ನಿಮಗಾಗಿಯೇ ಈ ಸಿನಿಮಾನಲ್ಲಿ ನಟಿಸಿದೆ: ‘ಎಕೆಟಿ’ ಸಿನಿಮಾ ವೇದಿಕೆಯಲ್ಲಿ ಉಪ್ಪಿ ಮಾತು

Andhra King Taluka: ಉಪೇಂದ್ರ ಅವರು ತೆಲುಗಿನ ‘ಆಂಧ್ರ ಕಿಂಗ್ ತಾಲ್ಲೂಕ’ ಸಿನಿಮಾನಲ್ಲಿ ಸೂಪರ್ ಸ್ಟಾರ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಸಿನಿಮಾದ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಸಿನಿಮಾದ ಬಗ್ಗೆ ಉಪ್ಪಿ ಮಾತನಾಡಿದರು.

ನಿಮಗಾಗಿಯೇ ಈ ಸಿನಿಮಾನಲ್ಲಿ ನಟಿಸಿದೆ: ‘ಎಕೆಟಿ’ ಸಿನಿಮಾ ವೇದಿಕೆಯಲ್ಲಿ ಉಪ್ಪಿ ಮಾತು
Upendra Andhra King

Updated on: Nov 20, 2025 | 12:36 PM

ಸೂಪರ್ ಸ್ಟಾರ್ ಉಪೇಂದ್ರ (Upendra) ಅವರು ತೆಲುಗು ಸಿನಿಮಾ ‘ಆಂಧ್ರ ಕಿಂಗ್ ತಾಲ್ಲೂಕ’ (ಎಕೆಟಿ)ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ ಉಪೇಂದ್ರ ಈ ಸಿನಿಮಾನಲ್ಲಿ ಸೂಪರ್ ಸ್ಟಾರ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ನಾಯಕ ರಾಮ್ ಚರಣ್, ಅಭಿಮಾನಿಯ ಪಾತ್ರದಲ್ಲಿ ನಟಿಸಿದ್ದಾರೆ. ಇದು ಒಬ್ಬ ಅಭಿಮಾನಿ ಮತ್ತು ಸೂಪರ್ ಸ್ಟಾರ್ ನಡುವೆ ನಡೆಯುವ ಕತೆಯನ್ನು ಒಳಗೊಂಡಿದೆ. ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯ ಚಾಲ್ತಿಯಲ್ಲಿದೆ. ಇತ್ತೀಚೆಗಷ್ಟೆ ಸಿನಿಮಾ ತಂಡ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಉಪೇಂದ್ರ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು.

‘ಈ ಸಿನಿಮಾನಲ್ಲಿ ನಾನೋ ಅಥವಾ ರಾಮ್ ಅವರೋ ನಾಯಕ ಅಲ್ಲ. ಈ ಸಿನಿಮಾಕ್ಕೆ ನಾಯಕ ನೀವುಗಳು. ಏಕೆಂದರೆ ಇದು ಅಭಿಮಾನಿಗಳ ಸಿನಿಮಾ, ಅಭಿಮಾನಿಗಳಿಗಾಗಿ ಮಾಡಿದ ಸಿನಿಮಾ. ಈ ಸಿನಿಮಾ ನೋಡಿ ಹೊರಬರುವಾಗ ನೀವೆಲ್ಲ ಕಾಲರ್ ಮೇಲಕ್ಕೇರಿಸಿಕೊಂಡು ಬರುವುದು ಪಕ್ಕಾ. ಇದೊಂದು ಪಕ್ಕಾ ಕಮರ್ಶಿಯಲ್ ಸಿನಿಮಾ. ಇದರಲ್ಲಿ ಹಾಡುಗಳಿವೆ, ಡ್ಯಾನ್ಸ್ ಇದೆ, ಫೈಟ್ಸ್ ಇದೆ, ಲವ್ ಇದೆ ಎಲ್ಲವೂ ಹೊಂದಿರುವ ಪಕ್ಕಾ ಪ್ಯಾಕೇಜ್ ಈ ಸಿನಿಮಾ’ ಎಂದರು ಉಪ್ಪಿ.

‘ಈ ಸಿನಿಮಾ ಒಪ್ಪಿಕೊಳ್ಳಲು ಸಹ ನೀವುಗಳೇ (ಅಭಿಮಾನಿಗಳು) ಕಾರಣ. ನಿಮ್ಮಿಂದಲೇ ನಾವುಗಳು. ಈ ಸಿನಿಮಾನಲ್ಲಿ ಎಲ್ಲ ಅಭಿಮಾನಿಗಳನ್ನು ರಾಮ್ ಪೋತಿನೇನಿ ಪ್ರತಿನಿಧಿಸಿದ್ದಾರೆ. ಅಭಿಮಾನಿಯ ಮನಸ್ಥಿತಿಯನ್ನು ಅವರು ತೋರಿಸಿಕೊಟ್ಟಿದ್ದಾರೆ. ನಾನು ಇಲ್ಲಿ ಎಲ್ಲ ಸ್ಟಾರ್ ನಟರನ್ನು ಪ್ರತಿನಿಧಿಸಿದ್ದೇನೆ. ಇದು ಅಭಿಮಾನಿ ಹಾಗೂ ಸ್ಟಾರ್ ನಟನ ನಡುವಿನ ಬಂಧದ ಕತೆ’ ಎಂದರು ಉಪೇಂದ್ರ.

ಇದನ್ನೂ ಓದಿ:ಶಂಕರ್​ ನಾಗ್ ಬಯೋಪಿಕ್ ಬಗ್ಗೆ ಮಾತನಾಡಿದ ಉಪೇಂದ್ರ; ಸಿಕ್ತು ದೊಡ್ಡ ಅಪ್​ಡೇಟ್

ಸಹ ನಟರಾದ ರಾಮ್ ಪೋತಿನೇನಿ ಮತ್ತು ಭಾಗ್ಯಶ್ರೀ ಬೋರ್ಸೆ ಬಗ್ಗೆ ಮಾತನಾಡಿದ ಉಪೇಂದ್ರ, ‘ರಾಮ್ ಮತ್ತು ಭಾಗ್ಯಶ್ರೀ ಅವರದ್ದು ಅದ್ಭುತವಾದ ಜೋಡಿ. ಇಬ್ಬರೂ ಸಹ ಅದ್ಭುತವಾದ ಕಲಾವಿದರು. ತೆರೆಯ ಮೇಲೆ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ರಾಮ್ ಅವರೊಟ್ಟಿಗೆ ಕೆಲಸ ಮಾಡುತ್ತಾ ನಾನು ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ನೀವು ಹೀಗೆಯೇ ಸಿನಿಮಾ ಮಾಡುತ್ತಲೇ ಇರಬೇಕು, ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬರುತ್ತಲೇ ಇರಬೇಕು’ ಎಂದು ಉಪೇಂದ್ರ ಹಾರೈಸಿದರು. ಮಾತ್ರಲ್ಲದೆ, ನೆರೆದಿದ್ದ ಅಭಿಮಾನಿಗಳ ರಂಜಿಸಲು ತಮ್ಮ ಸಿನಿಮಾದ ಕೆಲವು ಡೈಲಾಗ್​​ಗಳನ್ನು ಸಹ ಉಪೇಂದ್ರ ಹೇಳಿದರು.

‘ಆಂಧ್ರ ಕಿಂಗ್ ತಾಲ್ಲೂಕ’ ಸಿನಿಮಾ ನವೆಂಬರ್ 27 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ರಾಮ್ ಪೋತಿನೇನಿ ನಾಯಕ, ಭಾಗ್ಯಶ್ರೀ ಬೋರ್ಸೆ ನಾಯಕಿ. ಉಪೇಂದ್ರ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಮಹೇಶ್ ಬಾಬು ಪಚ್ಚಿಗೊಲ್ಲ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ