ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ (pawan kalyan) ನಟರಾಗಿ ಮಾತ್ರವಲ್ಲದೆ, ರಾಜಕೀಯ ನಾಯಕರಾಗಿಯೂ ಗಮನ ಸೆಳೆಯುತ್ತಿದ್ದಾರೆ. ಸಿನಿಮಾ ಮತ್ತು ರಾಜಕೀಯ ಎರಡು ಕ್ಷೇತ್ರವನ್ನು ಒಟ್ಟಿಗೆ ಅವರು ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಸದ್ಯ ರಾಧಾ ಕೃಷ್ಣ (ಕ್ರಿಶ್) ಜಗರ್ಲಮುಡಿ ನಿರ್ದೇಶನದ ‘ಹರಿ ಹರ ವೀರ ಮಲ್ಲು’ ಚಿತ್ರದಲ್ಲಿ ಬ್ಯೂಸಿ ಆಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ‘ಹರಿ ಹರ ವೀರ ಮಲ್ಲು’ (Hari Hara Veera Mallu) ಚಿತ್ರಕ್ಕಾಗಿ ನಟ ಪವನ್ ಕಲ್ಯಾಣ್ ಅವರು ಮಾರ್ಷಲ್ ಆರ್ಟ್ಸ್ ಕೂಡ ಕಲಿಯುತ್ತಿದ್ದಾರೆ. ಸದ್ಯ ಈ ಕುರಿತಾಗಿ ಪವನ್ ಕಲ್ಯಾಣ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಕೈಯಲ್ಲಿ ಕಠಾರಿ ಹಿಡಿದು ಪೋಸ್ ನೀಡಿದ್ದಾರೆ.
‘ಹರಿ ಹರ ವೀರ ಮಲ್ಲು’ ಚಿತ್ರ ಸೆಟ್ ಏರಿ ಬಹಳ ದಿನಗಳಾಗಿವೆ. ಈ ಚಿತ್ರದಲ್ಲಿ ಪವನ್ ಕಲ್ಯಾಣ್ ರಾಬಿನ್ ಹುಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಇದುವರೆಗೂ ಚಿತ್ರತಂಡದಿಂದ ಯಾವುದೇ ಅಪ್ಡೇಟ್ ಬಂದಿರಲಿಲ್ಲ. ಇದರಿಂದಾಗಿ ಪವನ್ ಕಲ್ಯಾಣ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಸದ್ಯ ಸಮರ ಕಲೆಗಳನ್ನು ಅಭ್ಯಾಸ ಮಾಡಲು ಪ್ರಾರಂಭಿಸಿರುವುದಾಗಿ ಪವನ್ ಕಲ್ಯಾಣ್ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ತಂದಿದೆ. ‘ಎರಡು ದಶಕಗಳ ನಂತರ ಮತ್ತೆ ಮಾರ್ಷಲ್ ಆರ್ಟ್ಸ್ ಅಭ್ಯಾಸ ಮಾಡುತ್ತಿದ್ದೇನೆ’ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
After two decades I got into my Martial Arts practice. pic.twitter.com/3CLqGRNbvH
— Pawan Kalyan (@PawanKalyan) December 9, 2022
‘ಹರಿ ಹರ ವೀರು ಮಲ್ಲು’ ಚಿತ್ರ 17ನೇ ಶತಮಾನದ ಮೊಘಲ್ ಸಾಮ್ರಾಜ್ಯದ ಹಿನ್ನೆಲೆಯುಳ್ಳ ಕಥೆಯನ್ನಾಧರಿಸಿದೆ. ಈ ಚಿತ್ರದಲ್ಲಿ ನಟ ಪವನ್ ಕಲ್ಯಾಣ್ ಅವರೊಂದಿಗೆ ಬಾಲಿವುಡ್ನ ಖ್ಯಾತ ನಟ ಬಾಬಿ ಡಿಯೋಲ್ ಮೊಘಲ್ ಚಕ್ರವರ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ನಿಧಿ ಅಗರ್ವಾಲ್, ಅರ್ಜುನ್ ರಾಮ್‌ಪಾಲ್ ಮತ್ತು ನರ್ಗಿಸ್ ಫಖ್ರಿ ಕೂಡ ನಟಿಸಿದ್ದಾರೆ. ಎ.ಎಂ.ರತ್ನಂ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಪವನ್ ಕಲ್ಯಾಣ್ ಅವರು 900 ಜನರ ತಂಡದೊಂದಿಗೆ ಚಿತ್ರೀಕರಣ ನಡೆಸಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಟ ಪವನ್ ಕಲ್ಯಾಣ್ ಭೇಟಿ; ಇಲ್ಲಿದೆ ವಿಡಿಯೋ
ಪ್ಯಾನ್ ಇಂಡಿಯಾ ರೇಂಜ್ನಲ್ಲಿ ‘ಹರಿ ಹರ ವೀರು ಮಲ್ಲು’ ಚಿತ್ರ ರೆಡಿಯಾಗುತ್ತಿದ್ದು, ನಿರೀಕ್ಷೆ ಕೂಡ ಹೆಚ್ಚಿಸಿದೆ. ಮೂಲಗಳ ಪ್ರಕಾರ ಚಿತ್ರ ಖರೀದಿಸಲು ಖರೀದಿದಾರರು ಮುಗಿ ಬೀಳುತ್ತಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ನಟ ಪವನ್ ಕಲ್ಯಾಣ್ ಕೆರಿಯರ್ನಲ್ಲಿ ಭಾರಿ ಪ್ರಮಾಣದಲ್ಲಿ ಬಿಡುಗಡೆಗೂ ಮುಂಚೆಯೇ ಈ ಚಿತ್ರ ಉತ್ತಮ ಬಿಸಿನೆಸ್ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:14 pm, Sat, 10 December 22