ಈ ಬಾರಿ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಭಾರಿ ಗಮನ ಸೆಳೆದಿದೆ. ಆಡಳಿತ ಪಕ್ಷ ವೈಎಸ್ಆರ್ ಕಾಂಗ್ರೆಸ್ ಅನ್ನು ಸೋಲಿಸಿಯೇ ತೀರುವುದಾಗಿ ಪವನ್ ಕಲ್ಯಾಣ್ (Pawan Kalyan), ಮಾಜಿ ಸಿಎಂ ಚಂದ್ರಬಾಬು ನಾಯ್ಡು ಟೊಂಕ ಕಟ್ಟಿ ನಿಂತಿದ್ದಾರೆ. ಪವನ್ ಕಲ್ಯಾಣ್ಗೆ ಈ ಸಹ ಈ ಚುನಾವಣೆ ಅತ್ಯಂತ ಪ್ರಮುಖವಾದದ್ದಾಗಿದ್ದು, ಈ ಚುನಾವಣೆಯಿಂದ ತಮ್ಮ ಜನ ಸೇನಾ ಪಕ್ಷಕ್ಕೆ ದೊಡ್ಡ ಬೂಸ್ಟ್ ನೀಡುವ ಪ್ರಯತ್ನವನ್ನು ಪವನ್ ಮಾಡುತ್ತಿದ್ದಾರೆ. ಪವನ್ ಪರವಾಗಿ ಮೆಗಾಸ್ಟಾರ್ ಕುಟುಂಬದ ಕೆಲ ಸದಸ್ಯರು ಸಹ ಪ್ರಚಾರಕ್ಕೆ ಧುಮುಕಿದ್ದಾರೆ. ಆದರೆ ಅದೇ ಕುಟುಂಬಕ್ಕೆ ಸೇರಿದ ಅಲ್ಲು ಅರ್ಜುನ್ ಮಾತ್ರ, ವೈಎಸ್ಆರ್ಸಿಪಿ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದಾರೆ. ಪ್ರಚಾರಕ್ಕೆ ಹೋಗಿದ್ದ ಅಲ್ಲು ಅರ್ಜುನ್ ವಿರುದ್ಧ ದೂರು ಸಹ ದಾಖಲಾಗಿದೆ.
ಆಂಧ್ರದ ನಾಂದ್ಯಾಲ್ ಕ್ಷೇತ್ರದ ವೈಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಶಿಲ್ಪಾ ರವಿಚಂದ್ರ ರೆಡ್ಡಿ ಪರವಾಗಿ ಅಲ್ಲು ಅರ್ಜುನ್ ಪ್ರಚಾರ ಮಾಡಿದ್ದಾರೆ. ನಿನ್ನೆ (ಮೇ 11) ಶಿಲ್ಪಾ ರವಿಚಂದ್ರ ರೆಡ್ಡಿ ಮನೆಗೆ ಭೇಟಿ ನೀಡಿದ್ದ ಅಲ್ಲು ಅರ್ಜುನ್, ತಮ್ಮ ಗೆಳೆಯನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದ್ದಾರೆ. ಅಲ್ಲು ಅರ್ಜುನ್ ಶಿಲ್ಪಾ ರವಿಚಂದ್ರ ರೆಡ್ಡಿ ಅವರ ಮನೆಗೆ ಬಂದು ಅಲ್ಲಿ ಸೇರಿದ್ದ ಜನರಿಗೆ ಕೈ ಬೀಸಿ ಗೆಳೆಯನ ಕೈ ಹಿಡಿದು ಮೇಲೆತ್ತಿ ಗೆಳೆಯನ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ಬಳಿಕ ಅಲ್ಲಿಂದ ತೆರಳಿದ್ದಾರೆ. ಯಾವುದೇ ರೋಡ್ ಶೋನಲ್ಲಿ ಅಲ್ಲು ಅರ್ಜುನ್ ಭಾಗಿಯಾಗಿಲ್ಲ.
ಆದರೆ ಅಲ್ಲು ಅರ್ಜುನ್ ಭೇಟಿಯ ವೇಳೆ ಭಾರಿ ಸಂಖ್ಯೆಯ ಜನರು ಅವರನ್ನು ನೋಡಲು ಆಗಮಿಸಿದ ಕಾರಣ ನೂಕು-ನುಗ್ಗಲು ಉಂಟಾಗಿದೆ. ಅಲ್ಲದೆ ಜನರನ್ನು ಗುಂಪು ಸೇರಿಸಲು ಅನುಮತಿಯನ್ನು ಸಹ ಅಭ್ಯರ್ಥಿ ಶಿಲ್ಪಾ ರವಿಚಂದ್ರ ರೆಡ್ಡಿ ತೆಗೆದುಕೊಂಡಿರಲಿಲ್ಲವಂತೆ. ಹಠಾತ್ತನೆ ಹೀಗೆ ಭಾರಿ ಜನರನ್ನು ಗುಂಪು ಸೇರಿಸಿದ ಕಾರಣ ಅಲ್ಲು ಅರ್ಜುನ್ ಹಾಗೂ ಶಿಲ್ಪಾ ರವಿಚಂದ್ರ ರೆಡ್ಡಿ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಬೇರೆ ಬೇರೆ ಪಕ್ಷದ ರಾಜಕೀಯ ನಾಯಕರ ಪರ ನಿಂತ ಅಲ್ಲು ಅರ್ಜುನ್-ರಾಮ್ ಚರಣ್
ಶಿಲ್ಪಾ ರವಿಚಂದ್ರ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅಲ್ಲು ಅರ್ಜುನ್, ‘ಶಿಲ್ಪಾ ರವಿಚಂದ್ರ ರೆಡ್ಡಿ ನನ್ನ ಆತ್ಮೀಯ ಗೆಳೆಯ. ನನ್ನ ಗೆಳೆಯನ ಪರವಾಗಿ ನಿಲ್ಲಬೇಕಾದ ಕಾರಣ ನಾನು ಇಲ್ಲಿಗೆ ಬಂದೆ. ಅವನು ನನ್ನನ್ನು ಕರೆದಿರಲಿಲ್ಲ. ಅಲ್ಲದೆ ನೀನು ಬರುವುದು ಬೇಡ, ನಿನ್ನ ಅವಶ್ಯಕತೆ ಇಲ್ಲ, ಗೆದ್ದೇ ಗೆಲ್ಲುತ್ತೇನೆ ಎಂದೇ ಹೇಳಿದ್ದ. ಆದರೆ ಗೆಳೆಯನ ಪರವಾಗಿ ನಿಲ್ಲಬೇಕಾದ್ದು ಕರ್ತವ್ಯವಾದ್ದರಿಂದ ನಾನೇ ಬಂದೆ’ ಎಂದಿದ್ದಾರೆ.
ಆದರೆ ಅಲ್ಲು ಅರ್ಜುನ್ರ ಈ ನಡೆ ಮೆಗಾಸ್ಟಾರ್ ಕುಟುಂಬದವರಿಗೆ ಹಾಗೂ ಜನಸೇನಾ ಪಕ್ಷದ ಬೆಂಬಲಿಗರಿಗೆ ತೀವ್ರ ಅಸಮಾಧಾನ ತಂದಿದೆ. ಅಲ್ಲು ಅರ್ಜುನ್, ಪವನ್ ಕಲ್ಯಾಣ್ ಪರವಾಗಿ ಕೇವಲ ಟ್ವೀಟ್ ಅಷ್ಟೆ ಮಾಡಿದ್ದಾರೆ. ಆದರೆ ಪ್ರಚಾರಕ್ಕೆ ಬಂದಿಲ್ಲ. ಆದರೆ ಪವನ್ರ ಜನಸೇನಾ ಪಕ್ಷದ ಎದುರಾಳಿ ವೈಸಿಪಿಯ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಿದ್ದಾರೆ. ಅಲ್ಲು ಅರ್ಜುನ್ ಬೇಕೆಂದೇ ಹೀಗೆ ಮಾಡಿದ್ದಾರೆ ಎಂದು ಜನಸೇನಾ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ