ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಆಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಾಕಷ್ಟು ಟೀಕೆಗಳನ್ನು ಮಾಡುತ್ತಿದೆ. ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ಸರ್ಕಾರ 40% ಕಮಿಷನ್ಮೇಲೆ ನಡೆಯುತ್ತಿದೆ’ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸುತ್ತಾ ಬಂದಿದೆ. ಬಿಜೆಪಿ ವಿರುದ್ಧ ಸತತ ಟೀಕೆ ಮಾಡುತ್ತಲೇ ಬರುತ್ತಿರುವ ಕಾಂಗ್ರೆಸ್ ಈಗ ಇಕ್ಕಟ್ಟಿಗೆ ಸಿಲುಕಿದೆ. 40% ಸರ್ಕಾರ ಕ್ಯಾಂಪೇನ್ನಲ್ಲಿ ಬಾಲಿವುಡ್ ನಟ ಅಖಿಲ್ ಅಯ್ಯರ್ (Akhil Iyer) ಫೋಟೋ ಬಳಕೆ ಆಗಿದೆ. ಈ ಫೋಟೋ ಬಳಕೆಗೆ ಕಾಂಗ್ರೆಸ್ ಅನುಮತಿ ಪಡೆದಿಲ್ಲ. ಈ ಕಾರಣದಿಂದ ಅಖಿಲ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
‘40% ಸರ್ಕಾರ’ ಕ್ಯಾಂಪೇನ್ಗೆ ಸಂಬಂಧಿಸಿ ಪೋಸ್ಟರ್ ಒಂದನ್ನು ಕಾಂಗ್ರೆಸ್ ಹಂಚಿಕೊಂಡಿತ್ತು. ‘40% ಸರ್ಕಾರವು 54 ಸಾವಿರ ಯುವಕರ ವೃತ್ತಿಜೀವನವನ್ನು ನಾಶ ಮಾಡಿದೆ’ ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ. ಈ ಪೋಸ್ಟ್ಗೆ ನಟ ಅಖಿಲ್ ಅಯ್ಯರ್ ಫೋಟೋ ಬಳಕೆ ಆಗಿದೆ. ಈ ಬಗ್ಗೆ ಅಖಿಲ್ ಅಪಸ್ವರ ತೆಗೆದಿದ್ದಾರೆ. ಒಪ್ಪಿಗೆ ಇಲ್ಲದೆ ಈ ಕ್ಯಾಂಪೇನ್ಗೆ ತಮ್ಮ ಫೋಟೋ ಬಳಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಟ್ವಿಟರ್ನಲ್ಲಿ ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ.
‘40% ಸರ್ಕಾರ ಪೋಸ್ಟರ್ನಲ್ಲಿ ನನ್ನ ಫೋಟೋ ಬಳಕೆ ಆಗಿದೆ. ಅಕ್ರಮವಾಗಿ ನನ್ನ ಫೋಟೋವನ್ನು ಕಾಂಗ್ರೆಸ್ ಬಳಸಿದೆ. ಕಾಂಗ್ರೆಸ್ ಕ್ಯಾಂಪೇನ್ನಲ್ಲಿ ನನ್ನ ಪಾತ್ರವಿಲ್ಲ. ನಾನು ಕಾನೂನು ಕ್ರಮ ಕೈಗೊಳ್ಳಲಿದ್ದೇನೆ. ರಾಹುಲ್ ಗಾಂಧಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ವಿಚಾರದ ಬಗ್ಗೆ ಗಮನ ಹರಿಸಬೇಕು’ ಎಂದು ಕೋರಿದ್ದಾರೆ ಅಖಿಲ್.
ಈ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಇಂಡಿಯನ್ ಎಕ್ಸ್ಪ್ರೆಸ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಅಖಿಲ್ ಟ್ವೀಟ್ ನೋಡಿದ ನಂತರದಲ್ಲಿ ನಾವು ಆ ಪೋಸ್ಟ್ಅನ್ನು ಡಿಲೀಟ್ ಮಾಡಿದ್ದೇವೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
I am appalled to see that my face is being used illegally and without my consent for “40% Sarkara” – an @INCIndia campaign that i have nothing to do with.
I will be taking legal action against this.@RahulGandhi @siddaramaiah @INCKarnataka request you to please look into this pic.twitter.com/y7LZ9wRXW9
— Akhil Iyer (@akhiliy) September 23, 2022
ಇದನ್ನೂ ಓದಿ: 40 ಪರ್ಸೆಂಟ್ ಕಮಿಷನ್, ಭ್ರಷ್ಟಾಚಾರದ ಬಗ್ಗೆ ಚರ್ಚೆಗೆ ಸದನದಲ್ಲಿ ಸಹಮತ: ಕಾವೇರಿದ ಮಾತಿನ ಚಕಮಕಿ ನಿರೀಕ್ಷಿತ
ಅಖಿಲ್ ಅವರು ಹಿಂದಿ ಚಿತ್ರರಂಗದಲ್ಲಿ ನಟಿಸಿದ್ದಾರೆ. 2014ರಲ್ಲಿ ತೆರೆಗೆ ಬಂದ ‘ಲೇಕರ್ ಹಂ ದೀವಾನಾ ದಿಲ್’ ಚಿತ್ರ ಅವರ ಮೊದಲ ಸಿನಿಮಾ. ನಂತರ ಎರಡು ತಮಿಳು ಚಿತ್ರಗಳಲ್ಲಿ ನಟಿಸಿದರು. ಈ ವರ್ಷ ತೆರೆಗೆ ಬಂದ ಹಿಂದಿಯ ‘ಹಿಟ್: ದಿ ಫಸ್ಟ್ ಕೇಸ್’ ಚಿತ್ರದಲ್ಲೂ ಅಖಿಲ್ ನಟಿಸಿದ್ದಾರೆ. ಅಖಿಲ್ ಅವರು ಜನಿಸಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ.