‘ನಾವು ಸೋತಿಲ್ಲ, ಅವ್ರನ್ನ ಗೆಲ್ಲಿಸಿದ್ರು’: ಬಿಗ್ಬಾಸ್ ಮೇಲೆ ತ್ರಿವಿಕ್ರಮ್ ಆರೋಪ, ಕೆಂಡವಾದ ಸುದೀಪ್
Bigg Boss Kannada: ಈ ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ತುಸು ಹೆಚ್ಚೇ ಸಿಟ್ಟಿನಿಂದ ಮಾತನಾಡಿದ್ದಾರೆ. ಮನೆಯಲ್ಲಿದ್ದುಕೊಂಡು ಬಿಗ್ಬಾಸ್ ಮೇಲೆ ಆರೋಪ ಮಾಡಿದ ತ್ರಿವಿಕ್ರಮ್ ಮೇಲೆ ಕೆಂಡವಾದರು ಸುದೀಪ್.
ಬಿಗ್ಬಾಸ್ ಕನ್ನಡ ಸೀಸನ್ 11ರ ಪ್ರತಿ ವೀಕೆಂಡ್ ಎಪಿಸೋಡ್ನಲ್ಲಿಯೂ ಸ್ಪರ್ಧಿಗಳು ಸುದೀಪ್ರಿಂದ ಬುದ್ಧಿವಾದ ಹೇಳಿಸಿಕೊಳ್ಳುತ್ತಲೇ ಇದ್ದಾರೆ ಆದರೆ ಪದೇ ಪದೇ ತಪ್ಪು ಮಾಡುತ್ತಲೇ ಇದ್ದಾರೆ. ಇದೇ ಸೀಸನ್ನ ಈ ಹಿಂದಿನ ಕೆಲ ವೀಕೆಂಡ್ ಎಪಿಸೋಡ್ಗಳಲ್ಲಿ ಸುದೀಪ್ ತುಸು ಹೆಚ್ಚೇ ಸಿಟ್ಟು ಮಾಡಿಕೊಂಡಿದ್ದು ಇದೆ. ಈ ಶನಿವಾರವಂತೂ ಸುದೀಪ್ ತುಸು ಹೆಚ್ಚೇ ಸಿಟ್ಟು ಮಾಡಿಕೊಂಡು ಮಾತನಾಡಿದರು. ಸ್ಪರ್ಧಿಗಳಿಗೆ ಸಣ್ಣ ಶಿಕ್ಷೆಯನ್ನು ಸಹ ನೀಡಿದರು. ಇದಕ್ಕೆಲ್ಲ ಕಾರಣವಾಗಿದ್ದು ತ್ರಿವಿಕ್ರಮ್.
ಸುದೀಪ್ ಜೊತೆಗೆ ಒಂದೇ ತಂಡದಲ್ಲಿ ಕ್ರಿಕೆಟ್ ಆಡುವ ತ್ರಿವಿಕ್ರಮ್, ಈ ವಾರ ಸುದೀಪ್ ಎದುರು ಪೆಚ್ಚಾಗಿ ನಿಂತುಕೊಳ್ಳುವಂತಾಯ್ತು. ಅದಕ್ಕೆ ಕಾರಣ ಅವರೇ ಆಡಿದ ಕೆಲವು ಮಾತುಗಳು. ಶೋ ಆರಂಭವಾಗುತ್ತಿದ್ದಂತೆ ಶೋಭಾ ಅನ್ನು ಕಳಿಸಿ ಇಬ್ಬರನ್ನು ಮನೆಯಲ್ಲಿಯೇ ಉಳಿಸಿಕೊಂಡಿದ್ದರ ಬಗ್ಗೆ ತ್ರಿವಿಕ್ರಮ್ ಆಡಿದ ಮಾತುಗಳ ಬಗ್ಗೆ ಸುದೀಪ್ ತೀವ್ರವಾಗಿ ಸಿಟ್ಟಾಗಿದ್ದರು. ಆ ವಿಷಯದಲ್ಲಿ ತ್ರಿವಿಕ್ರಮ್ ಅನ್ನು ತರಾಟೆಗೆ ತೆಗೆದುಕೊಂಡರು.
ಅದಾದ ಬಳಿಕ ತ್ರಿವಿಕ್ರಮ್ ಅವರ ಮತ್ತೊಂದು ವಿಡಿಯೋ ಪ್ರಸಾರ ಮಾಡಿದರು ಸುದೀಪ್. ವಿಡಿಯೋನಲ್ಲಿ ಈ ವಾರ ನಡೆದ ಟಾಸ್ಕ್ ಒಂದರ ಬಗ್ಗೆ ಭವ್ಯಾ ಎದುರು ಕೂತು ವಿಶ್ಲೇಷಣೆ ಮಾಡುತ್ತಿದ್ದ ತ್ರಿವಿಕ್ರಮ್, ಆಟದಲ್ಲಿ ನಾವು ಹೆಚ್ಚು ಬಾರಿ ಗೆದ್ದಿದ್ದೇವೆ ಆದರೆ ಅವರಿಗೆ ಹೆಚ್ಚು ಪಾಯಿಂಟ್ಸ್ ಕೊಟ್ಟಿದ್ದಾರೆ. ನಾವು ಸೋತಿಲ್ಲ ಆದರೆ ಅವರನ್ನು ಗೆಲ್ಲಿಸಿದ್ದಾರೆ (ಬಿಗ್ಬಾಸ್) ಎಂದು ಹೇಳಿದರು. ಈ ವಿಷಯ ಸುದೀಪ್ ಅವರನ್ನು ಇನ್ನಷ್ಟು ಸಿಟ್ಟಿಗೇಳುವಂತೆ ಮಾಡಿತು.
ಇದನ್ನೂ ಓದಿ:‘ನಿಮ್ಮ ಅಸ್ತ್ರದಿಂದ, ನಮ್ಮ ವಸ್ತ್ರ ಬೀಳುತ್ತಿದೆ’; ಚೈತ್ರಾ ಕಿರುಚಾಟಕ್ಕೆ ಸುದೀಪ್ ಟಾಂಗ್
‘ಗೆಲ್ಲಿಸಿದರು’ ಎಂದರೆ ಏನು ಅರ್ಥ ಎಂದು ಏರು ಧನಿಯಲ್ಲಿ ಪ್ರಶ್ನಿಸಿದರು ಸುದೀಪ್, ತ್ರಿವಿಕ್ರಮ್ ಏನೋ ಸ್ಪಷ್ಟನೆ ಕೊಡಲು ಯತ್ನಿಸಿದರಾದರು ಅವರಿಗೆ ಸಾಧ್ಯವಾಗಲಿಲ್ಲ. ಇದಕ್ಕೆಂದೇ ನಾವು ರೂಲ್ ಬುಕ್ ಕಳಿಸಿರುತ್ತೇವೆ. ಅದರಲ್ಲಿ ಪಾಯಿಂಟ್ಸ್ಗಳು ಹೇಗೆ ವಿತರಣೆ ಆಗುತ್ತವೆ, ಯಾವ ಟಾಸ್ಕ್ಗೆ ಎಷ್ಟು ಅಂಕ, ಗೆಲ್ಲಲು ಎಷ್ಟು ಅಂಕ ಬೇಕಾಗುತ್ತದೆ ಎಲ್ಲವೂ ಇರುತ್ತದೆ ಅದನ್ನು ಓದಿಯೂ ಸಹ ಇನ್ನೊಂದು ತಂಡವನ್ನು ಬಿಗ್ಬಾಸ್ ಗೆಲ್ಲಿಸಿದ್ದಾರೆ ಎಂದು ಹೇಳಿದ್ದು ಏಕೆ ಎಂದು ಪ್ರಶ್ನೆ ಮಾಡಿದರು. ಅಲ್ಲದೆ ತ್ರಿವಿಕ್ರಮ್ ಅನುಮಾನ ವ್ಯಕ್ತಪಡಿಸಿದ್ದ ಟಾಸ್ಕ್ನ ಪಾಯಿಂಟ್ಸ್ ಟೇಬಲ್ನ ಚಿತ್ರವನ್ನು ಪ್ರದರ್ಶಿಸಿ ಪಾಯಿಂಟ್ಸ್ ಹೇಗೆ ವಿತರಣೆ ಆಗಿದೆ ಎಂದು ವಿವರಣೆ ಸಹ ನೀಡಿದರು.
ಅಂತಿಮವಾಗಿ ತ್ರಿವಿಕ್ರಮ್ ಮತ್ತೊಮ್ಮೆ ಸುದೀಪ್ ಅವರ ಕ್ಷಮೆ ಕೇಳಿದರು. ಈ ವೇಳೆ, ನಿಮಗೆ ಅನುಮಾನ ಇದ್ದರೆ ಬಿಗ್ಬಾಸ್ ಬಳಿ ಕೇಳಿ, ನಾನು ಶನಿವಾರ ಬರುತ್ತೇನೆ ನನ್ನ ಬಳಿ ಕೇಳಿ, ಯಾರ ಪ್ರಶ್ನೆಗೂ ಉತ್ತರ ನೀಡದೆ ಹೋಗಿಲ್ಲ, ಇಲ್ಲಿ ಮಾತ್ರ ಅಲ್ಲ ಯಾವುದೇ ಕಲಾವಿದರಿಗೂ ನನ್ನ ಮನೆಯ ಬಾಗಿಲು ಯಾವಾಗಲೂ ತೆಗೆದಿರುತ್ತದೆ’ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:52 pm, Sat, 7 December 24