ಅಲ್ಲು ಅರ್ಜುನ್​ ಜಾಮೀನಿಗೆ ಕಠಿಣ ಷರತ್ತುಗಳು, ಮತ್ತೆ ಮೇಲ್ಮನವಿ?

|

Updated on: Jan 04, 2025 | 3:45 PM

Allu Arjun: ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್​ಗೆ ನಾಂಪಲ್ಲಿ ನ್ಯಾಯಾಲಯ ಜಾಮೀನು ನೀಡಿದೆ. ಕೆಲವು ಕಠಿಣ ಷರತ್ತುಗಳನ್ನು ಅಲ್ಲು ಅರ್ಜುನ್​ಗೆ ನ್ಯಾಯಾಲಯ ವಿಧಿಸಿದೆ. ಆದರೆ ಅಲ್ಲು ಅರ್ಜುನ್​ಗೆ ವಿಧಿಸಿರುವ ಷರತ್ತುಗಳು ಕಠಿಣವಾಗಿದ್ದು, ಇದೀಗ ಅಲ್ಲು ಅರ್ಜುನ್​ ಪರ ವಕೀಲರು ಮೇಲ್ಮನವಿ ಸಲ್ಲಿಸಲು ಸಿದ್ಧವಾಗಿದ್ದಾರೆ ಎನ್ನಲಾಗುತ್ತಿದೆ.

ಅಲ್ಲು ಅರ್ಜುನ್​ ಜಾಮೀನಿಗೆ ಕಠಿಣ ಷರತ್ತುಗಳು, ಮತ್ತೆ ಮೇಲ್ಮನವಿ?
ಅಲ್ಲು ಅರ್ಜುನ್
Follow us on

ಸಂಧ್ಯಾ ಚಿತ್ರಮಂದಿರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್​ಗೆ ನಾಂಪಲ್ಲಿ ನ್ಯಾಯಾಲಯ ನಿನ್ನೆಯಷ್ಟೆ (ಜನವರಿ 04) ಜಾಮೀನು ನೀಡಿದೆ. ಈ ಮೊದಲು ಅಲ್ಲು ಅರ್ಜುನ್​ಗೆ ಇದೇ ಪ್ರಕರಣದಲ್ಲಿ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಇದಿಗ ನಾಂಪಲ್ಲಿ ನ್ಯಾಯಾಲಯ ನಿಯಮಿತ ಜಾಮೀನು ನೀಡಿದ್ದು, ಅಲ್ಲು ಅರ್ಜುನ್​ ಬಂಧನ ಭೀತಿಯಿಂದ ಪಾರಾದಂತಾಗಿದೆ. ಆದರೆ ಜಾಮೀನಿಗೆ ಕೆಲವು ಕಠಿಣ ಷರತ್ತುಗಳನ್ನು ನಾಂಪಲ್ಲಿ ನ್ಯಾಯಾಲಯ ವಿಧಿಸಿದ್ದು, ಇದರ ವಿರುದ್ಧ ಅಲ್ಲು ಅರ್ಜುನ್ ಪರ ವಕೀಲರು ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.

ನಿನ್ನೆ ಅಲ್ಲು ಅರ್ಜುನ್​ಗೆ ಜಾಮೀನು ನೀಡಿದ ನಾಂಪಲ್ಲಿ ನ್ಯಾಯಾಲಯ 50 ಸಾವಿರದ ಬಾಂಡ್ ಮತ್ತು ಇಬ್ಬರ ಶೂರಿಟಿಯನ್ನು ಕೇಳಿದೆ. ಇದರ ಜೊತೆಗೆ ಅಲು ಅರ್ಜುನ್​ಗೆ ಕೆಲವು ಷರತ್ತುಗಳನ್ನು ವಿಧಿಸಿದ್ದು, ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ ಮಾಡುವವರೆಗೆ ಅಥವಾ ಮುಂದಿನ ಎರಡು ತಿಂಗಳ ಕಾಲ ಪ್ರತಿ ಭಾನುವಾರ ಅಲ್ಲು ಅರ್ಜುನ್, ತನಿಖಾಧಿಕಾರಿ ಎದುರು ಹಾಜರಾಗಿ ಸಹಿ ಹಾಕಬೇಕು. ಹಾಗೂ ವಿದೇಶ ಪ್ರಯಾಣವನ್ನೂ ಸಹ ಮಾಡುವಂತಿಲ್ಲ.

ಅಲ್ಲು ಅರ್ಜುನ್ ಪೊಲೀಸ್ ಠಾಣೆಗೆ ಹಾಜರಾದರೆ ಅಲ್ಲಿಯೂ ಸಹ ಭಾರಿ ಸಂಖ್ಯೆಯ ಜನ ಸೇರಬಹುದು. ವಿದೇಶ ಪ್ರಯಾಣದ ಮೇಲೆ ನಿರ್ಬಂಧ ಹೇರಿರುವುದು ಸಹ ಅಲ್ಲು ಅರ್ಜುನ್​ಗೆ ಸಮಸ್ಯೆ ಎನಿಸಬಹುದು. ಅಲ್ಲದೆ, ಕೊಲೆ, ಬೆದರಿಕೆ ಅಂಥಹಾ ಘೋರ ಅಪರಾಧ ಮಾಡುವವರಿಗೆ ಇಂಥಹಾ ಷರತ್ತುಗಳನ್ನು ವಿಧಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಅಲ್ಲು ಅರ್ಜುನ್​ಗೆ ಕಠಿಣವಾದ ಷರತ್ತುಗಳನ್ನು ವಿಧಿಸಲಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್​ಗೆ ಸಹ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು ಎಂಬ ಷರತ್ತು ವಿಧಿಸಿಲ್ಲ ಎಂಬುದನ್ನು ಗಮನಿಸಬಹುದು.

ಇದನ್ನೂ ಓದಿ:ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣ: ಅಲ್ಲು ಅರ್ಜುನ್​ಗೆ ಜಾಮೀನು

ಈ ಷರತ್ತುಗಳ ವಿರುದ್ಧ ಅಲ್ಲು ಅರ್ಜುನ್ ಪರ ವಕೀಲರು ಮೇಲ್ಮನವಿ ಸಲ್ಲಿಸುವ ಸಾಧ್ಯತೆಯೂ ಇದೆ. ಈ ಹಿಂದೆ ಅಲ್ಲು ಅರ್ಜುನ್ ಬಂಧನವಾದಾಗಲೇ ಅವರ ಪರ ವಕೀಲರು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿ ಹೋರಾಡಿ ಒಂದೇ ದಿನದಲ್ಲಿ ಮಧ್ಯಂತರ ಜಾಮೀನು ತರಲು ಯಶಸ್ವಿಯಾಗಿದ್ದರು. ಅಲ್ಲದೆ, ಇದೀಗ ಅಲ್ಲು ಅರ್ಜುನ್ ಅವರ ಮೇಲೆ ಹೇರಿರುವ ಪ್ರಕರಣದ ರದ್ದಿಗೂ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಡಿಸೆಂಬರ್ 04 ರಂದು ‘ಪುಷ್ಪ 2’ ಸಿನಿಮಾದ ಪ್ರೀಮಿಯರ್ ಶೋ ಅನ್ನು ಅಭಿಮಾನಿಗಳ ಜೊತೆಗೆ ನೋಡಲು ಅಲ್ಲು ಅರ್ಜುನ್, ರಶ್ಮಿಕಾ ಮತ್ತು ಮಂದಣ್ಣ ಅವರುಗಳು ಹೈದರಾಬಾದ್​ನ ಸಂಧ್ಯಾ ಥಿಯೇಟರ್​ಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಅಲ್ಲಿ ಭಾರಿ ನೂಕಾಟ-ತಳ್ಳಾಟ ಉಂಟಾಯ್ತು. ಘಟನೆಯನ್ನು ರೇವತಿ ಎಂಬ ಮಹಿಳೆ ನಿಧನ ಹೊಂದಿದರು. ಅವರ ಪುತ್ರ ಗಂಭೀರವಾಗಿ ಗಾಯಗೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ