AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಶಾಂತ್ ಸಿಂಗ್ ರಜಪೂತ್ ಕೇಸ್​ಗೆ ಮರುಜೀವ; ಫೆ.19ರಂದು ಮತ್ತೆ ಕೋರ್ಟ್ ವಿಚಾರಣೆ

ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದ್ದ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಕಾರಣ ಏನು ಎಂಬುದು ಇಂದಿಗೂ ಸ್ಪಷ್ಟವಾಗಿಲ್ಲ. ಹಲವರ ಮೇಲೆ ಅನುಮಾನ ಇದ್ದರೂ ಕೂಡ ಅಂತಿಮ ತೀರ್ಪು ಹೊರಬಿದ್ದಿಲ್ಲ. ಈಗ ಮತ್ತೆ ಈ ಕೇಸ್​ಗೆ ಸಂಬಂಧಿಸಿದಂತೆ ಹೊಸದಾಗಿ ತನಿಖೆ ಮಾಡಬೇಕು ಎಂಬ ಕೂಗು ಕೇಳಿಬಂದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಸುಶಾಂತ್ ಸಿಂಗ್ ರಜಪೂತ್ ಕೇಸ್​ಗೆ ಮರುಜೀವ; ಫೆ.19ರಂದು ಮತ್ತೆ ಕೋರ್ಟ್ ವಿಚಾರಣೆ
Sushant Singh Rajput
ಮದನ್​ ಕುಮಾರ್​
|

Updated on: Feb 06, 2025 | 10:04 PM

Share

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ನಿಧನರಾಗಿ ನಾಲ್ಕೂವರೆ ವರ್ಷ ಕಳೆದಿದೆ. ಆದರೂ ಕೂಡ ಅವರ ಸಾವಿಗೆ ನಿಖರ ಕಾರಣ ಏನು ಮತ್ತು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಈಗಾಗಲೇ ಅನೇಕ ಆಯಾಮದಿಂದ ತನಿಖೆ ಮಾಡಲಾಗಿದೆಯಾದರೂ ಅಂತಿಮ ತೀರ್ಪು ಹೊರಬಿದ್ದಿಲ್ಲ. ಸುಶಾಂತ್ ಕೇಸ್ ಹಳ್ಳ ಹಿಡಿಯಿತು ಎಂದೇ ಅಭಿಮಾನಿಗಳು ತಿಳಿದುಕೊಂಡಿದ್ದಾರೆ. ಆದರೆ ಆ ರೀತಿ ಆಗುತ್ತಿಲ್ಲ. ಈ ಪ್ರಕರಣಕ್ಕೆ ಮರುಜೀವ ಬರುತ್ತಿದೆ. ಫೆಬ್ರವರಿ 19ರಂದು ಬಾಂಬೆ ಹೈಕೋರ್ಟ್​ ಈ ಕುರಿತು ಮತ್ತೆ ವಿಚಾರಣೆ ನಡೆಸಲಿದೆ.

ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವನ್ನು ಮತ್ತೆ ಆಳವಾಗಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿಕೊಂಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಫೆಬ್ರವರಿ 19ಕ್ಕೆ ಅದರ ವಿಚಾರಣೆಗೆ ಸಮಯ ನಿಗದಿ ಮಾಡಲಾಗಿದೆ. ಸುಶಾಂತ್ ನಿಧನದ ಜೊತೆಗೆ ಅವರ ಮ್ಯಾನೇಜರ್​ ದಿಶಾ ಸಾಲಿಯಾನ್ ಸಾವಿನ ಬಗ್ಗೆಯೂ ಸೂಕ್ತ ತನಿಖೆಗೆ ಕೋರ್ಟ್ ಆದೇಶಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ.

ದಿಶಾ ಸಾಲಿಯಾನ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಶಿವಸೇನಾ ಎಂಎಲ್​ಎ ಆದಿತ್ಯ ಠಾಕ್ರೆ ಅವರನ್ನು ಬಂಧಿಸಬೇಕು ಮತ್ತು ತನಿಖೆಗೆ ಒಳಪಡಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಮನವಿ ಮಾಡಿಕೊಳ್ಳಲಾಗಿದೆ. ಅಲ್ಲದೇ ಈತನಕ ಸಿಬಿಐ ಮಾಡಿದ ತನಿಖೆಯ ಸಮಗ್ರ ವರದಿಯನ್ನು ಕೋರ್ಟ್​ಗೆ ಸಲ್ಲಿಸಬೇಕು ಎಂದು ಕೂಡ ಅರ್ಜಿಯಲ್ಲಿ ಕೋರಲಾಗಿದೆ.

ಇದನ್ನೂ ಓದಿ: ಸುಶಾಂತ್ ನಿಧನರಾದ ಮನೆಯಲ್ಲಿ ಅದಾ ಶರ್ಮಾ ವಾಸ; ಅನುಭವ ತಿಳಿಸಿದ ನಟಿ

ಈ ಹಿನ್ನೆಲೆಯಲ್ಲಿ ಆದಿತ್ಯ ಠಾಕ್ರೆ ಕೂಡ ಬಾಂಬೆ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ. ಯಾವುದೇ ಆದೇಶ ಹೊರಡಿಸುವುದಕ್ಕೂ ಮುನ್ನ ತಮ್ಮ ವಾದವನ್ನು ಕೇಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ನಿಧನಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಆಗಿರುವುದರಿಂದ ಈಗ ಮತ್ತೆ ತನಿಖೆಗೆ ಒತ್ತಾಯಿಸಿ ಅರ್ಜಿ ಸಲ್ಲಿಸಿರುವುದು ಸೂಕ್ತವಲ್ಲ ಎಂದು ಅವರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ಫೆಬ್ರವರಿ 19ರಂದು ಎರಡೂ ಕಡೆಯ ವಾದವನ್ನು ನ್ಯಾಯಾಲಯ ಆಲಿಸಲಿದೆ. ಬಳಿಕ ಹೊರಬರುವ ಆದೇಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಸುಶಾಂತ್ ಸಾವಿಗೆ ನ್ಯಾಯ ಸಿಗಬೇಕು ಎಂದು ಫ್ಯಾನ್ಸ್ ಒತ್ತಾಯಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.