ಮಲಯಾಳಂ (Malayalam) ಚಿತ್ರರಂಗದಲ್ಲಿ ನಟಿ ಮಮತಾ ಮೋಹನ್ದಾಸ್ (Mamta Mohandas) ಹೆಸರು ಚಿರಪರಿಚಿತ. ಹಾಗೆಂದು ಮಲಯಾಳಂ ಚಿತ್ರರಂಗಕ್ಕೆ ಮಾತ್ರವೇ ಈ ನಟಿ ಸೀಮಿತವಲ್ಲ. ತೆಲುಗು, ತಮಿಳು, ಕನ್ನಡದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದ ಮಮತಾರನ್ನು ಮೊದಲು ತೆಲುಗಿಗೆ ಕರೆತಂದಿದ್ದು ನಿರ್ದೇಶಕ ರಾಜಮೌಳಿ. ಆದರೆ ಸಿನಿಮಾ ಒಂದರ ಆಯ್ಕೆಗೆ ಸಂಬಂಧಿಸಿದಂತೆ ರಾಜಮೌಳಿ (Rajamouli) ಹೇಳಿದ ಮಾತಿನಿಂದ ತಮ್ಮ ಹೃದಯ ಒಡೆದುಹೋಗಿತ್ತು ಎಂದು ನಟಿ ಇತ್ತೀಚೆಗೆ ಹೇಳಿಕೊಂಡಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಮಮತಾಗೆ ತೆಲುಗು ಸಿನಿಮಾ ಒಂದರ ಅವಕಾಶ ಬಂದಿತ್ತಂತೆ. ಮಮತಾ ಸಹ ನಟಿಸಲು ಒಪ್ಪಿಗೆ ನೀಡಿಬಿಟ್ಟಿದ್ದರು. ಆದರೆ ಮ್ಯಾನೆಜರ್ ಒಬ್ಬ, ನಿಮಗೆ ಸಿನಿಮಾ ಆಫರ್ ಮಾಡಿರುವ ನಿರ್ಮಾಣ ಸಂಸ್ಥೆ ದೊಡ್ಡದಲ್ಲ, ಅದೊಂದು ಸಾಮಾನ್ಯ ನಿರ್ಮಾಣ ಸಂಸ್ಥೆ ಎಂದನಂತೆ. ಅವನ ಮಾತು ಕೇಳಿ ಮಮತಾ ಸಹ ಆ ತೆಲುಗು ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಬಿಟ್ಟಿದ್ದಾರೆ. ಆದರೆ ಮಮತಾ ಕೈಬಿಟ್ಟ ಆ ಸಿನಿಮಾ ತೆಲುಗಿನ ಸಾರ್ವಕಾಲಿಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ, ಅದುವೇ “ಅರುಂಧತಿ” .
ಹೌದು, ತೆಲುಗಿನ ಸೂಪರ್ ಡೂಪರ್ ಹಿಟ್ ಸಿನಿಮಾ ಅರುಂಧತಿಗೆ ನಾಯಕಿ ಆಗಬೇಕಿದ್ದಿದ್ದು ಮಮತಾ ಮೋಹನ್ದಾಸ್ ಆದರೆ ಯಾರದ್ದೋ ಮಾತು ಕೇಳಿ ಅವಕಾಶ ಕೈಚೆಲ್ಲಿಕೊಂಡರು. ಮಮತಾ ಕೈಚೆಲ್ಲಿದ ಅವಕಾಶವನ್ನು ಬಾಚಿಕೊಂಡ ಅನುಷ್ಕಾ ಶೆಟ್ಟಿ ಅತ್ಯುತ್ತಮ ಪ್ರದರ್ಶನ ನೀಡಿ ‘ಅರುಂಧತಿ’ಯನ್ನು ಕರಿಯರ್ ಬೆಸ್ಟ್ ಸಿನಿಮಾವನ್ನಾಗಿ ಮಾಡಿಕೊಂಡರು.
Ram Charan Teja: ಅಮೆರಿಕದಲ್ಲಿ ಮಿಂಚು ಹರಿಸಿದ ರಾಮ್ ಚರಣ್, ರಾಜಮೌಳಿ ಬಗ್ಗೆ ಮೆಚ್ಚುಗೆಯ ಸುರಿಮಳೆ
“ಅರುಂಧತಿ’, ಸಿನಿಮಾ ಕೈಬಿಟ್ಟ ಸಂದರ್ಭದಲ್ಲಿಯೇ ನಿರ್ದೇಶಕ ರಾಜಮೌಳಿ, ಮಮತಾರನ್ನು ಸಂಪರ್ಕಿಸಿ ತಮ್ಮ ಯಮದೊಂಗ’ ಸಿನಿಮಾದಲ್ಲಿ ನಟಿಸುವಂತೆ ಆಫರ್ ನೀಡಿದರು. ಮಮತಾ ಸಹ ಓಕೆ ಎಂದಿದ್ದಾರೆ. ಆಡಿಷನ್ಗಾಗಿ ರಾಜಮೌಳಿಯನ್ನು ಭೇಟಿಯಾಗಿ ತಮಗೆ “ಅರುಂಧತಿ” ಸಿನಿಮಾದ ಆಫರ್ ಬಂದಿದ್ದಾಗಿಯೂ ಅದನ್ನು ಕೈಚೆಲ್ಲಿದ್ದಾಗಿಯೂ ಹೇಳಿದಾಗ, ರಾಜಮೌಳಿ ಬೈದು, ಬಹು ದೊಡ್ಡ ಅವಕಾಶವನ್ನು ನೀವು ಕೈಚೆಲ್ಲಿದಿರಿ ಎಂದು ಹೇಳಿದರಂತೆ. ಅಂದು ರಾಜಮೌಳಿಯ ಮಾತು ಕೇಳಿ ನನ್ನ ಹೃದಯ ಒಡೆದು ಚೂರಾಗಿ ಹೋಯ್ತು ಎಂದು ಇತ್ತೀಚೆಗಿನ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ ನಟಿ ಮಮತಾ.
ನಾನು “ಅರುಂಧತಿ” ಸಿನಿಮಾದಲ್ಲಿ ನಟಿಸುವುದಿಲ್ಲ ಎಂದ ಬಳಿಕವೂ ಎರಡು ಮೂರು ತಿಂಗಳು ಸಿನಿಮಾದ ನಿರ್ಮಾಪಕ ಶ್ಯಾಮ್ ಪ್ರಸಾದ್ ಆಗಾಗ ನನ್ನನ್ನು ಒಪ್ಪಿಸಲು ಪ್ರಯತ್ನ ಮಾಡಿದರು ಆದರೆ ನಾನು ಒಪ್ಪಲಿಲ್ಲ ಎಂದು ಮಮತಾ ನೆನಪಿಸಿಕೊಂಡಿದ್ದಾರೆ.
“ಅರುಂಧತಿ” ಕೈಬಿಟ್ಟರೂ ಸಹ ರಾಜಮೌಳಿ ನಿರ್ದೇಶನದ “ಯಮದೊಂಗ” ಸಿನಿಮಾ ಮಮತಾರ ಕೈ ಹಿಡಿಯಿತು. ಆ ಸಿನಿಮಾದ ಬಳಿಕ ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಮಮತಾರಿಗೆ ದೊರೆಯಿತು. ಕನ್ನಡದಲ್ಲಿ ಸುದೀಪ್ ಜೊತೆ “ಗೂಳಿ” ಸಿನಿಮಾದಲ್ಲಿ ನಟಿಸಿದ ನಟಿ, ರಜನೀಕಾಂತ್ ಜೊತೆಗೆ “ಕುಸೇಲನ್”, ನಾಗಾರ್ಜುನ ಜೊತೆಗೆ “ಕಿಂಗ್’, “ಕೇಡಿ’, “ಕೃಷ್ಣಾರ್ಜುನ’, ಇನ್ನೂ ಕೆಲವು ಸ್ಟಾರ್ ನಟರೊಟ್ಟಿಗೆ ನಟಿಸಿದರು. ಆದರೆ “ಗೂಳಿ’ ಸಿನಿಮಾ ಬಳಿಕ ಮತ್ಯಾವುದೇ ಕನ್ನಡ ಸಿನಿಮಾದಲ್ಲಿ ನಟಿಸಲಿಲ್ಲ.