ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಭರ್ಜರಿ ಯಶಸ್ಸು ಗಳಿಸಿದೆ. ಕೇವಲ ಎರಡೇ ದಿನಕ್ಕೆ ಸಿನಿಮಾ 449 ಕೋಟಿ ರೂಪಾಯಿ ಗಳಿಸಿದ್ದು, ಇನ್ನು ಕೆಲವು ದಿನಗಳಲ್ಲಿ ಸಿನಿಮಾ ಗಳಿಕೆ 1000 ಕೋಟಿ ದಾಟಲಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಸಖತ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ನ ರಾಖಿಭಾಯ್ ರೀತಿಯಲ್ಲಿಯೇ ಪುಷ್ಪರಾಜ್ ಪಾತ್ರ ಸಹ ತನ್ ಮಾಸ್ತನದಿಂದಲೇ ಜನಪ್ರಿಯತೆ ಗಳಿಸಿದೆ. ಆದರೆ ಅಲ್ಲು ಅರ್ಜುನ್, ಮಾಸ್ ಸಿನಿಮಾದಿಂದ ತುಸು ಬಿಡುವು ಪಡೆಯುವ ಸೂಚನೆ ನೀಡಿದ್ದಾರೆ. ಹಾಸ್ಯ ಸಿನಿಮಾ ಒಂದರ ಕತೆ ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ.
‘ಪುಷ್ಪ 2’ ಸಿನಿಮಾ ಮುಗಿಸಿರುವ ಅಲ್ಲು ಅರ್ಜುನ್ ಸಣ್ಣ ವಿರಾಮದ ಬಳಿಕ ತ್ರಿವಿಕ್ರಮ್ ಜೊತೆಗೆ ಸಿನಿಮಾ ಪ್ರಾರಂಭಿಸಲಿದ್ದಾರೆ. ತ್ರಿವಿಕ್ರಮ್ ನಿರ್ದೇಶನದ ಸಿನಿಮಾವನ್ನೂ ಸಹ ಮೈತ್ರಿ ಮೂವಿ ಮೇಕರ್ಸ್ನವರೇ ನಿರ್ಮಾಣ ಮಾಡಲಿದ್ದಾರೆ. ಅದಾದ ಬಳಿಕ ಅಲ್ಲು ಅರ್ಜುನ್ ಮಲಯಾಳಂ ಸಿನಿಮಾ ನಿರ್ದೇಶಕನ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ಅದೂ ಹಾಸ್ಯಪ್ರಧಾನ ಸಿನಿಮಾಗಳಿಂದ ಹೆಸರುಗಳಿಸಿರುವ ನಿರ್ದೇಶಕನ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಮಲಯಾಳಂನ ಸೂಪರ್ ಹಿಟ್ ಹಾಸ್ಯ ಪ್ರಧಾನ ಹಾಗೂ ಸಾಮಾಜಿಕ ಸಂದೇಶ ಇರುವ ಸಿನಿಮಾಗಳಾದ ‘ಜಯ ಜಯ ಜಯ ಜಯ ಹೇ’, ‘ಗುರುವಾಯೂರು ಅಂಬಾಲಂಡಾಯಲಿ’, ‘ವಾಳ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಯಶಸ್ವಿ ಮಲಯಾಳಂ ಸಿನಿಮಾ ನಿರ್ದೇಶಕ ವಿಪಿನ್ ದಾಸ್ ಅವರ ಮುಂದಿನ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ವಿಪಿನ್ ದಾಸ್ ಪ್ರಸ್ತುತ ಫುಟ್ಬಾಲ್ ಕತೆಯುಳ್ಳ ‘ಸಂತೋಷ್ ಟ್ರೋಫಿ’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ನಾಯಕ.
ಇದನ್ನೂ ಓದಿ:‘ಪುಷ್ಪ 2’ ಭಾರಿ ಯಶಸ್ಸು ಪವನ್ ಕಲ್ಯಾಣ್ಗೆ ಧನ್ಯವಾದ ಹೇಳಿದ ಅಲ್ಲು ಅರ್ಜುನ್
ವಿಪಿನ್ ದಾಸ್, ಸಿನಿಮಾಗಳಲ್ಲಿ ಹಾಸ್ಯಕ್ಕೆ ಪ್ರಾಧಾನ್ಯತೆ ಹೆಚ್ಚಿರುತ್ತದೆ. ಆದರೆ ಅದರ ಜೊತೆಗೆ ಸಾಮಾಜಿಕ ಸಂದೇಶವೊಂದನ್ನು ಸಹ ಒಳಗೊಂಡಿರುತ್ತದೆ. ಸೂಪರ್ ಹಿಟ್ ಆಗಿದ್ದ ‘ಜಯ ಜಯ ಜಯ ಜಯಹೇ’ ಸಿನಿಮಾದಲ್ಲಿ ಮಹಿಳೆಯರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯದ ಕತೆಯನ್ನು ಹಾಸ್ಯದ ಲೇಪನದೊಂದಿಗೆ ತೋರಿಸಲಾಗಿತ್ತು. ‘ಗುರುವಾಯೂರು ಅಂಬಾಲಂಡಾಯಲಿ’ ಸಿನಿಮಾನಲ್ಲಿ ಮದುವೆ ಮತ್ತು ಅದಕ್ಕೆ ಮುಂಚೆ ನಡೆಯುವ ಪ್ರೀತಿಯ ಕುರಿತಾದ ಕತೆ ಇತ್ತು. ಈಗ ಇದೇ ನಿರ್ದೇಶಕ ಅಲ್ಲು ಅರ್ಜುನ್ಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:03 am, Sun, 8 December 24