
ಬಾಂಗ್ಲಾದೇಶದಲ್ಲಿ ಗಲಭೆ ಮತ್ತೆ ಭುಗಿಲೆದ್ದಿದೆ. ಮಾಜಿ ಅಧ್ಯಕ್ಷ ಶೇಕ್ ಮುಜಿಬುರ್ ರೆಹಮಾನ್ ಮನೆಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಇಡೀ ಬಾಂಗ್ಲಾದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಆಗಿದೆ. ಹೀಗಿರುವಾಗಲೇ ದೇಶದ್ರೋಹದ ಆರೋಪದ ಮೇಲೆ ಬಾಂಗ್ಲಾ ನಟಿ ಮೆಹರ್ ಅಫ್ರೋಜ್ ಶಾನ್ ಅವರನ್ನು ಬಂಧಿಸಲಾಗಿದೆ. ಅವರನ್ನು ಸದ್ಯ ವಿಚಾರಣೆ ನಡೆಸಲಾಗುತ್ತಿದೆ. ಇದು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಭಾನುವಾರ (ಫೆಬ್ರವರಿ 6) ರಾತ್ರಿ ಮೆಹರ್ ಅವರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರೆಜಾಲ್ ಕರೀಂ ಮಲ್ಲಿಕ್ ಹೇಳಿದ್ದಾರೆ. ದೇಶದ್ರೋಹದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆ ಕುರಿತು ಪ್ರಶ್ನೆ ಮಾಡಲಾಗುತ್ತಿದೆ. ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವನ್ನು ಅವರು ಟೀಕಿಸಿದ್ದರು ಎಂದು ಹೇಳಲಾಗಿದೆ.
ಮೆಹರ್ ಬಂಧನಕ್ಕೂ ಮೊದಲು ಬಾಂಗ್ಲಾದ ಜಮಲ್ಪುರದ ಮನೆಯ ಮೇಲೆ ದಾಳಿ ನಡೆದಿದೆ. ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಮನೆಯ ಬಳಿ ಬಂದು ವಸ್ತುಗಳನ್ನು ಹಾಳು ಮಾಡಿದ್ದಾರೆ. ಈ ಮನೆಯಲ್ಲಿ ಮೆಹರ್ ಅವರ ಕುಟುಂಬದವರು ವಾಸವಾಗಿದ್ದರು. ಆ ಬಳಿಕ ಮೆಹೆರ್ ಬಂಧನ ಆಗಿದೆ. ದಾಳಿಗೆ ಒಳಗಾಗಿರುವ ಮನೆ ಮೆಹರ್ ಅವರ ತಂದೆ ಇಂಜಿನಿಯರ್ ಮೊಹಮದ್ ಅಲಿಗೆ ಸೇರಿದೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ, ಮಾಜಿ ಅಧ್ಯಕ್ಷ ಶೇಕ್ ಮುಜಿಬುರ್ ಮನೆಗೆ ಬೆಂಕಿ
ಬಾಂಗ್ಲಾದೇಶದ ಸ್ವಾತಂತ್ರ್ಯ ಚಳುವಳಿಯ ನಾಯಕನಾಗಿ ಶೇಖ್ ಮುಜಿಬುರ್ ರೆಹಮಾನ್ ಗುರುತಿಸಿಕೊಂಡಿದ್ದರು. ಅವರು 1971ರಲ್ಲಿ ಪಾಕಿಸ್ತಾನದಿಂದ ದೇಶವನ್ನು ಬೇರ್ಪಡಿಸುವುದಾಗಿ ಘೋಷಿಸಿದರು. 1975ರಲ್ಲಿ ವಾಸವಿದ್ದ ಮನೆಯಲ್ಲಿ ಅವರನ್ನು ಕೊಲ್ಲಲಾಯಿತು. ನಂತರ ಹಸೀನಾ ಆ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಿದರು. ಇದೇ ಮನೆಗೆ ಈಗ ಬೆಂಕಿ ಇಡುವ ಕೆಲಸ ಆಗಿದೆ.
ಮೆಹರ್ ಅವುರ ಕಿರುತೆರೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಈಗ ಅವರಿಗೆ 43 ವರ್ಷ ವಯಸ್ಸು. 1988ರಿಂದ ಕಿರುತೆರೆಯ ಜೊತೆ ನಂಟು ಜೊಂದಿದ್ದರು. 2004ರಲ್ಲಿ ಇವರು ವಿವಾಹ ಆದರು. 2012ರಲ್ಲಿ ಪತಿ ನಿಧನ ಹೊಂದಿದರು. ಮೆಹರ್ಗೆ ಇಬ್ಬರು ಮಕ್ಕಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:02 am, Fri, 7 February 25