ಹೈದರಾಬಾದ್​​ನ ಅಲ್ಲು ಅರ್ಜುನ್ ಹೊಸ ಥಿಯೇಟರ್​​ನಲ್ಲಿ ಇಬ್ಬರು ಕನ್ನಡ ನಿರ್ದೇಶಕರ ಫೋಟೋ

Allu Arjun: ಅಲ್ಲು ಅರ್ಜುನ್ ಅವರ 'ಅಲ್ಲು ಸಿನಿಮಾಸ್' ಮಲ್ಟಿಪ್ಲೆಕ್ಸ್ ಕೋಕಾಪೇಟ್‌ನಲ್ಲಿ ಹೊಸ ಶಾಖೆಯನ್ನು ತೆರೆಯಲಿದೆ. ಸಂಕ್ರಾಂತಿಗೆ ಶುಭಾರಂಭ ಮಾಡಲಿರುವ ಈ ಮಲ್ಟಿಪ್ಲೆಕ್ಸ್‌ನಲ್ಲಿ ಕನ್ನಡದ ನಿರ್ದೇಶಕರ ಫೋಟೋಗಳನ್ನು ಅಳವಡಿಸಲಾಗಿದೆ. 75 ಅಡಿ ದೊಡ್ಡ ಪರದೆಯನ್ನು ಹೊಂದಿರುವ ಇದು ಉತ್ತಮ ಸಿನಿಮಾ ಅನುಭವ ನೀಡಲಿದೆ.

ಹೈದರಾಬಾದ್​​ನ ಅಲ್ಲು ಅರ್ಜುನ್ ಹೊಸ ಥಿಯೇಟರ್​​ನಲ್ಲಿ ಇಬ್ಬರು ಕನ್ನಡ ನಿರ್ದೇಶಕರ ಫೋಟೋ
ಅಲ್ಲು ಅರ್ಜುನ್

Updated on: Jan 05, 2026 | 7:37 AM

ಅಲ್ಲು ಅರ್ಜುನ್ (Allu Arjun) ಅವರು ತಮ್ಮದೇ ಆದ ಮಲ್ಟಿಪ್ಲೆಕ್ಸ್ ಚೈನ್ ಹೊಂದಿದ್ದಾರೆ. ‘ಅಲ್ಲು ಸಿನಿಮಾಸ್’ ಅನ್ನೋದು ಇದರ ಹೆಸರು. ಹೈದರಾಬಾದ್​​ನಲ್ಲಿ ಇದು ತನ್ನ ಶಾಖೆ ಹೊಂದಿದೆ. ಅಲ್ಲ ಅರ್ಜುನ್ ಈ ಮಲ್ಟಿಪ್ಲೆಕ್ಸ್​ ಚೈನ್ ಅನ್ನು ವಿಸ್ತರಿಸುವ ಪ್ರಯತ್ನದಲ್ಲಿ ಇದ್ದಾರೆ. ಈಗ ಅವರು ಹೈದರಾಬಾದ್ ಹೊರವಲಯದಲ್ಲಿರುವ ಕೋಕಾಪೇಟ್​​ನಲ್ಲಿ ಹೊಸ ಥಿಯೇಟರ್​ ಕಟ್ಟಿದ್ದಾರೆ. ಸಂಕ್ರಾಂತಿಯಂದು ಇದು ಆರಂಭ ಆಗಲಿದೆ. ಇದರಲ್ಲಿ ಇಬ್ಬರು ಕನ್ನಡದ ನಿರ್ದೇಶಕರ ಫೋಟೋ ಇದೆ.

ಇತ್ತೀಚೆಗೆ ನಿರ್ಮಾಣ ಆಗುತ್ತಿರುವ ಮಲ್ಟಿಪ್ಲೆಕ್ಸ್​​ಗಳನ್ನು ಅಂದಗಾಣಿಸಲು ನಾನಾ ತಂತ್ರ ಬಳಸಲಾಗುತ್ತಿದೆ. ಐಕಾನಿಕ್ ಸಿನಿಮಾ ಹೆಸರುಗಳನ್ನು ಬರೆಯೋದು, ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ತೆಗೆದ ಅಪರೂಪದ ಫೋಟೋಗಳನ್ನು ಫ್ರೇಮ್ ಹಾಕಿಸೋದು ಅಥವಾ ಖ್ಯಾತ ನಿರ್ದೇಶಕರು/ನಟರ ಫೋಟೋಗಳನ್ನು ಹಾಕೋದನ್ನು ಮಾಡಲಾಗುತ್ತದೆ. ಈಗ ಅಲ್ಲು ಅರ್ಜುನ್ ಕೂಡ ಇದನ್ನೇ ಮಾಡಿದ್ದಾರೆ.

ಕೋಕಾಪೇಟ್​​ನಲ್ಲಿ ನಿರ್ಮಾಣ ಆಗಿರುವ ‘ಅಲ್ಲು ಸಿನಿಮಾಸ್​’ ಒಳಭಾಗದ ಗೋಡೆಯ ಮೇಲೆ ಹಲವು ನಿರ್ದೇಶಕರ ಫೋಟೋಗಳಿವೆ. ಇದರಲ್ಲಿ ಕನ್ನಡದ ರಿಷಬ್ ಶೆಟ್ಟಿ ಹಾಗೂ ಪ್ರಶಾಂತ್ ನೀಲ್ ಫೋಟೋ ಕೂಡ ಇದೆ. ತೆಲುಗು ನಿರ್ದೇಶಕರಾದ ರಾಜಮೌಳಿ, ಸುಕುಮಾರ್, ತ್ರಿವಿಕ್ರಂ ಶ್ರೀನಿವಾಸ್ ಫೋಟೋಗಳಿವೆ. ತಮಿಳಿನ ಮಣಿರತ್ನಂ, ವೆಟ್ರಿಮಾರನ್, ಅಟ್ಲೀ ಭಾವಚಿತ್ರ ಹಾಕಲಾಗಿದೆ. ಹಿಂದಿಯ ರಾಜ್​ಕುಮಾರ್ ಹಿರಾನಿ, ಸಂದೀಪ್ ರೆಡ್ಡಿ ವಂಗ ಸೇರಿದಂತೆ ಇನ್ನೂ ಕೆಲವು ನಿರ್ದೇಶಕರ ಫೋಟೋಗಳು ಇವೆ. ಈ ವಿಡಿಯೋ ವೈರಲ್ ಆಗುತ್ತಿದೆ. ಕನ್ನಡಿಗರಿಂದ ಇದಕ್ಕೆ ಮೆಚ್ಚುಗೆ ಸಿಕ್ಕಿದೆ.

ರಿಷಬ್ ಶೆಟ್ಟಿ ಹಾಗೂ ಪ್ರಶಾಂತ್ ನೀಲ್ ಹೆಸರು ತೆಲುಗು ಮಂದಿಗೂ ತಿಳಿದಿದೆ. ಪ್ರಶಾಂತ್ ನೀಲ್ ಅವರು ‘ಕೆಜಿಎಫ್’ ಸರಣಿ ಸಿನಿಮಾ ನಿರ್ದೇಶಿಸಿ ಫೇಮಸ್ ಆದವರು. ತೆಲುಗಿನಲ್ಲೂ ಸಿನಿಮಾ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ರಿಷಬ್ ಅವರು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ತೆಲುಗು ರಾಜ್ಯಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಕಾರಣದಿಂದ ಇವರ ಫೋಟೋಗಳನ್ನು ಹಾಕಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಚಾರ್ಜ್​ಶೀಟ್ ಸಲ್ಲಿಕೆ; ಅಲ್ಲು ಅರ್ಜುನ್ ಎಷ್ಟನೇ ಆರೋಪಿ?

ಅಲ್ಲು ಸಿನಿಮಾಸ್ ಸಂಕ್ರಾಂತಿಗೆ ಆರಂಭ ಆಗುವ ಸಾಧ್ಯತೆ ಇದೆ. 75 ಅಡಿಯ ಸ್ಕ್ರೀನ್​ನ ಇದು ಹೊಂದಿದೆ ಎನ್ನಲಾಗಿದೆ. ಒಳ್ಳೆಯ ಅನುಭವ ಪಡೆಯಲು ಮಲ್ಟಿಪ್ಲೆಕ್ಸ್ ಸಹಕಾರಿ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:35 am, Mon, 5 January 26