ಹುಟ್ಟೂರಿನ ಸರ್ಕಾರಿ ಶಾಲೆಯನ್ನು ನವೀಕರಣ ಮಾಡಿದ ಡಾಲಿ ಧನಂಜಯ್
Dali Dhananjaya: ಡಾಲಿ ಧನಂಜಯ್ ಮುಂದಿನ ತಿಂಗಳು ವೈದ್ಯೆ ಧನ್ಯತಾ ಜೊತೆಗೆ ಮೈಸೂರಿನಲ್ಲಿ ವಿವಾಹವಾಗಲಿದ್ದಾರೆ. ಮದುವೆಗೆ ಮುಂಚೆ ಡಾಲಿ ಧನಂಜಯ್ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಶಿಥಿಲಗೊಂಡಿದ್ದ ತಮ್ಮ ಹುಟ್ಟೂರಿನ ಸರ್ಕಾರಿ ಶಾಲೆಯನ್ನು ನವೀಕರಣ ಮಾಡುತ್ತಿದ್ದಾರೆ. ಇಲ್ಲಿದೆ ನೋಡಿ ಡಾಲಿಯ ಸಾಮಾಜಿಕ ಕಾರ್ಯದ ಮಾಹಿತಿ...
ಡಾಲಿ ಧನಂಜಯ್ ಒಳ್ಳೆಯ ನಟ, ನಿರ್ಮಾಪಕ ಆಗಿರುವ ಜೊತೆಗೆ ಸಾಮಾಜಿಕ ಕಾಳಜಿ ಇರುವ ವ್ಯಕ್ತಿ. ಮುಂದಿನ ತಿಂಗಳು ವೈದ್ಯೆ ಧನ್ಯತಾ ಜೊತೆ ವಿವಾಹವಾಗುತ್ತಿರುವ ಡಾಲಿ ಧನಂಜಯ್, ಮದುವೆಗೆ ಮುಂಚೆ ಸಾಮಾಜಿಕ ಕಾರ್ಯವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಡಾಲಿ ಧನಂಜಯ್ ಹುಟ್ಟೂರಿನಲ್ಲಿದ್ದ ಸರ್ಕಾರಿ ಶಾಲೆ ಹಳತಾಗಿತ್ತು, ಗೋಡೆಗಳು ಬಿರಕು ಬಿಟ್ಟಿದ್ದವು, ಛಾವಣಿ ಸೋರುತ್ತಿತ್ತು, ನೆಲ ಹಾಸು ಕಿತ್ತೇ ಹೋಗಿತ್ತು. ಇನ್ನೂ ಕೆಲವು ಸಮಸ್ಯೆಗಳು ಶಾಲೆಯಲ್ಲಿದ್ದವು. ಇದೀಗ ಡಾಲಿ ಧನಂಜಯ್ ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಯನ್ನು ನವೀಕರಣ ಮಾಡುತ್ತಿದ್ದಾರೆ.
ಡಾಲಿ ಧನಂಜಯ್ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ 1 ರಿಂದ 7 ನೇ ತರಗತಿವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆ ತುಸು ಶಿಥಿಲಗೊಂಡಿತ್ತು. ಇದನ್ನು ಗಮನಿಸಿದ ಡಾಲಿ ಧನಂಜಯ್ ಇಡೀ ಶಾಲೆಗೆ ಹೊಸ ರೂಪ ನೀಡಲು ಮುಂದಾಗಿದ್ದಾರೆ. ಶಾಲೆಯ ಶಿಥಿಲಗೊಂಡಿದ್ದ ಗೋಡೆ ಮತ್ತು ತಾರಸಿಗೆ ಚುರುಕಿ ಹಾಕಿಸುತ್ತಿದ್ದಾರೆ. ಶಿಥಿಲವಾಗಿದ್ದ ನೆಲ ಹಾಸನ್ನು ತೆಗೆಸಿ ಹೊಸ ಟೈಲ್ಸ್ ಹಾಕಿಸುತ್ತಿದ್ದಾರೆ. ಹಾಗೂ ಶಿಕ್ಷಕರ ಕೊಠಡಿಯನ್ನು ನವೀಕರಣಗೊಳಿಸುತ್ತಿದ್ದಾರೆ. ಗೇಟ್ ದುರಸ್ತಿ, ಕಾಂಪೌಂಡ್ ದುರಸ್ತಿ, ಇಡೀ ಶಾಲೆಗೆ ಬಣ್ಣ, ಶೌಚಾಲಯ ನವೀಕರಣ, ಹೊಸ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್, ಸುಸಜ್ಜಿತ ಅಡುಗೆ ಮನೆ ಇನ್ನಿತರೆಗಳನ್ನು ಡಾಲಿ ಧನಂಜಯ್ ಮಾಡಿಸಿಕೊಡುತ್ತಿದ್ದಾರೆ.
ಇದನ್ನೂ ಓದಿ:ಡಿಕೆ ಸಹೋದರರನ್ನು ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್
ಡಾಲಿ ಧನಂಜಯ್ ಖುದ್ದಾಗಿ ಸರ್ಕಾರಿ ಶಾಲೆಗೆ ಭೇಟಿ ನೀಡಿ ಶಿಕ್ಷಕರೊಡನೆ, ಶಾಲೆಯ ಎಸ್ಡಿಎಂಸಿ ಸದಸ್ಯರೊಡನೆ ಮಾತನಾಡಿದ್ದು, ಶಾಲೆಗೆ ಅಗತ್ಯವಾದ ನವೀಕರಣ ಮಾಡಿಸುತ್ತಿದ್ದಾರೆ. ದುರಸ್ತಿ ಹಾಗೂ ಮರುನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದ್ದು, ಕೆಲವೇ ವಾರಗಳಲ್ಲಿ ಶಾಲೆಗೆ ಹೊಸ ರೂಪ ಸಿಗಲಿದೆ. ಡಾಲಿ ಧನಂಜಯ್ ಮಾಡುತ್ತಿರುವ ಈ ಸಾಮಾಜಿಕ ಕಾರ್ಯಕ್ಕೆ ಊರಿನವರಿಂದ ಮತ್ತು ಅಭಿಮಾನಿಗಳಿಂದ ಪ್ರಶಂಸೆ ದೊರೆತಿದೆ.
ಡಾಲಿ ಧನಂಜಯ್, ಮೊದಲಿನಿಂದಲೂ ತಮ್ಮನ್ನು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಗತ್ಯ ಬಂದಾಗ ರೈತರ ಪರ, ಕನ್ನಡ ಪರ ಹೇಳಿಕೆಗಳನ್ನು, ಸಮಾನತೆಯ ಪರ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಈ ಹಿಂದೆ ದೇಸಿ ಉದ್ಯಮಳಿಗೆ ಬೆಂಬಲ ನೀಡುವ ಕಾರ್ಯವನ್ನು ಅವರು ಮಾಡಿದ್ದರು. ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ರಾಯಭಾರಿ ಆಗಿರುವ ಡಾಲಿ ಧನಂಜಯ್, ಚರ್ಮ ಮತ್ತು ಕರಕುಶಲ ಕಾರ್ಮಿಕರ ಜೀವನಕ್ಕೆ ಪರೋಕ್ಷವಾಗಿ ನೆರವಾಗುವ ಪ್ರಯತ್ನ ಮಾಡುತ್ತಿದ್ದಾರೆ.
ಡಾಲಿ ಧನಂಜಯ್ ಇದೀಗ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಉತ್ತರಕಾಂಡ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ಸಿನಿಮಾಗಳ ಮೇಲೆ ಬಂಡವಾಳವನ್ನೂ ಹೂಡಿದ್ದಾರೆ. ಫೆಬ್ರವರಿ 16 ರಂದು ವೈದ್ಯೆ ಧನ್ಯತಾ ಜೊತೆಗೆ ಮೈಸೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ ಡಾಲಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Sat, 4 January 25