
ತೆಲುಗು ಹೀರೋಗಳ ಅಭಿಮಾನಿಗಳು ಆಂಧ್ರ, ತೆಲಂಗಾಣದಲ್ಲಿ ಪರಸ್ಪರ ಕಿತ್ತಾಟ ಮಾಡಿಕೊಳ್ಳುವುದು ಆಗಾಗ ವರದಿ ಆಗುತ್ತದೆ. ಆದರೆ ಕರ್ನಾಟಕದಲ್ಲೂ ಕೂಡ ತೆಲುಗು ನಟರ ಅಭಿಮಾನಿಗಳು ಬಡಿದಾಡಿಕೊಂಡಿರುವ ಘಟನೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಬೆಂಗಳೂರಿನ ಕೆ.ಆರ್. ಪುರದಲ್ಲಿ ಪ್ರಭಾಸ್ (Prabhas) ಅವರ ಅಭಿಮಾನಿಗೆ ಅಲ್ಲು ಅರ್ಜುನ್ ಅಭಿಮಾನಿಗಳು (Allu Arjun Fans) ಥಳಿಸಿದ್ದಾರೆ. ಆನ್ಲೈನ್ನಲ್ಲಿ ಶುರುವಾದ ಫ್ಯಾನ್ಸ್ ವಾರ ಈಗ ಪರಸ್ಪರ ಹಲ್ಲೆ ಮಾಡಿಕೊಳ್ಳುವ ಹಂತಕ್ಕೆ ಬಂದಿದೆ. ಈ ಘಟನೆಯನ್ನು ಸೋಶಿಯಲ್ ಮೀಡಿಯಾ ಮೂಲಕ ಬೆಂಗಳೂರು ಪೊಲೀಸರ (Bengaluru City Police) ಗಮನಕ್ಕೆ ತರಲಾಗಿದೆ.
‘ಅಲ್ಲು ಅರ್ಜುನ್ನ ಟ್ರೋಲ್ ಮಾಡುತ್ತೀಯಾ? ಜೈ ಅಲ್ಲು ಅರ್ಜುನ್ ಅಂತ ಹೇಳು. ನಿನ್ನ ಬಿಟ್ಟು ಬಿಡುತ್ತೀನಿ’ ಎಂದು ಹೇಳುತ್ತ ವ್ಯಕ್ತಿಯೊಬ್ಬನ ಮೇಲೆ ಹತ್ತಾರು ಮಂದಿ ಹಲ್ಲೆ ಮಾಡಿದ್ದಾರೆ. ‘ಬೆಂಗಳೂರು ಪೊಲೀಸರು ಈ ಘಟನೆಯ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ನೆಟ್ಟಿಗರೊಬ್ಬರು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಸ್ಥಳದ ಬಗ್ಗೆ ಸೂಕ್ತ ಮಾಹಿತಿ ಪಡೆದ ಬಳಿಕ ಕೆ.ಆರ್. ಪುರ ಪೊಲೀಸರಿಗೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸರು ಎಕ್ಸ್ (ಟ್ವಿಟರ್) ಖಾತೆ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಪ್ರಭಾಸ್ ಅಭಿಮಾನಿ ಎನ್ನಲಾಗಿದೆ. ಅಲ್ಲು ಅರ್ಜುನ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಹಲ್ಲೆ ನಡೆದಿದೆ. ಸ್ಟಾರ್ ನಟರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಕಚ್ಚಾಟ ನಡೆಸುತ್ತಾರೆ. ಆದರೆ ಈಗ ಮಾರಣಾಂತಿಕವಾಗಿ ಹಲ್ಲೆ ಮಾಡುವ ಹಂತಕ್ಕೆ ಅಭಿಮಾನಿಗಳ ವರ್ತನೆ ಮಿತಿ ಮೀರಿರುವುದಕ್ಕೆ ನೆಟ್ಟಿಗರು ಖಂಡನೆ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಘಟನೆ ಬಗ್ಗೆ ಅಲ್ಲು ಅರ್ಜುನ್ ಮತ್ತು ಪ್ರಭಾಸ್ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ. ಕರ್ನಾಟಕದಲ್ಲಿ ಅಲ್ಲು ಅರ್ಜುನ್ ಅವರಿಗೆ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳು ಇಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತವೆ. ಅದೇ ರೀತಿ ಪ್ರಭಾಸ್ ಕೂಡ ಕರುನಾಡಿನಲ್ಲಿ ಅಭಿಮಾನಿ ಬಳಗ ಹೊಂದಿದ್ದಾರೆ. ಈ ಸ್ಟಾರ್ ನಟರಿಬ್ಬರ ಅಭಿಮಾನಿಗಳು ರೌಡಿಗಳಂತೆ ವರ್ತಿಸಿರುವುದಕ್ಕೆ ಟೀಕೆ ಎದುರಾಗುತ್ತಿದೆ.
ಇದನ್ನೂ ಓದಿ: ಅಲ್ಲು ಅರ್ಜುನ್ಗೆ ಟಿವಿ9 ನಕ್ಷತ್ರ ಅವಾರ್ಡ್: ‘ಪುಷ್ಪ’ ಹೇಳಿದ್ದೇನು?
ಅಲ್ಲು ಅರ್ಜುನ್ ಅವರು ಸದ್ಯ ‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಶೂಟಿಂಗ್ಗಾಗಿ ಅವರು ವಿಶಾಖಪಟ್ಟಣ್ಣಕ್ಕೆ ತೆರಳಿದ್ದಾರೆ. ಅಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಅವರಿಗೆ ಭರ್ಜರಿ ಸ್ವಾಗತ ಕೋರಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಬಂದ ಅವರ ಮೇಲೆ ಹೂವಿನ ಮಳೆ ಸುರಿಸಲಾಗಿದೆ. ದಾರಿಯುದ್ಧಕ್ಕೂ ಅಭಿಮಾನಿಗಳು ಬೈಕ್ ರ್ಯಾಲಿ ಮಾಡಿದ್ದಾರೆ. ಜೈಕಾರ ಕೂಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.