‘ಸ್ಪಿರಿಟ್’ ಸಿನಿಮಾದಲ್ಲಿ ಪ್ರಭಾಸ್​ಗೆ ಜೋಡಿಯಾದ ‘ಅನಿಮಲ್’ ನಟಿ ತೃಪ್ತಿ ದಿಮ್ರಿ

‘ಅನಿಮಲ್’ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿದ್ದ ತೃಪ್ತಿ ದಿಮ್ರಿ ಅವರಿಗೆ ಈಗ ಬಂಪರ್ ಚಾನ್ಸ್ ಸಿಕ್ಕಿದೆ. ಈಗ ಅವರು ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾಗೆ ನಾಯಕಿ ಆಗಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ‘ಅನಿಮಲ್’ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ‘ಸ್ಪಿರಿಟ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.

‘ಸ್ಪಿರಿಟ್’ ಸಿನಿಮಾದಲ್ಲಿ ಪ್ರಭಾಸ್​ಗೆ ಜೋಡಿಯಾದ ‘ಅನಿಮಲ್’ ನಟಿ ತೃಪ್ತಿ ದಿಮ್ರಿ
Tripti Dimri, Prabhas

Updated on: May 25, 2025 | 7:11 AM

‘ಅರ್ಜುನ್ ರೆಡ್ಡಿ’, ‘ಕಬೀರ್ ಸಿಂಗ್’, ‘ಅನಿಮಲ್’ ಸಿನಿಮಾಗಳ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ಈಗ ಪ್ರಭಾಸ್ (Prabhas) ಜೊತೆ ‘ಸ್ಪಿರಿಟ್’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ನಾಯಕಿ ಯಾರು ಎಂಬ ಬಗ್ಗೆ ಮೊದಲಿನಿಂದಲೂ ಚರ್ಚೆ ನಡೆಯುತ್ತಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಈ ಚಿತ್ರಕ್ಕೆ ನಾಯಕಿ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರು ಚಿತ್ರತಂಡದಿಂದ ಹೊರನಡೆದಿದ್ದಾರೆ. ಈಗ ಅವರ ಜಾಗಕ್ಕೆ ‘ಅನಿಮಲ್’ ಸಿನಿಮಾ ಖ್ಯಾತಿಯ ನಟಿ ತೃಪ್ತಿ ದಿಮ್ರಿ (Tripti Dimri) ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ವಿಷಯವನ್ನು ‘ಸ್ಪಿರಿಟ್’ (Spirit) ಸಿನಿಮಾ ತಂಡ ಅಧಿಕೃತವಾಗಿ ಘೋಷಿಸಿದೆ.

‘ಅನಿಮಲ್’ ಸಿನಿಮಾದಲ್ಲಿ ತೃಪ್ತಿ ದಿಮ್ರಿ ಅವರು ಒಂದು ಪಾತ್ರ ಮಾಡಿದ್ದರು. ಅದು ಚಿಕ್ಕ ಪಾತ್ರವಾದರೂ ಕೂಡ ಪ್ರೇಕ್ಷಕರ ಗಮನ ಸೆಳೆದಿದ್ದರು. ಅಲ್ಲದೇ ಅವರು ತುಂಬ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈಗ ಅವರನ್ನು ‘ಸ್ಪಿರಿಟ್’ ಸಿನಿಮಾದಲ್ಲಿ ಪ್ರಭಾಸ್​ಗೆ ಜೋಡಿಯಾಗಿಸಲು ಸಂದೀಪ್ ರೆಡ್ಡಿ ವಂಗ ನಿರ್ಧರಿಸಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳಿಗೆ ಖುಷಿ ಆಗಿದೆ.

ತೆಲುಗು, ಕನ್ನಡ, ಹಿಂದಿ, ಮಲಯಾಳಂ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ‘ಸ್ಪಿರಿಟ್’ ಸಿನಿಮಾ ನಿರ್ಮಾಣ ಆಗಲಿದೆ. ಹಾಗಾಗಿ ನಾಯಕಿಯ ಆಯ್ಕೆಯ ಸುದ್ದಿಯನ್ನು 9 ಭಾಷೆಯಲ್ಲಿ ಅನೌನ್ಸ್ ಮಾಡಲಾಗಿದೆ. ತೃಪ್ತಿ ದಿಮ್ರಿ ಅವರಿಗೆ ತುಂಬ ಖುಷಿ ಆಗಿದೆ. ‘ಈ ಪಯಣದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು. ನಿಮ್ಮ ಸಿನಿಮಾದ ಭಾಗವಾಗಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ’ ಎಂದು ಅವರು ನಿರ್ದೇಶಕರಿಗೆ ಧನ್ಯವಾದ ತಿಳಿಸಿದ್ದಾರೆ.

‘ಸ್ಪಿರಿಟ್’ ಸಿನಿಮಾದಲ್ಲಿ ಪ್ರಭಾಸ್ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಅವರಿಗೆ ಜೋಡಿಯಾಗಿ ತೃಪ್ತಿ ದಿಮ್ರಿ ಅವರು ಯಾವ ರೀತಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾದಿದ್ದಾರೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಮೇಲೆ ಜನರಿಗೆ ನಿರೀಕ್ಷೆ ಮೂಡಿದೆ. ದೊಡ್ಡ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ.

ಇದನ್ನೂ ಓದಿ: 2024ರ ಜನಪ್ರಿಯತೆಯಲ್ಲಿ ಶಾರುಖ್, ದೀಪಿಕಾ, ಪ್ರಭಾಸ್​ ಮೀರಿಸಿದ ನಟಿ ತೃಪ್ತಿ ದಿಮ್ರಿ; ಸಿಕ್ತು ನಂ.1 ಪಟ್ಟ

ಅಷ್ಟಕ್ಕೂ ದೀಪಿಕಾ ಪಡುಕೋಣೆ ಅವರು ಈ ಸಿನಿಮಾದಿಂದ ಹೊರನಡೆದಿದ್ದು ಯಾಕೆ? ವರದಿಗಳ ಪ್ರಕಾರ, ದೀಪಿಕಾ ಪಡುಕೋಣೆ ಅವರು ಇಲ್ಲಸಲ್ಲದ ಬೇಡಿಕೆಗಳನ್ನು ಇಟ್ಟಿದ್ದಾರೆ. ದಿನಕ್ಕೆ 6 ಗಂಟೆಗಳ ಕಾಲ ಮಾತ್ರ ಶೂಟಿಂಗ್ ಮಾಡಬೇಕು, ಕಥೆಯಲ್ಲಿ ಬದಲಾವಣೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಇಟ್ಟಿದ್ದಕ್ಕಾಗಿ ಅವರನ್ನು ಚಿತ್ರತಂಡದಿಂದ ಕೈ ಬಿಡಲಾಗಿದೆ ಎಂಬ ಗಾಸಿಪ್ ಕೇಳಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.