Vishal Wedding: ನಟ ವಿಶಾಲ್ ಮದುವೆ ಯಾವಾಗ? ಬಹಿರಂಗ ವೇದಿಕೆಯಲ್ಲಿ ಪ್ಲ್ಯಾನ್ ತಿಳಿಸಿದ ಸ್ಟಾರ್ ಹೀರೋ
Laatti Movie Teaser launch Event: ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ವಿಶಾಲ್ ಗುರುತಿಸಿಕೊಂಡಿದ್ದಾರೆ. ಇಂಥ ಕಾರ್ಯಗಳಿಂದಾಗಿ ಅವರಿಗೆ ಅಭಿಮಾನಿಗಳು ಹೆಚ್ಚು ಗೌರವ ನೀಡುತ್ತಾರೆ.
ಖ್ಯಾತ ನಟ ವಿಶಾಲ್ (Vishal) ಅವರು ತಮಿಳು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುತ್ತ, ಅಭಿಮಾನಿಗಳನ್ನು ರಂಜಿಸಲು ಶ್ರಮಿಸುತ್ತಿದ್ದಾರೆ. ಈಗ ಅವರಿಗೆ 45 ವರ್ಷ ವಯಸ್ಸು. ವಿಶಾಲ್ ಯಾವಾಗ ಮದುವೆ (Vishal Marriage) ಆಗುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕೊರೆಯುತ್ತಿದೆ. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಬಹಿರಂಗ ವೇದಿಕೆಯಲ್ಲಿ ಈ ಬಗ್ಗೆ ವಿಶಾಲ್ ಮಾತನಾಡಿದ್ದಾರೆ. ಅವರು ನಟಿಸಿರುವ ‘ಲಾಠಿ’ ಚಿತ್ರದ (Laatti Movie) ಟೀಸರ್ ಲಾಂಚ್ ಕಾರ್ಯಕ್ರಮ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಮದುವೆ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಅವರು ನೇರವಾಗಿ ಉತ್ತರಿಸಿದ್ದಾರೆ.
ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ವಿಶಾಲ್ ಗುರುತಿಸಿಕೊಂಡಿದ್ದಾರೆ. ಇಂಥ ಕಾರ್ಯಗಳಿಂದಾಗಿ ಅವರಿಗೆ ಅಭಿಮಾನಿಗಳು ಹೆಚ್ಚು ಗೌರವ ನೀಡುತ್ತಾರೆ. ಪುನೀತ್ ರಾಜ್ಕುಮಾರ್ ಅವರು ನಿಧನರಾದಾಗ ಶಕ್ತಿಧಾಮದ ಮಕ್ಕಳ ಜವಾಬ್ದಾರಿ ಹೊತ್ತುಕೊಳ್ಳುತ್ತೇನೆ ಎಂದು ವಿಶಾಲ್ ಹೇಳಿದ್ದರು. ಹಾಗೆಯೇ ಅವರು ಚಿತ್ರರಂಗದ ಕಾರ್ಮಿಕರು ಮತ್ತು ಕಲಾವಿದರಿಗಾಗಿ ಶ್ರಮಿಸುತ್ತಿದ್ದಾರೆ.
‘ಪ್ರತಿ ವಿಚಾರಕ್ಕೂ ಒಂದು ಟೈಮ್ ಬರಬೇಕು. ದಕ್ಷಿಣ ಭಾರತದ ಕಲಾವಿದರ ಸಂಘದ ಕಟ್ಟಡ ನಿರ್ಮಾಣ ಆದ ಬಳಿಕ ಮೊದಲ ಮುಹೂರ್ತದಲ್ಲಿ ನಾನು ಮದುವೆ ಆಗುತ್ತೇನೆ. ಆ ಕಟ್ಟಡದಿಂದ 3500 ಕಲಾವಿದರ ಕುಟುಂಬಗಳಿಗೆ ಸಹಾಯ ಆಗಲಿದೆ’ ಎಂದು ವಿಶಾಲ್ ಹೇಳಿದ್ದಾರೆ. ಸಿನಿಮಾ ಮತ್ತು ರಂಗಭೂಮಿ ಕಲಾವಿದರಿಗೆ ಪಿಂಚಣಿ, ಹೆಲ್ತ್ ಇನ್ಶೂರೆನ್ಸ್, ಮೇಕಪ್ ಸಾಮಾಗ್ರಿ ಮುಂತಾದ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ವಿಶಾಲ್ ಕಷ್ಟಪಡುತ್ತಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟು ಹೊತ್ತಿಗಾಗಲೇ ವಿಶಾಲ್ ಅವರ ಮದುವೆ ನಡೆದಿರಬೇಕಿತ್ತು. ಹೈದರಾಬಾದ್ ಬೆಡಗಿಯೊಬ್ಬರ ಜೊತೆ ಅವರ ವಿವಾಹ ನಿಶ್ಚಯ ಆಗಿತ್ತು. ಆದರೆ ನಂತರದಲ್ಲಿ ಆ ಸಂಬಂಧ ಮುರಿದು ಬಿತ್ತು. ಈಗ ವಿಶಾಲ್ ಅವರು ಯುವತಿಯೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತಿದೆ. ಆದರೆ ಅದು ಯಾರು ಎಂಬುದು ಸದ್ಯಕ್ಕೆ ಬಹಿರಂಗ ಆಗಿಲ್ಲ.
ಶೀಘ್ರದಲ್ಲೇ ವಿಶಾಲ್ ಅವರು ತಮ್ಮ ಪ್ರಿಯತಮೆ ಯಾರೆಂಬುದನ್ನು ತಿಳಿಸಲಿದ್ದಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ. ಆದಷ್ಟು ಬೇಗ ದಕ್ಷಿಣ ಭಾರತದ ಕಲಾವಿದರ ಸಂಘದ ಕಟ್ಟಡ ನಿರ್ಮಾಣ ಆಗಲಿ. ಆನಂತರ ವಿಶಾಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.
ಕರ್ನಾಟಕದ ಜೊತೆ ವಿಶಾಲ್ ನಂಟು ಹೊಂದಿದ್ದಾರೆ. ಇತ್ತೀಚೆಗೆ ಅವರು ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿ ದೇವಾಲಯಕ್ಕೆ ಬಂದು ಹೋಗಿದ್ದಾರೆ. ಈ ಮೊದಲು ಮೈಸೂರಿನ ಶಕ್ತಿಧಾಮಕ್ಕೂ ಅವರು ಭೇಟಿ ನೀಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.