
ತಮಿಳು ಚಿತ್ರರಂಗದಲ್ಲಿ ನಟರು ರಾಜಕೀಯಕ್ಕೆ ಪ್ರವೇಶಿಸುವುದು ಹೊಸದಲ್ಲ. ಈಗಾಗಲೇ ಎಂಜಿಆರ್ ಸೇರಿದಂತೆ ಹಲವು ದಿಗ್ಗಜರು ರಾಜಕೀಯದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಇದೀಗ ದಳಪತಿ ವಿಜಯ್ ಕೂಡ ರಾಜಕೀಯ ರಂಗಪ್ರವೇಶ ಮಾಡಿ ದೊಡ್ಡ ಸಂಚಲನ ಸೃಷ್ಟಿಸಿದ್ದಾರೆ. ಈ ಬೆಳವಣಿಗೆಗಳ ನಡುವೆ, ತಮಿಳಿನ ಮತ್ತೋರ್ವ ಸ್ಟಾರ್ ನಟ ಸೂರ್ಯ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಹತ್ವದ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಸಿನಿಮಾದ ಪ್ರಚಾರದ ವೇಳೆ ನಟ ಸೂರ್ಯ ಅವರು ರಾಜಕೀಯದ ಕುರಿತು ಮಾತನಾಡಿದ್ದಾರೆ. ಅಭಿಮಾನಿಗಳು ಹಾಗೂ ಜನಸಾಮಾನ್ಯರಲ್ಲಿ ಸೂರ್ಯ ರಾಜಕೀಯಕ್ಕೆ ಬರುತ್ತಾರಾ ಎನ್ನುವ ಕುತೂಹಲ ಬಹಳ ದಿನಗಳಿಂದ ಇತ್ತು. ಈ ಎಲ್ಲಾ ಊಹಾಪೋಹಗಳಿಗೆ ತೆರೆಎಳೆದಿರುವ ಸೂರ್ಯ, ತಾವು ರಾಜಕೀಯಕ್ಕೆ ಬರುವ ಯಾವುದೇ ಯೋಚನೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಾವು ರಾಜಕೀಯಕ್ಕೆ ಪ್ರವೇಶಿಸುತ್ತಿಲ್ಲ ಎಂದ ಮಾತ್ರಕ್ಕೆ ತಮಗೆ ರಾಜಕೀಯದ ಬಗ್ಗೆ ಅಸಮಾಧಾನವಿಲ್ಲ ಎಂದು ಸೂರ್ಯ ತಿಳಿಸಿದ್ದಾರೆ. ತಾವು ಬಹಳ ಸೂಕ್ಷ್ಮವಾಗಿ ಹಾಗೂ ಮೌನವಾಗಿ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಯುವಜನತೆ ರಾಜಕೀಯದ ಬಗ್ಗೆ ಸಂಪೂರ್ಣ ಅರಿವು ಮತ್ತು ಸ್ಪಷ್ಟತೆಯೊಂದಿಗೆ ರಾಜಕೀಯ ರಂಗಕ್ಕೆ ಮುಂದೆ ಬರಬೇಕು ಎಂದು ಅವರು ಕರೆ ನೀಡಿದ್ದಾರೆ.
ದೇಶದಲ್ಲಿ ಶಿಕ್ಷಣ ವ್ಯವಸ್ಥೆಗೆ ರಾಜಕಾರಣಿಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂರ್ಯ ಅಭಿಪ್ರಾಯಪಟ್ಟಿದ್ದಾರೆ. ಭ್ರಷ್ಟಾಚಾರವನ್ನು ಬೇರೆ ಯಾರೋ ಬಂದು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಸಂಪೂರ್ಣ ಸಮರ್ಪಣಾ ಭಾವದಿಂದ ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂದರು. ನನಗೆ ಸರಿಯಾದ ದಾರಿ ತಿಳಿದಿಲ್ಲದಿದ್ದರೂ ಸಹ ನಾನು ಎಂದಿಗೂ ರಾಜಕೀಯಕ್ಕೆ ಕಾಲಿಡುವುದಿಲ್ಲ ಎಂದು ಸೂರ್ಯ ಖಡಕ್ ಆಗಿ ನುಡಿದಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ದ ನಡುವೆಯೂ ಸ್ಟಡಿಯಾಗಿ ನಿಂತ ಸೂರ್ಯ, ಗಳಿಕೆ ಎಷ್ಟು?
ತಮಿಳುನಾಡಿನಲ್ಲಿ ನಟರು ರಾಜಕೀಯಕ್ಕೆ ಧುಮುಕುತ್ತಿರುವ ಈ ಸಮಯದಲ್ಲಿ, ಸೂರ್ಯ ಅವರು ಮಾತ್ರ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ವಿಜಯ್ ರಾಜಕೀಯ ಹಾದಿಯನ್ನು ಆಯ್ಕೆ ಮಾಡಿಕೊಂಡರೆ, ಸೂರ್ಯ ಮಾತ್ರ ಕೇವಲ ಹೊರಗಿನಿಂದ ರಾಜಕೀಯ ವಿದ್ಯಮಾನಗಳನ್ನು ವೀಕ್ಷಿಸುವುದೇ ಸಾಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ಪ್ರವೇಶದ ವದಂತಿಗಳಿಗೆ ನಟ ಸೂರ್ಯ ಅಧಿಕೃತವಾಗಿ ತೆರೆ ಎಳೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.