
ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ (Suriya) ಕಳೆದ ಕೆಲ ವರ್ಷಗಳಿಂದ ಹಿಟ್ ಸಿನಿಮಾ ನೀಡಿರಲಿಲ್ಲ. ಅವರು ನಟಿಸಿದ್ದ ‘ಇಟಿ’, ‘ಕಂಗುವ’ ಮತ್ತು ‘ರೆಟ್ರೊ’ ಸಿನಿಮಾಗಳು ಒಂದರ ಹಿಂದೊಂದರಂತೆ ಸೋತವು. ಸೂರ್ಯ ಅವರಿಗೆ ಹಿಟ್ ಸಿನಿಮಾದ ತೀವ್ರ ಅವಶ್ಯಕತೆ ಇತ್ತು. ಆ ಅವಶ್ಯಕತೆಯನ್ನು ಪೂರ್ಣಗೊಳಿಸಿದೆ ‘ಕರುಪ್ಪು’ ಸಿನಿಮಾ. ಆರ್ಜೆ ಬಾಲಾಜಿ ನಿರ್ದೇಶನದ ‘ಕರುಪ್ಪು’ ಸಿನಿಮಾ ದೊಡ್ಡ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ನಲ್ಲಿ ಸುಮಾರು 400 ಕೋಟಿ ರೂಪಾಯಿ ಹಣ ಗಳಿಸಿದೆ. ಇದೀಗ ತಮಗೆ ಹಿಟ್ ಕೊಟ್ಟ ನಿರ್ದೇಶಕನಿಗೆ ಐಶಾರಾಮಿ ಎಸ್ಯುವಿ ಕಾರೊಂದನ್ನು ನಟ ಸೂರ್ಯ ಉಡುಗೊರೆಯಾಗಿ ನೀಡಿದ್ದಾರೆ. ಮಾತ್ರವಲ್ಲದೆ, ಅದರಲ್ಲಿ ನಿರ್ದೇಶಕನನ್ನು ಕರೆದುಕೊಂಡು ನಗರದಲ್ಲಿ ರೌಂಡ್ ಸಹ ಹೊಡೆದಿದ್ದಾರೆ.
ಬಾಲಾಜಿ ಅವರಿಗೆ ಸೂರ್ಯ ಅವರು ಟೊಯೊಟಾ ಇನ್ನೋವ ಹೈಕ್ರಾಸ್ ಟಾಪ್ ಎಂಡ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಖುದ್ದು ಅವರೇ ಸೂರ್ಯ ಅವರನ್ನು ಕರೆದುಕೊಂಡು ಹೊಸ ಕಾರಿನಲ್ಲಿ ರೌಂಡ್ ಹೊಡೆಸಿದ್ದಾರೆ. ವಿಡಿಯೋ ಅನ್ನು ನಿರ್ದೇಶಕ ಬಾಲಾಜಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೋಂಡಿದ್ದಾರೆ. ಆರ್ಜೆ ಬಾಲಾಜಿ, ‘ತುಂಬಾ ಚೆನ್ನಾಗಿದೆ ಸರ್, ತುಂಬಾ ಥ್ಯಾಂಕ್ಸ್’ ಎಂದು ಸೂರ್ಯ ಅವರಿಗೆ ಹೇಳುತ್ತಿರುವ ವಿಡಿಯೋ ಅನ್ನು ಬಾಲಾಜಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿದವರು, ಸೂರ್ಯ ಅವರ ಕಾರ್ಯವನ್ನು ಕೊಂಡಾಡುತ್ತಿದ್ದಾರೆ.
ಆದರೆ ಕೆಲವು ದಿನಗಳ ಹಿಂದೆಯಷ್ಟೆ, ಸೂರ್ಯ ಅವರು ‘ಕರುಪ್ಪು’ ನಿರ್ದೇಶಕ ಬಾಲಾಜಿ ಮೇಲೆ ಬೇಸರಗೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಸಂದರ್ಶನಗಳಲ್ಲಿ ‘ಕರುಪ್ಪು’ ಸಿನಿಮಾ ವಿಜಯ್ ಅವರಿಗಾಗಿ ಮಾಡಿದ್ದು, ಅವರು ಒಪ್ಪಿಕೊಳ್ಳಲಿಲ್ಲ ಅದಕ್ಕೆ ಸೂರ್ಯ ಅವರಿಗೆ ಕತೆ ಹೇಳಿದೆ ಎಂದು ಬಾಲಾಜಿ ಹೇಳಿದ್ದರು. ಇದು ಸೂರ್ಯ ಅವರಿಗೆ ಬೇಸರ ತಂದಿದೆ ಎನ್ನಲಾಗಿತ್ತು. ಅದೇ ಸಮಯದಲ್ಲಿ ಸೂರ್ಯ ಅವರು ಹಂಚಿಕೊಂಡಿದ್ದ ಸಾಮಾಜಿಕ ಜಾಲತಾಣ ಪೋಸ್ಟ್ ಒಂದನ್ನು ಸಹ ಇದಕ್ಕೇ ಲಿಂಕ್ ಮಾಡಿ, ಬಾಲಾಜಿ ಮತ್ತು ಸೂರ್ಯ ನಡುವೆ ಎಲ್ಲವೂ ಸರಿಯಿಲ್ಲ ಎಂದಿದ್ದರು. ಆದರೆ ಅದನ್ನೆಲ್ಲ ಸುಳ್ಳು ಮಾಡಿ, ಇದೀಗ ಖುದ್ದು ಸೂರ್ಯ ಅವರು ಬಾಲಾಜಿ ಅವರನ್ನು ಕರೆಸಿ ಅವರಿಗೆ ಸುಮಾರು 45 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇದನ್ನೂ ಓದಿ:ಸೂರ್ಯವಂಶಿ ಟೀಮ್ ಇಂಡಿಯಾ ಡೆಬ್ಯೂ ವಿಳಂಬ? ಎದುರಾಯ್ತು ಅಡಚಣೆ
ಹಿಟ್ ಸಿನಿಮಾ ನೀಡಿದ ನಿರ್ದೇಶಕರುಗಳಿಗೆ ಐಶಾರಾಮಿ ಕಾರನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯ ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿದೆ. ‘ಜೈಲರ್’ ಸಿನಿಮಾ ಹಿಟ್ ಆದಾಗ ರಜನೀಕಾಂತ್, ನಿರ್ದೇಶಕ ನೆಲ್ಸನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಅವರಿಗೆ ನಿರ್ಮಾಪಕ ಕಲಾನಿಧಿ ಮಾರನ್ ಕೋಟ್ಯಂತರ ಮೌಲ್ಯದ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಆ ಬಳಿಕ ಉದಯನಿಧಿ ಸ್ಟಾಲಿನ್ ಅವರು ನಿರ್ದೇಶಕ ಮಾರಿ ಸೆಲ್ವರಾಜ್ ಅವರಿಗೆ ಮಿನಿ ಕೂಪರ್ ಕಾರು ಉಡುಗೊರೆಯಾಗಿ ಕೊಟ್ಟರು. ಲೋಕೇಶ್ ಕನಗರಾಜ್ ಅವರಿಗೆ ಕಮಲ್ ಹಾಸನ್ ಕಾರು ಉಡುಗೊರೆಯಾಗಿ ಕೊಟ್ಟರು. ಇನ್ನೂ ಹಲವು ನಿರ್ದೇಶಕರುಗಳಿಗೆ ಕಾರುಗಳು ಉಡುಗೊರೆಯಾಗಿ ದೊರೆತವು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ