದ ಕಾರಣ ಆತನನ್ನೂ ಸಹ ಪೊಲೀಸರು ಬಂಧಿಸಿದ್ದಾರೆ. ತುಘಲಕ್​ನಿಂದ ಮಾದಕ ವಸ್ತುವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.

ಇದೇ ವರ್ಷದ ಆರಂಭದಲ್ಲಿ ನಟ ಮನ್ಸೂರ್ ಅಲಿ ಖಾನ್ ವಿರುದ್ಧವೂ ಕೆಲ ದೂರುಗಳು ದಾಖಲಾಗಿದ್ದವು, ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮನ್ಸೂರ್ ಅಲಿ ಖಾನ್, ‘ನಾನು ‘ಲಿಯೋ’ ಸಿನಿಮಾನಲ್ಲಿ ತ್ರಿಷಾ ಜೊತೆಗೆ ನಟಿಸುತ್ತೇನೆ ಎಂದು ಗೊತ್ತಾದಾಗ ಅದು ಬೆಡ್​ರೂಂ ಸೀನ್ ಇರಬಹುದು ಎಂದುಕೊಂಡಿದ್ದೆ. ನನ್ನ ವೃತ್ತಿ ಜೀವನದಲ್ಲಿ ನಾನು ಸಾಕಷ್ಟು ಹೀರೋಯಿನ್​ಗಳನ್ನು ಬೆಡ್​ರೂಮ್​ಗೆ ಎತ್ತಿಕೊಂಡು ಹೋಗಿ ರೇಪ್​ ಮಾಡಿದ್ದೀನಿ, ಈಗಲೂ ಹಾಗೆಯೇ ಇರುತ್ತದೆ ಎಂದುಕೊಂಡಿದ್ದೆ. ಆದರೆ ಇವರು ಕಾಶ್ಮೀರದಲ್ಲಿ ಸಿನಿಮಾ ಶೂಟಿಂಗ್ ಮಾಡುವಾಗ ತ್ರಿಶಾ ಅನ್ನು ನನಗೆ ತೋರಿಸಲೂ ಸಹ ಇಲ್ಲ’ ಎಂದಿದ್ದರು.

ಇದನ್ನೂ ಓದಿ:ಕ್ಷಮೆ ಕೇಳುವುದಿಲ್ಲ: ಪಟ್ಟು ಬಿಡದ ‘ಖಳ’ನಟ ಮನ್ಸೂರ್ ಅಲಿ ಖಾನ್

ಮನ್ಸೂರ್ ಅಲಿ ಖಾನ್​ರ ಈ ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು, ಸ್ವತಃ ತ್ರಿಶಾ, ಮನ್ಸೂರ್ ಹೇಳಿಕೆಯನ್ನು ಖಂಡಿಸಿ ಪೋಸ್ಟ್ ಮಾಡಿದ್ದರು, ಸಿನಿಮಾದ ನಿರ್ದೇಶಕ ಲೋಕೇಶ್ ಕನಗರಾಜ್ ಸಹ ಪೋಸ್ಟ್ ಮಾಡಿ ಮನ್ಸೂರ್ ಮಾತನ್ನು ಖಂಡಿಸಿದ್ದರು. ಮೊದಲಿಗೆ ಮನ್ಸೂರ್ ತಮ್ಮ ಮಾತುಗಳಿಗೆ ಬದ್ಧವಾಗಿರುವುದಾಗಿ ಹೇಳಿದ್ದರೂ ಒತ್ತಡ ಹೆಚ್ಚಾಗುತ್ತಿದ್ದಂತೆ ಕ್ಷಮೆ ಕೇಳಿದರು.

ಮನ್ಸೂರ್ ಅಲಿ ಖಾನ್​ಗೆ ವಿವಾದ ಹೊಸದಲ್ಲ, 1998 ರಲ್ಲಿಯೇ ಸಿನಿಮಾ ಸಂಬಂಧಿ ಗಲಾಟೆಯೊಂದರಲ್ಲಿ ಪ್ರತಿಭಟನೆ ಮಾಡಿ ಬಂಧನಕ್ಕೆ ಒಳಗಾಗಿದ್ದರು. ಆ ಬಳಿಕ ನಟಿಯೊಬ್ಬರು ಮನ್ಸೂರ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು. ಪ್ರಕರಣದಲ್ಲಿ ಮನ್ಸೂರ್​ಗೆ ಶಿಕ್ಷೆ ಸಹ ಆಗಿತ್ತು. ಆದರೆ ಹೈಕೋರ್ಟ್​ನಲ್ಲಿ ಪ್ರಕರಣವನ್ನು ಕೈಬಿಡಲಾಯ್ತು. ಅದಾದ ಬಳಿಕ 2012 ರಲ್ಲಿ ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಬೆದರಿಕೆ ಆರೋಪದಲ್ಲಿ ಮನ್ಸೂರ್ ಅನ್ನು ಬಂಧಿಸಲಾಗಿತ್ತು. 2021 ರಲ್ಲಿ ಕೋವಿಡ್​ ಬಗ್ಗೆ ಸುಳ್ಳು ಸುದ್ದಿ ಹರಡಿದ್ದಕ್ಕೆ ಮತ್ತು ಲಸಿಕೆ ವಿಷಯದಲ್ಲಿ ವಂಚನೆ ಮಾಡುವ ಯತ್ನ ಮಾಡಿದ್ದಕ್ಕೆ ಬಂಧಿಸಲಾಗಿತ್ತು. ಈಗ ಅಪ್ಪನಂತೆ ಮಗ, ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ