ಅಲ್ಲು ಅರ್ಜುನ್​ ಪುತ್ರ ವರ್ಸಸ್​ ಜೂ. ಎನ್​ಟಿಆರ್​ ಪುತ್ರ; ಪಾತ್ರಕ್ಕಾಗಿ ಸ್ಟಾರ್ ಕಿಡ್​ಗಳ ಪೈಪೋಟಿ?

ಶಕುಂತಲೆಯ ಮಗ ಭರತನ ಪಾತ್ರಕ್ಕಾಗಿ ಈಗ ಬಾಲಕನೊಬ್ಬನನ್ನು ನಿರ್ದೇಶಕರು ಆಯ್ಕೆ ಮಾಡಬೇಕಿದೆ. ಆ ಪಾತ್ರಕ್ಕೆ ಅಲ್ಲು ಅಯಾನ್​ ಮತ್ತು ಅಭಯ್​ ರಾಮ್​ ಹೆಸರುಗಳು ಕೇಳಿಬರುತ್ತಿವೆ.

ಅಲ್ಲು ಅರ್ಜುನ್​ ಪುತ್ರ ವರ್ಸಸ್​ ಜೂ. ಎನ್​ಟಿಆರ್​ ಪುತ್ರ; ಪಾತ್ರಕ್ಕಾಗಿ ಸ್ಟಾರ್ ಕಿಡ್​ಗಳ ಪೈಪೋಟಿ?
ಅಲ್ಲು ಅರ್ಜುನ್​, ಅಲ್ಲು ಅಯಾನ್​, ಜ್ಯೂ. ಎನ್​ಟಿಆರ್​, ಅಭಯ್​ ರಾಮ್​

Updated on: Jun 10, 2021 | 12:50 PM

ಸ್ಟಾರ್​ ಕಲಾವಿದರ ಮಕ್ಕಳು ಕೂಡ ಚಿತ್ರರಂಗಕ್ಕೆ ಕಾಲಿಡುವುದು ಭಾರತದ ಎಲ್ಲ ಭಾಷೆಯ ಚಿತ್ರರಂಗದಲ್ಲೂ ಸರ್ವೇಸಾಮಾನ್ಯ. ನೆಪೋಟಿಸಂ ಬಗ್ಗೆ ಪರ-ವಿರೋಧದ ಚರ್ಚೆ ಏನೇ ಇದ್ದರೂ ಕೂಡ ಸ್ಟಾರ್​ ಕುಟುಂಬದ ಕುಡಿಗಳಿಗೆ ಬಹುಬೇಗ ಅವಕಾಶಗಳು ಸಿಕ್ಕಿಬಿಡುತ್ತವೆ. ಅದೇನೇ ಇರಲಿ, ಈಗ ಅಲ್ಲು ಅರ್ಜುನ್​ ಪುತ್ರ ಅಲ್ಲು ಅಯಾನ್​ ಹಾಗೂ ಜ್ಯೂ. ಎನ್​ಟಿಆರ್​ ಪುತ್ರ ಅಭಯ್​ ರಾಮ್​ ಕೂಡ ಬಣ್ಣದ ಲೋಕಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿ ಹಬ್ಬಿದೆ. ಇನ್ನೂ ಎಳೆ ಬಾಲಕರಾಗಿರುವ ಈ ಪೋರರ ನಡುವೆ ಪಾತ್ರಕ್ಕಾಗಿ ಪೈಪೋಟಿ ನಡೆಯುತ್ತಿದೆ ಎಂಬ ಮಾತು ಟಾಲಿವುಡ್​ ಅಂಗಳಲ್ಲಿ ಹರಿದಾಡುತ್ತಿದೆ!

ಸದ್ಯ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಮೂಲಕ ಭಾರಿ ಯಶಸ್ಸು ಕಂಡಿರುವ ನಟಿ ಸಮಂತಾ ಅಕ್ಕಿನೇನಿ ಅವರು ‘ಶಾಕುಂತಲಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಗುಣಶೇಖರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಶಕುಂತಲೆಯಾಗಿ ಸಮಂತಾ ಕಾಣಿಸಿಕೊಂಡರೆ, ಶಕುಂತಲೆಯ ಮಗ ಭರತನ ಪಾತ್ರಕ್ಕಾಗಿ ಈಗ ಬಾಲಕನೊಬ್ಬನನ್ನು ನಿರ್ದೇಶಕರು ಆಯ್ಕೆ ಮಾಡಬೇಕಿದೆ. ಆ ಪಾತ್ರಕ್ಕೆ ಅಲ್ಲು ಅಯಾನ್​ ಮತ್ತು ಅಭಯ್​ ರಾಮ್​ ಹೆಸರುಗಳು ಕೇಳಿಬರುತ್ತಿವೆ.

ಟಾಲಿವುಡ್​ನಲ್ಲಿ ಹರಿದಾಡುತ್ತಿರುವ ಈ ಗಾಸಿಪ್ ಬಗ್ಗೆ ಯಾರೂ ಸಹ ಅಧಿಕೃತವಾಗಿ ಮಾತನಾಡಿಲ್ಲ. ತಮ್ಮ ಪುತ್ರರನ್ನು ಲಾಂಚ್​ ಮಾಡುವ ಬಗ್ಗೆ ಜ್ಯೂ. ಎನ್​ಟಿಆರ್ ಆಗಲಿ, ಅಲ್ಲು ಅರ್ಜುನ್​ ಆಗಲಿ ಏನನ್ನೂ ಹೇಳಿಕೊಂಡಿಲ್ಲ. ಚಿತ್ರತಂಡದಿಂದಲೂ ಸ್ಪಷ್ಟನೆ ಸಿಕ್ಕಿಲ್ಲ. ಹಾಗಿದ್ದರೂ ಕೂಡ ಅಭಿಮಾನಿಗಳು ತಮ್ಮದೇ ರೀತಿಯ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ.

ಜ್ಯೂ. ಎನ್​ಟಿಆರ್​ ಅವರು ಬಾಲ ನಟನಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 1996ರಲ್ಲಿ ಅವರು ನಟಿಸಿದ ಎರಡನೇ ಚಿತ್ರಕ್ಕೆ ಇದೇ ಗುಣಶೇಖರ್​ ಅವರು ನಿರ್ದೇಶನ ಮಾಡಿದ್ದರು. ಹಾಗಾಗಿ ಈಗ ಜ್ಯೂ. ಎನ್​ಟಿಆರ್​ ಪುತ್ರನನ್ನೂ ಅವರೇ ಬಾಲನಟನಾಗಿ ಲಾಂಚ್​ ಮಾಡಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ಚಿತ್ರತಂಡ ಮೂಲಗಳಿಂದ ಬೇರೆಯದೇ ಸಮಾಚಾರ ಕೇಳಿಬರುತ್ತಿದೆ. ‘ಸದ್ಯಕ್ಕಂತೂ ನಿರ್ದೇಶಕರು ಆ ರೀತಿಯ ಯಾವುದೇ ಪ್ಲ್ಯಾನ್​ ಮಾಡಿಕೊಂಡಿಲ್ಲ. ಎಲ್ಲ ಕಡೆ ಹೈಪ್​ ಸೃಷ್ಟಿ ಆಗಿರುವುದರಿಂದ ಸ್ಟಾರ್​ ಕಿಡ್​ಗಳಲ್ಲಿ ಒಬ್ಬನನ್ನು ಆಯ್ಕೆ ಮಾಡಿಕೊಳ್ಳಬಹುದೇನೋ’ ಎನ್ನಲಾಗುತ್ತಿದೆ.

ಜ್ಯೂ. ಎನ್​ಟಿಆರ್​ ಅವರು ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅತ್ತ, ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ:

Butta Bomma Song: ‘ಬುಟ್ಟ ಬೊಮ್ಮ..’ ಹಾಡಿಗೆ ಮತ್ತೊಂದು ದಾಖಲೆ; ಹಿರಿಹಿರಿ ಹಿಗ್ಗಿದ ಅಲ್ಲು ಅರ್ಜುನ್​ ಫ್ಯಾನ್ಸ್​​

ಪ್ರಶಾಂತ್​ ನೀಲ್​ ಜನ್ಮದಿನ; ಪ್ರೀತಿಯಿಂದ ಶುಭಕೋರಿದ ಜ್ಯೂ. ಎನ್​ಟಿಆರ್​ ಕಾಯುತ್ತಿರುವುದು ಆ ಒಂದು ಕ್ಷಣಕ್ಕಾಗಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us