ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣ: ಅಲ್ಲು ಅರ್ಜುನ್ಗೆ ಜಾಮೀನು
Allu Arjun: ಸಂಧ್ಯಾ ಥಿಯೇಟರ್ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ಗೆ ಈಗಾಗಲೇ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಯಮಿತ ಜಾಮೀನು (ರೆಗ್ಯುಲರ್ ಬೇಲ್)ಗೆ ಅಲ್ಲು ಅರ್ಜುನ್ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ಆದೇಶ ಇದೀಗ ಹೊರ ಬಿದ್ದಿದೆ.
ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ರೆಗ್ಯುಲರ್ ಬೇಲ್ ಅಥವಾ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ನಾಂಪಲ್ಲಿ ಕೋರ್ಟ್ನಲ್ಲಿ ಈ ಅರ್ಜಿಯ ವಿಚಾರಣೆಯೂ ನಡೆದಿದೆ. ಇಂದು (ಜನವರಿ 03) ನ್ಯಾಯಾಧೀಶರ ಆದೇಶ ಹೊರಬಿದ್ದಿದ್ದು, ಪ್ರಕರಣದಲ್ಲಿ ಅಲ್ಲು ಅರ್ಜುನ್ಗೆ ಜಾಮೀನು ದೊರೆತಿದೆ.
ಡಿಸೆಂಬರ್ 04 ರಂದು ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರಕ್ಕೆ ಅಲ್ಲು ಅರ್ಜುನ್ ಭೇಟಿ ನೀಡಿದ್ದಾಗ ನಡೆದ ಕಾಲ್ತುಳಿತದಲ್ಲಿ ರೇವತಿ ಹೆಸರಿನ ಮಹಿಳೆ ಮೃತಪಟ್ಟಿದ್ದರು. ಅವರ ಪುತ್ರ ಗಂಭೀರವಾಗಿ ಗಾಯಗೊಂಡು ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಮೃತ ಮಹಿಳೆಯ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಆಧರಿಸಿ ಹೈದರಾಬಾದ್ ಪೊಲೀಸರು ಅಲ್ಲು ಅರ್ಜುನ್ ಸೇರಿದಂತೆ ಸಂಧ್ಯಾ ಚಿತ್ರಮಂದಿರ ಮಾಲೀಕ ಹಾಗೂ ಮ್ಯಾನೇಜರ್ ಅನ್ನು ಬಂಧಿಸಿದ್ದರು.
ಅಲ್ಲು ಅರ್ಜುನ್ ಬಂಧನವಾದ ದಿನವೇ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಮಧ್ಯಂತರ ಜಾಮೀನು ಪಡೆಯಲಾಗಿತ್ತು. ಅಂತೆಯೇ ನಾಂಪಲ್ಲಿ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಹ ಹಾಕಲಾಗಿತ್ತು. ಈ ಹಿಂದೆಯೂ ಒಮ್ಮೆ ಜಾಮೀನು ವಿಚಾರಣೆ ನಡೆದಿದ್ದು, ಆದೇಶವನ್ನು ಜನವರಿ 03 ಕ್ಕೆ ಅಂದರೆ ಇಂದಿಗೆ ಕಾಯ್ದಿರಿಸಲಾಗಿತ್ತು. ಇಂದು ಆದೇಶ ಹೊರಬಿದ್ದಿದ್ದು ಪ್ರಕರಣದಲ್ಲಿ ಅಲ್ಲು ಅರ್ಜುನ್ಗೆ ಜಾಮೀನು ದೊರೆತಿದೆ.
ಇದನ್ನೂ ಓದಿ:ಕಾಲ್ತುಳಿತ ಪ್ರಕರಣ: ‘ಪುಷ್ಪ 2’ ನಿರ್ಮಾಪಕರಿಗೆ ಹೈಕೋರ್ಟ್ ರಿಲೀಫ್: ಅಲ್ಲು ಅರ್ಜುನ್ ಕತೆ?
ಅಲ್ಲು ಅರ್ಜುನ್ಗೆ ಈಗ ಷರತ್ತು ಬದ್ಧ ಜಾಮೀನು ಮಂಜೂರಾಗಿದ್ದು, ಜಾಮೀನು ನೀಡಿರುವ ನಾಂಪಲ್ಲಿ ನ್ಯಾಯಾಲಯ, 1 ಲಕ್ಷ ರೂಪಾಯಿ ಭದ್ರತಾ ಮೊತ್ತ ಮತ್ತು ಇಬ್ಬರು ವ್ಯಕ್ತಿಗಳ ಶೂರಿಟಿಯನ್ನು ಕೇಳಿದೆ. ವಿದೇಶ ಪ್ರಯಾಣದ ಮೇಲೆ ಯಾವುದೇ ನಿರ್ಭಂಧ ವಿಧಿಸಿಲ್ಲ ಎನ್ನಲಾಗುತ್ತಿದೆ. ಜಾಮೀನು ದೊರೆತಿರುವ ಕಾರಣ ನಿರಾಳರಾಗಿರುವ ಅಲ್ಲು ಅರ್ಜುನ್, ಮುಂದಿನ ಹೆಜ್ಜೆಯಾಗಿ ತಮ್ಮ ಮೇಲಿನ ಪ್ರಕರಣ ರದ್ದು ಪಡಿಸಲು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಇದೇ ಪ್ರಕರಣದಲ್ಲಿ ‘ಪುಷ್ಪ 2’ ಸಿನಿಮಾದ ನಿರ್ಮಾಪಕರ ಮೇಲೂ ಎಫ್ಐಆರ್ ದಾಖಲಾಗಿತ್ತು. ಆದರೆ ಹೈಕೋರ್ಟ್ನಲ್ಲಿ ಅರ್ಜಿ ಹಾಕಿದ್ದ ಮೈತ್ರಿ ಮೂವಿ ಮೇಕರ್ಸ್ ತಮ್ಮ ಮೇಲೆ ದಾಖಲಾಗಿದ್ದ ಪ್ರಕರಣ ರದ್ದು ಮಾಡುವಂತೆ ಮನವಿ ಮಾಡಿದ್ದರು. ಆದೇಶ ನೀಡಿದ ಹೈಕೋರ್ಟ್, ನಿರ್ಮಾಪಕರನ್ನು ಬಂಧಿಸದಂತೆ ಪೊಲೀಸರಿಗೆ ಸೂಚಿಸಿರುವ ಜೊತೆಗೆ ಆರೋಪಿಗಳನ್ನು ಸರಿಯಾಗಿ ಹೆಸರಿಸಿ ಮತ್ತೊಮ್ಮೆ ಪಿಟಿಷನ್ ಸಲ್ಲಿಸುವಂತೆ ಸೂಚಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Fri, 3 January 25