‘ಪುಷ್ಪ 2’ ಭಾರಿ ಯಶಸ್ಸು ಪವನ್ ಕಲ್ಯಾಣ್ಗೆ ಧನ್ಯವಾದ ಹೇಳಿದ ಅಲ್ಲು ಅರ್ಜುನ್
Allu Arjun: ಅಲ್ಲು ಅರ್ಜುನ್ ಮತ್ತು ಪವನ್ ಕಲ್ಯಾಣ್ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಆದರೆ ಮುನಿಸನ್ನೆಲ್ಲ ಮರೆತು ಅಲ್ಲು ಅರ್ಜುನ್, ಪವನ್ ಕಲ್ಯಾಣ್ಗೆ ಧನ್ಯವಾದ ಹೇಳಿದ್ದಾರೆ. ‘ಪುಷ್ಪ 2’ ಸಕ್ಸಸ್ ಪಾರ್ಟಿಯಲ್ಲಿ ಅವರು ಪವನ್ ಕಲ್ಯಾಣ್ಗೆ ಥ್ಯಾಂಕ್ಸ್ ಹೇಳಿದ್ದಾರೆ.
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಕೇವಲ ಎರಡೇ ದಿನಕ್ಕೆ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಕೇವಲ ಎರಡೇ ದಿನಕ್ಕೆ ಈ ಸಿನಿಮಾ 500 ಕೋಟಿ ರೂಪಾಯಿ ಹಣ ಗಳಿಸಿದೆ. ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ 1000 ಕೋಟಿ ಮಾರ್ಕ್ ದಾಟುವುದು ಪಕ್ಕಾ ಆಗಿದ್ದು, ನಿನ್ನೆ (ಡಿಸೆಂಬರ್ 07) ಚಿತ್ರತಂಡ ಸಕ್ಸಸ್ ಮೀಟ್ ಆಯೋಜನೆ ಮಾಡಿತ್ತು. ಸಿನಿಮಾ ಬಿಡುಗಡೆ ಆದ ಕೇವಲ ಎರಡೇ ದಿನಕ್ಕೆ ಸಕ್ಸಸ್ ಮೀಟ್ ಆಯೋಜನೆ ಮಾಡಿ ಚಿತ್ರತಂಡ ಸಂಭ್ರಮಾಚರಣೆ ಮಾಡಿದೆ. ಸಂಭ್ರಮಾಚರಣೆ ವೇಳೆ ಸಿನಿಮಾ ಗೆಲುವಿಗೆ ಕಾರಣರಾದವರಿಗೆ ಅಲ್ಲು ಅರ್ಜುನ್ ಧನ್ಯವಾದ ಹೇಳಿದ್ದಾರೆ. ವಿಶೇಷವಾಗಿ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರಿಗೆ ಧನ್ಯವಾದ ಹೇಳಿದ್ದಾರೆ.
ಅಲ್ಲು ಅರ್ಜುನ್ ಹಾಗೂ ಆಂಧ್ರ ಡಿಸಿಎಂ ಪವನ್ ಅವರ ನಡುವೆ ಕಳೆದ ಆರೇಳು ತಿಂಗಳಿನಿಂದಲೂ ಭಿನ್ನಾಭಿಪ್ರಾಯವಿದೆ. ಆಂಧ್ರ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಪವನ್ ಕಲ್ಯಾಣ್ ಅವರ ಎದುರಾಳಿ ಪಕ್ಷದ ಅಭ್ಯರ್ಥಿ ಪರವಾಗಿ ಅಲ್ಲು ಅರ್ಜುನ್ ಪ್ರಚಾರ ಮಾಡಿದ್ದು ಇಬ್ಬರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಅದಾದ ಬಳಿಕವೂ ಸಹ ಇಬ್ಬರೂ ಪರಸ್ಪರರ ವಿರುದ್ಧ ಪರೋಕ್ಷ ವಾಗ್ದಾಳಿಗಳನ್ನು ಮಾಡಿದ್ದರು. ಆದರೆ ಈಗ ಸಿನಿಮಾ ಬಿಡುಗಡೆ ವೇಳೆ ಅಲ್ಲು ಅರ್ಜುನ್, ಪವನ್ ಬಗ್ಗೆ ಪ್ರೀತಿಯಿಂದ ಮಾತನಾಡಿ ಸಮಸ್ಯೆ ಬಗೆಹರಿಸಿಕೊಂಡಿದ್ದರು. ಈಗ ಮತ್ತೊಮ್ಮೆ ತಮ್ಮ ಪ್ರೀತಿಯ ‘ಬಾಬಾಯ್’ಗೆ ಧನ್ಯವಾದ ಹೇಳಿದ್ದಾರೆ.
ಸಕ್ಸಸ್ ಮೀಟ್ನಲ್ಲಿ ಮಾತನಾಡಿದ ಅಲ್ಲು ಅರ್ಜುನ್, ಸಿನಿಮಾದ ಯಶಸ್ಸಿಗೆ, ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಮಾಡಿಕೊಟ್ಟ ಅವಕಾಶಕ್ಕೆ ಮೊದಲಿಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಧನ್ಯವಾದ ಹೇಳಿದರು. ‘ಚಂದ್ರಬಾಬು ನಾಯ್ಡು ಅವರು ಸದಾ ಕಾಲ ಚಿತ್ರರಂಗಕ್ಕೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ನಮ್ಮ ಸಿನಿಮಾಕ್ಕೆ ಅವರು ನೀಡಿದ ಬೆಂಬಲಕ್ಕೆ ಧನ್ಯವಾದ. ಟಿಕೆಟ್ ರೇಟ್ ಹೆಚ್ಚಳದ ಆದೇಶ ನೀಡಲು ಕಾರಣರಾದ ಡಿಸಿಎಂ ಪವನ್ ಕಲ್ಯಾಣ್ ಅವರಿಗೂ ಧನ್ಯವಾದ’ ಎಂದರು ಅಲ್ಲು ಅರ್ಜುನ್. ಮಾತು ಮುಂದುವರೆಸಿ, ವೈಯಕ್ತಿಕವಾಗಿಯೂ ಸಹ ‘ಕಲ್ಯಾಣ್ ಬಾಬಾಯ್ ಬಹಳ ಧನ್ಯವಾದ’ ಎಂದರು.
ಇದನ್ನೂ ಓದಿ:ಸಿನಿಮಾ ಶೂಟಿಂಗ್ಗೆ ಬರಲು ಎರಡು ಷರತ್ತು ಹಾಕಿದ ಪವನ್ ಕಲ್ಯಾಣ್
ಇದೇ ಕಾರ್ಯಕ್ರಮದಲ್ಲಿ ತೆಲಂಗಾಣದ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಅವಘಡದ ಬಗ್ಗೆಯೂ ಅಲ್ಲು ಅರ್ಜುನ್ ಮಾತನಾಡಿದರು. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅಲ್ಲು ಅರ್ಜುನ್, ಘಟನೆಯಲ್ಲಿ ನಿಧನ ಹೊಂದಿದವರಿಗೆ ಆತ್ಮಕ್ಕೆ ಶಾಂತಿ ಕೋರಿದರು. ಘಟನೆ ಬಗ್ಗೆ ತೀವ್ರ ಬೇಸರವನ್ನು ಸಹ ವ್ಯಕ್ತಪಡಿಸಿದರು. ಡಿಸೆಂಬರ್ 04 ರಂದು ಸಂಧ್ಯಾ ಚಿತ್ರಮಂದಿರದಲ್ಲಿ ‘ಪುಷ್ಪ 2’ ಸಿನಿಮಾದ ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿತ್ತು. ಭಾರಿ ಸಂಖ್ಯೆಯ ಜನ ಸಿನಿಮಾ ನೋಡಲು ಆಗಮಿಸಿದ್ದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ಒಬ್ಬ ಮಹಿಳೆ ನಿಧನ ಹೊಂದಿದರು. ಅವರ ಪುತ್ರ ತೀವ್ರ ಗಾಯಗಳೊಂದಿಗೆ ಆಸ್ಪತ್ರೆ ಪಾಲಾದರು.
ಚಿತ್ರಮಂದಿರದ ಬಳಿ ಉಂಟಾದ ಕಾಲ್ತುಳಿದಲ್ಲಿ ನಿಧನವಾದ ಮಹಿಳೆಯ ಕುಟುಂಬಕ್ಕೆ ಅಲ್ಲು ಅರ್ಜುನ್ 25 ಲಕ್ಷ ರೂಪಾಯಿ ಹಣ ಸಹಾಯ ಮಾಡುವುದಾಗಿ ಈ ಹಿಂದೆಯೇ ಘೋಷಣೆ ಮಾಡಿದ್ದಾರೆ. ಅಲ್ಲದೆ ಮಗುವಿನ ಚಿಕಿತ್ಸೆಗೂ ನೆರವು ನೀಡುವುದಾಗಿ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:00 am, Sun, 8 December 24