‘ಕಂಗುವ’ ಸೋಲಿನ ಬಳಿಕ ‘ರೆಟ್ರೊ’ ಅವತಾರದಲ್ಲಿ ಮರಳಿದ ಸೂರ್ಯ
Suriya Movie: ಸೂರ್ಯ ನಟಿಸಿದ್ದ ‘ಕಂಗುವ’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿ ಫ್ಲಾಪ್ ಆಗಿದೆ. ಅದರ ಬೆನ್ನಲ್ಲೆ ಇದೀಗ ‘ರೆಟ್ರೊ’ ಹೆಸರಿನ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಸಿನಿಮಾದ ಟೈಟಲ್ ಟೀಸರ್ ಇಂದಷ್ಟೆ ಬಿಡುಗಡೆ ಆಗಿದ್ದು, ಗಮನ ಸೆಳೆಯುತ್ತಿದೆ.
ತಮಿಳಿನ ಸ್ಟಾರ್ ನಟ ಸೂರ್ಯ ಕ್ಲಾಸ್ ಹಾಗೂ ಮಾಸ್ ಎರಡರ ಮಿಶ್ರಣ. ಕ್ಲಾಸ್ ಕತೆಗಳು ಮತ್ತು ಮಾಸ್ ಪಾತ್ರಗಳಲ್ಲಿಯೂ ಸೂರ್ಯ ನಟಿಸಬಲ್ಲರು. ಎರಡೂ ವಿಧದ ಪಾತ್ರಗಳಿಗೆ ಸರಿ ಹೊಂದುತ್ತಾರೆ. ಇತ್ತೀಚೆಗಷ್ಟೆ ಸೂರ್ಯ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಕಂಗುವ’ ಬಿಡುಗಡೆ ಆಗಿತ್ತು. ಸಿನಿಮಾದ ಬಗ್ಗೆ ಸ್ವತಃ ಸೂರ್ಯ ಅವರಿಗೂ ಭಾರಿ ನಿರೀಕ್ಷೆ ಇತ್ತು. ಆದರೆ ‘ಕಂಗುವ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿತು. ಸಿನಿಮಾದ ಒಟ್ಟು ಬಂಡವಾಳದ ಅರ್ಧದಷ್ಟು ಸಹ ಬಾಕ್ಸ್ ಆಫೀಸ್ನಿಂದ ಬರಲಿಲ್ಲ ಎನ್ನಲಾಗುತ್ತಿದೆ. ಭಾರಿ ಸೋಲಿನ ಬಳಿಕ ಇದೀಗ ಸೂರ್ಯ ‘ರೆಟ್ರೊ’ ಅವತಾರದಲ್ಲಿ ಮರಳಿ ಬರುತ್ತಿದ್ದಾರೆ.
ನಟ ಸೂರ್ಯ ಹೇಗೆ ಮಾಸ್ ಹಾಗೂ ಕ್ಲಾಸ್ನ ಮಿಶ್ರಣವೋ ಅದೇ ರೀತಿ ಕ್ಲಾಸ್-ಮಾಸ್ನ ಸರಿಯಾದ ಸಮಾಗಮವಾದ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಿರುವ ‘ರೆಟ್ರೊ’ ಸಿನಿಮಾದಲ್ಲಿ ಸೂರ್ಯ ನಟಿಸಿದ್ದು, ಸಿನಿಮಾ ಸದ್ದೇ ಇಲ್ಲದೆ ಬಹುತೇಕ ಚಿತ್ರೀಕರಣ ಮುಗಿಸಿದೆ. ‘ರೆಟ್ರೊ’ ಸಿನಿಮಾದ ಟೈಟಲ್ ಟೀಸರ್ ಇಂದಷ್ಟೆ ಬಿಡುಗಡೆ ಆಗಿದ್ದು, ಕಾರ್ತಿಕ್ ಸುಬ್ಬರಾಜು ಟಚ್ ಸ್ಪಷ್ಟವಾಗಿ ಟೀಸರ್ನಲ್ಲಿ ಕಾಣುತ್ತಿದೆ.
ಎರಡು ನಿಮಿಷಕ್ಕೂ ಹೆಚ್ಚು ಅವಧಿಯ ಟೈಟಲ್ ಟೀಸರ್ ಅನ್ನು ಇಂದು ಬಿಡುಗಡೆ ಮಾಡಿದ್ದು, ಟೈಟಲ್ ಟೀಸರ್ ಕತೆಯ ಹಲವು ಅಂಶಗಳನ್ನು ಬಿಟ್ಟುಕೊಟ್ಟಿದೆ. ಟೀಸರ್ ಪ್ರಕಾರ ಸೂರ್ಯ ಎರಡು ಷೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಪ-ಮಗ ಎರಡೂ ಅವರೇ ಆಗಿದ್ದಾರೆ. ಇಬ್ಬರಿಗೂ ಸಿಟ್ಟು ಬಹಳ ಹೆಚ್ಚು ರೌಡಿ ಅಪ್ಪ ಮತ್ತು ಅಪ್ಪನ ದ್ವೇಷಿಸುವ ಮಗನ ನಡುವೆ ಕತೆ ಇದಾಗಿದೆ ಎಂಬುದು ಟೀಸರ್ನಿಂದ ತಿಳಿದು ಬರುತ್ತಿದೆ. ಜೊತೆಗೆ ಸಿನಿಮಾದಲ್ಲಿ ಮೆದುವಾದ ಪ್ರೇಮಕತೆಯೂ ಇದೆ. ಸಿನಿಮಾದ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಬಹುತೇಕ ಗ್ಲಾಮರಸ್ ಪಾತ್ರಗಳಲ್ಲೇ ಕಾಣಿಸಿಕೊಳ್ಳುವ ಪೂಜಾ ಹೆಗ್ಡೆ ಈ ಸಿನಿಮಾದಲ್ಲಿ ಗ್ಲಾಮರ್ ರಹಿತವಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:‘ಭೀಮ’ ಯಶಸ್ಸಿನ ಬೆನ್ನಲ್ಲೆ ತಮಿಳು ಸಿನಿಮಾದಿಂದ ದುನಿಯಾ ವಿಜಿಗೆ ಬುಲಾವ್
ಕಾರ್ತಿಕ್ ಸುಬ್ಬರಾಜು ತಮಿಳಿನ ಭರವಸೆಯ ನಿರ್ದೇಶಕ, ಪಕ್ಕಾ ಪೈಸಾ ವಸೂಲ್ ನಿರ್ದೇಶಕ ಸಹ. ಅವರ ಸಿನಿಮಾಗಳು ನಿರಾಸೆ ಮೂಡಿಸಿದ್ದಿಲ್ಲ. ‘ಪಿಜ್ಜಾ’, ‘ಜಿಗರ್ದಂಡಾ’, ‘ಜಗಮೇ ತಂಡಿರಮ್’, ‘ಪೆಟ್ಟ’, ‘ಮಹಾನ್’ ಕಳೆದ ವರ್ಷ ಬಿಡುಗಡೆ ಆದ ‘ಜಿಗರ್ದಂಡ ಡಬಲ್ ಎಕ್ಸ್’ ಸಿನಿಮಾ ಸಹ ಸೂಪರ್ ಹಿಟ್ ಆಗಿತ್ತು. ಇದೀಗ ಸೂರ್ಯ ಜೊತೆಗೆ ಮೊದಲ ಬಾರಿ ಕೆಲಸ ಮಾಡುತ್ತಿರುವ ಕಾರ್ತಿಕ್ ಸುಬ್ಬರಾಜು, ‘ರೆಟ್ರೊ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹೆಸರೇ ಸೂಚಿಸುತ್ತಿರುವಂತೆ ಈ ಸಿನಿಮಾ ಕೆಲ ದಶಕದ ಹಿಂದಿನ ಕಾಲದ ಕತೆಯನ್ನು ಒಳಗೊಂಡಿದೆ.
‘ರೆಟ್ರೊ’ ಸಿನಿಮಾ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ‘ಕಂಗುವ’ ಸಿನಿಮಾದ ಸೋಲಿನಿಂದ ಸೂರ್ಯಗೆ ‘ರೆಟ್ರೊ’ ಗೆಲುವು ತಂದು ಕೊಡಲಿದೆಯೇ ನೋಡಬೇಕಿದೆ. ‘ರೆಟ್ರೊ’ ಬಳಿಕ ಕನ್ನಡಿಗ ನರ್ತನ್ ನಿರ್ದೇಶನದ ಸಿನಿಮಾದಲ್ಲಿ ಸೂರ್ಯ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಚರಣ್ ಸಹ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ