ಸಂಧ್ಯಾ ಥಿಯೇಟರ್ ಕಾಲ್ತುಳಿತ: ಮೃತ ಮಹಿಳೆ ಕುಟುಂಬಕ್ಕೆ 2 ಕೋಟಿ ಕೊಟ್ಟ ಅಲ್ಲು ಅರ್ಜುನ್

|

Updated on: Dec 25, 2024 | 8:44 PM

Allu Arjun: ಸಂಧ್ಯಾ ಚಿತ್ರಮಂದಿರ ಕಾಲ್ತುಳಿತ ಪ್ರಕರಣದಲ್ಲಿ ಜೀವ ಕಳೆದುಕೊಂಡ ಮಹಿಳೆಯ ಕುಟುಂಬಕ್ಕೆ ನಟ ಅಲ್ಲು ಅರ್ಜುನ್, ಮೈತ್ರಿ ಮೂವಿ ಮೇಕರ್ಸ್ ಮತ್ತು ‘ಪುಷ್ಪ 2’ ಸಿನಿಮಾ ನಿರ್ದೇಶಕ ಸುಕುಮಾರ್ ಅವರುಗಳು ಬರೋಬ್ಬರಿ ಎರಡು ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ವಿಷಯವನ್ನು ಅಲ್ಲು ಅರವಿಂದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಂಧ್ಯಾ ಥಿಯೇಟರ್ ಕಾಲ್ತುಳಿತ: ಮೃತ ಮಹಿಳೆ ಕುಟುಂಬಕ್ಕೆ 2 ಕೋಟಿ ಕೊಟ್ಟ ಅಲ್ಲು ಅರ್ಜುನ್
Allu Arjun
Follow us on

ಸಂಧ್ಯಾ ಚಿತ್ರಮಂದಿರ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಅಲ್ಲು ಅರ್ಜುನ್ ಮತ್ತು ‘ಪುಷ್ಪ 2’ ಚಿತ್ರತಂಡದ ವತಿಯಿಂದ ಬರೋಬ್ಬರಿ ಎರಡು ಕೋಟಿ ರೂಪಾಯಿ ಹಣ ನೀಡಲಾಗಿದೆ. ಈ ಹಿಂದೆ ನಟ ಅಲ್ಲು ಅರ್ಜುನ್ ಅವರು ಕುಟುಂಬಕ್ಕೆ 25 ಲಕ್ಷ ರೂಪಾಯಿ ಘೋಷಣೆ ಮಾಡಿದ್ದರು. ಜೊತೆಗೆ ಆಸ್ಪತ್ರೆಯಲ್ಲಿರುವ ಬಾಲಕನ ಸಂಪೂರ್ಣ ಚಿಕಿತ್ಸೆ ಖರ್ಚು ಭರಿಸುವುದಾಗಿ ಅಲ್ಲು ಅರ್ಜುನ್ ಹೇಳಿದ್ದರು. ಆದರೆ ಆ ಬಳಿಕ ನಡೆದ ಘಟನೆಗಳು, ಜನರ ಪ್ರತಿಕ್ರಿಯೆ, ಸರ್ಕಾರ ಮತ್ತು ಪೊಲೀಸರು ನಡೆದುಕೊಂಡ ರೀತಿ ಎಲ್ಲದರ ಬಳಿಕ ಇದೀಗ ಸಂತ್ರಸ್ತ ಕುಟುಂಬಕ್ಕೆ ಎರಡು ಕೋಟಿ ರೂಪಾಯಿ ನೀಡಲಾಗುತ್ತಿದೆ.

ಸಂಧ್ಯಾ ಚಿತ್ರಮಂದಿರ ಕಾಲ್ತುಳಿತ ಪ್ರಕರಣದ ಆರೋಪಿ ಆಗಿರುವ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಇಂದು (ಡಿಸೆಂಬರ್ 25) ರಂದು ಕಾಲ್ತುಳಿತ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಬಾಲಕನನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಮಾತನಾಡಿದ ಅಲ್ಲು ಅರವಿಂದ್, ‘ನಾನು ವೈದ್ಯರ ಬಳಿ ಮಾತನಾಡಿದೆ ಆ ಬಾಲಕನ ಆರೋಗ್ಯ ಸುಧಾರಿಸುತ್ತಿದೆ ಇದು ಖುಷಿಯ ವಿಷಯ. ಆ ಬಾಲಕನಿಗೆ ಆತನ ಕುಟುಂಬಕ್ಕೆ ನಾವು ಎರಡು ಕೋಟಿ ರೂಪಾಯಿ ಹಣ ನೀಡುವ ನಿರ್ಧಾರ ಮಾಡಿದ್ದೇವೆ’ ಎಂದಿದ್ದಾರೆ.

ಇದನ್ನೂ ಓದಿ:ಅಲ್ಲು ಅರ್ಜುನ್ ಬಳಿ ಇರುವ ದುಬಾರಿ ಐದು ವಸ್ತುಗಳಿವು

‘ಅಲ್ಲು ಅರ್ಜುನ್ ಒಂದು ಕೋಟಿ ರೂಪಾಯಿ ನೆರವು ನೀಡಲಿದ್ದಾರೆ. ‘ಪುಷ್ಪ 2’ ಸಿನಿಮಾದ ನಿರ್ಮಾಪಕರಾದ ಮೈತ್ರಿ ಮೂವಿ ಮೇಕರ್ಸ್​ನವರು 50 ಲಕ್ಷ ರೂಪಾಯಿ ಹಣ ನೀಡಲಿದ್ದಾರೆ. ಸಿನಿಮಾದ ನಿರ್ದೇಶಕ ಸುಕುಮಾರ್ ಅವರು 50 ಲಕ್ಷ ರೂಪಾಯಿ ನೀಡಲಿದ್ದಾರೆ. ಅಲ್ಲಿಗೆ ಒಟ್ಟಿಗೆ 2 ಕೋಟಿ ರೂಪಾಯಿ ಹಣವನ್ನು ಬಾಲಕ ಹಾಗೂ ಅವರ ಕುಟುಂಬದ ಬೆಂಬಲಕ್ಕಾಗಿ ನೀಡುತ್ತಿದ್ದಾರೆ’ ಎಂದಿದ್ದಾರೆ ಅಲ್ಲು ಅರವಿಂದ್.

ಡಿಸೆಂಬರ್ 04 ರಂದು ಅಲ್ಲು ಅರ್ಜುನ್ ತಮ್ಮ ಕುಟುಂಬದೊಂದಿಗೆ ಸಂಧ್ಯಾ ಚಿತ್ರಮಂದಿರಕ್ಕೆ ‘ಪುಷ್ಪ 2’ ಸಿನಿಮಾ ವೀಕ್ಷಿಸಲು ತೆರಳಿದ್ದರು. ಈ ವೇಳೆ ನಡೆದ ನೂಕಾಟದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಅವರ ಪುತ್ರ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಲ್ಲು ಅರ್ಜುನ್ ಅನ್ನು ಬಂಧಿಸಿದ್ದರು. ಹೈಕೋರ್ಟ್​ನಲ್ಲಿ ಮಧ್ಯಂತರ ಜಾಮೀನು ದೊರಕಿತಾದರೂ ಅಲ್ಲು ಅರ್ಜುನ್ ಒಂದು ರಾತ್ರಿಯನ್ನು ಜೈಲಿನಲ್ಲಿ ಕಳೆಯಬೇಕಾಯ್ತು. ಆ ಬಳಿಕ ಅಲ್ಲು ಅರ್ಜುನ್ ಮನೆ ಮೇಲೆ ಕೆಲವು ಅಗಂತುಕರು ದಾಳಿ ಮಾಡಿ ಹೂಕುಂಡಗಳನ್ನು ಒಡೆದು ಹಾಕಿದರು. ಬಾಲಕನಿಗೆ 1 ಕೋಟಿ ಕೊಡುವಂತೆ ಒತ್ತಾಯ ಮಾಡಿದರು. ಇದೀಗ ಎರಡು ಕೋಟಿ ಹಣವನ್ನೇ ಬಾಲಕ ಮತ್ತು ಆತನ ಕುಟುಂಬಕ್ಕೆ ನೀಡಲಾಗುತ್ತಿದೆ. ಇತ್ತೀಚೆಗಷ್ಟೆ ಸಿನಿಮಾಟೊಗ್ರಫಿ ಸಚಿವರು 25 ಲಕ್ಷ ರೂಪಾಯಿ ಹಣವನ್ನು ಬಾಲಕನಿಗೆ ನೀಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:50 pm, Wed, 25 December 24