
ಅಕ್ಕಿನೇನಿ ನಾಗಾರ್ಜುನ ಅವರು (Akkineni Nagarjuna) ಸಿನಿಮಾ ಜತೆಗೆ ಸಾಕಷ್ಟು ಸಾಮಾಜಿಕ ಕೆಲಸಗಳ (Social Work) ಮೂಲಕವೂ ಗುರುತಿಸಿಕೊಂಡಿದ್ದಾರೆ. ಜನರಿಗೆ ಹಾಗೂ ಸಮಾಜಕ್ಕೆ ಒಳಿತಾಗುವ ಸಾಕಷ್ಟು ಕೆಲಸಗಳನ್ನು ಅವರು ಮಾಡಿದ್ದಾರೆ. ಕಳೆದ ವರ್ಷ ತೆಲುಗು ಬಿಗ್ ಬಾಸ್ ವೇದಿಕೆ ಮೇಲೆ 1000 ಎಕರೆ ಕಾಡನ್ನು (Forest Land) ದತ್ತು ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಈಗ ಅದನ್ನು ಈಡೇರಿಸಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಅವರ ಕೆಲಸಕ್ಕೆ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಾಜ್ಯ ಸಭೆಯ ಸದಸ್ಯ ಸಂತೋಷ್ ಜೋಗಿನಪಲ್ಲಿ ಅವರಿಗೆ ಮರಗಳ ಮೇಲೆ ಅತ್ಯಂತ ಹೆಚ್ಚು ಪ್ರೀತಿ. ಅವರು ಮರಗಳನ್ನು ಉಳಿಸಲು ಹಾಗೂ ಬೆಳೆಸಲು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಇವರ ಪರಿಚಯ ಅನೇಕರಿಗೆ ಇದೆ. ಗ್ರೀನ್ ಇಂಡಿಯಾ ಚಾಲೆಂಜ್ ಅಡಿಯಲ್ಲಿ 16 ಕೋಟಿ ಮರಗಳನ್ನು ಅವರು ಬೆಳೆಸಿದ್ದಾರೆ. ಈ ಒಂದು ಅದ್ಭುತ ಕೆಲಸಕ್ಕೆ ಸಾಕಷ್ಟು ಸೆಲೆಬ್ರಿಟಿಗಳನ್ನೂ ಅವರು ಸೇರ್ಪಡೆ ಮಾಡಿಕೊಂಡಿದ್ದಾರೆ. ಈಗ ಈ ಸಾಲಿಗೆ ಅಕ್ಕಿನೇನಿ ನಾಗಾರ್ಜುನ ಕೂಡ ಸೇರಿಕೊಂಡಿದ್ದರು.
ಸಂತೋಷ್ ಅವರು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕಳೆದ ವರ್ಷ ತೆಲುಗು ಬಿಗ್ ಬಾಸ್ ವೇದಿಕೆ ಏರಿದ್ದರು. ಈ ವೇಳೆ ಪ್ರಭಾಸ್ ಅವರು 1643 ಎಕರೆ ಅರಣ್ಯ ದತ್ತು ಪಡೆದಿದ್ದಾರೆ ಎಂದು ಸಂತೋಷ್ ಮಾಹಿತಿ ನೀಡಿದ್ದರು. ಈ ವೇಳೆ ನಾಗಾರ್ಜುನ ಅವರು ನಿಜಕ್ಕೂ ಸಂತಸಗೊಂಡರು. ಅಲ್ಲದೆ, 1,080 ಎಕರೆ ಕಾಡನ್ನು ದತ್ತು ಪಡೆಯುವುದಾಗಿ ಆ ಕ್ಷಣವೇ ಘೋಷಿಸಿದ್ದರು. ‘ಪರಿಸರವನ್ನು ಕಾಪಾಡುವ ಜವಾಬ್ದಾರಿ ನಮ್ಮದು. ಹೀಗಾಗಿ, ಕಾಡುಗಳನ್ನು ನಾನು ದತ್ತುಪಡೆಯುತ್ತಿದ್ದೇನೆ. ಆ ಕಾಡನ್ನು ಪೋಷಿಸುವ ಹೊಣೆಯನ್ನು ನಾನು ಈಗಲೇ ಹೊತ್ತುಕೊಳ್ಳುತ್ತಿದ್ದೇನೆ’ ಎಂದಿದ್ದರು. ಈಗ ಆ ಭರವಸೆಯನ್ನು ಅವರು ಈಡೇರಿಸಿದ್ದಾರೆ.
ಹೈದರಾಬಾದ್ ಹೊರವಲಯದಲ್ಲಿರುವ ಚೆಂಗಿಚೆರ್ಲಾ ಅರಣ್ಯಭಾಗವನ್ನು ತಂದೆ ಅಕ್ಕಿನೇನಿ ನಾಗೇಶ್ವರ್ ರಾವ್ ಹೆಸರಲ್ಲಿ ನಾಗಾರ್ಜುನ ದತ್ತು ಪಡೆದಿದ್ದಾರೆ. ಇದಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮ ನಡೆದಿದೆ. ಅಕ್ಕಿನೇನಿ ನಾಗಾರ್ಜುನ, ಅಮಲಾ, ನಾಗ ಚೈತನ್ಯ, ಎಂಪಿ ಜೆ. ಸಂತೋಷ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾಡನ್ನು ಬೆಳೆಸಲು ನಾಗಾರ್ಜುನ ಅವರು ಎರಡು ಕೋಟಿ ರೂಪಾಯಿ ಚೆಕ್ ನೀಡಿದ್ದಾರೆ.
‘ಗ್ರೀನ್ ಇಂಡಿಯಾ ಚಾಲೆಂಜ್’ಅನ್ನು ನಾಗಾರ್ಜುನ ಅವರು ಸ್ವೀಕರಿಸಿರುವುದಕ್ಕೆ ಸಂತೋಷ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾಡಿನಲ್ಲಿ ಖಾಲಿ ಇರುವ ಜಾಗದಲ್ಲಿ, ಬಯಲು ಭಾಗದಲ್ಲಿ ಮರಗಳನ್ನು ನಡೆಯುವ ಕಾರ್ಯ ನಡೆಯಲಿದೆ. ಈ ಮೂಲಕ ಬರಡು ಭೂಮಿಯಲ್ಲಿ ಮತ್ತೆ ಹಸಿರನ್ನು ಚಿಗುರಿಸುವ ಯೋಜನೆ ಇದಾಗಿದೆ. ಗ್ರೀನ್ ಇಂಡಿಯಾ ಚಾಲೆಂಜ್ ಅಡಿಯಲ್ಲಿ ಹೈದರಾಬಾದ್ ಹೊರ ವಲಯದಲ್ಲಿರುವ 1.50 ಲಕ್ಷ ಎಕರೆ ಜಾಗವನ್ನು ರಕ್ಷಣೆ ಮಾಡಿ, ಕಾಡನ್ನು ಬೆಳೆಸಲಾಗುತ್ತದೆ. ಉದ್ಯಮಿಗಳು, ಸಾಮಾಜಿಕ ಕೆಲಸ ಮಾಡುವವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಅಕ್ಕಿನೇನಿ ನಾಗಾರ್ಜುನ ನಟನೆಯ ‘ಬಂಗಾರ್ರಾಜು’ ಸಿನಿಮಾ ಸಂಕ್ರಾಂತಿ ನಿಮಿತ್ತ ತೆರೆಗೆ ಬಂದು ಯಶಸ್ಸು ಕಂಡಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಈಗ ಅವರು ವೆಬ್ ಸೀರಿಸ್ ಮೂಲಕ ಪ್ರೇಕ್ಷಕರ ಎದುರು ಬರಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಅಕ್ಕಿನೇನಿ ಕುಟುಂಬಕ್ಕೆ ಸಿಹಿ ಸುದ್ದಿ; ಖುಷಿಪಟ್ಟ ಅಭಿಮಾನಿಗಳು
‘ಸಮಂತಾ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಿಲ್ಲ’; ಕಿಡಿಕಾರಿದ ಅಕ್ಕಿನೇನಿ ನಾಗಾರ್ಜುನ
Published On - 1:27 pm, Thu, 17 February 22