ರಾಜಮೌಳಿ ವಿರುದ್ಧ ಸಿಡಿದೆದ್ದ ಶ್ವಾನಪ್ರಿಯರು; ಅಸಲಿಗೆ ಇಲ್ಲಿ ತಪ್ಪು ಯಾರದ್ದು?
ಭಾರತದ ಬಗ್ಗೆ ವಿದೇಶಿಗರಿಗೆ ತಪ್ಪು ಭಾವನೆ ಮೂಡೋದು ಬೇಡ ಅನ್ನೋದು ರಾಜಮೌಳಿ ಉದ್ದೇಶವಾಗಿತ್ತು. ಆದರೆ, ಪ್ರಾಣಿಗಳ ಹಕ್ಕುಗಳ ರಕ್ಷಣಾ ಕಾರ್ಯಕರ್ತರು ರಾಜಮೌಳಿ ವಿರುದ್ಧ ಸಿಡಿದೆದ್ದಿದ್ದಾರೆ.
ನಿರ್ದೇಶಕ ಎಸ್.ಎಸ್. ರಾಜಮೌಳಿ ಸದಾ ವಿವಾದಗಳಿಂದ ದೂರವೇ ಇರುತ್ತಾರೆ. ಆದರೆ, ಈಗ ಅವರು ಮಾಡಿದ ಟ್ವೀಟ್ ವಿರುದ್ಧ ಶ್ವಾನ ಪ್ರಿಯರು ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲ ರಾಜಮೌಳಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅಷ್ಟಕ್ಕೂ ರಾಜಮೌಳಿ ವಿರುದ್ಧ ಅಭಿಮಾನಿಗಳು ಸಿಟ್ಟಾಗೋಕೆ ಕಾರಣ ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
‘ರಾತ್ರಿ 1 ಗಂಟೆಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದೆ. ಆರ್ಟಿಪಿಸಿಆರ್ ಟೆಸ್ಟ್ ಸಲುವಾಗಿ ಫಾರ್ಮ್ ತುಂಬಲು ನೀಡಿದರು. ಎಲ್ಲ ಪ್ರಯಾಣಿಕರು ನೆಲದ ಮೇಲೆ ಕುಳಿತುಕೊಂಡು, ಗೋಡೆಗೆ ಒರಗಿಸಿಕೊಂಡು ಫಾರ್ಮ್ ತುಂಬುತ್ತಿದ್ದರು. ಅದು ಸರಿ ಎನಿಸುವುದಿಲ್ಲ. ಕನಿಷ್ಟ ಟೇಬಲ್ ಒದಗಿಸುವುದು ಸರಳ ಸೇವೆ. ವಿಮಾನ ನಿಲ್ದಾಣದ ಒಳಗೆ ಈ ಪರಿಸ್ಥಿತಿಯಾದರೆ ಹೊರಗೆ ಬೇರೆಯದೇ ವಾತಾವರಣ ಇದೆ. ವಿಮಾನ ನಿಲ್ದಾಣದಿಂದ ಹೊರಗೆ ಬರುವ ಗೇಟ್ನಲ್ಲಿ ಅನೇಕ ಬೀದಿ ನಾಯಿಗಳು ಕಾಣಿಸಿಕೊಳ್ಳುತ್ತಿವೆ. ವಿದೇಶದಿಂದ ಬರುವ ಅತಿಥಿಗಳು ವಿಮಾನ ನಿಲ್ದಾಣದಲ್ಲೇ ಇಂಥ ವಾತಾವರಣವನ್ನು ನೋಡಿದರೆ ಭಾರತದ ಬಗ್ಗೆ ಒಳ್ಳೆಯ ಭಾವನೆ ಮೂಡುವುದಿಲ್ಲ.’ ಎಂದು ರಾಜಮೌಳಿ ಟ್ವೀಟ್ ಮಾಡಿದ್ದರು.
ಭಾರತದ ಬಗ್ಗೆ ವಿದೇಶಿಗರಿಗೆ ತಪ್ಪು ಭಾವನೆ ಮೂಡೋದು ಬೇಡ ಅನ್ನೋದು ರಾಜಮೌಳಿ ಉದ್ದೇಶವಾಗಿತ್ತು. ಆದರೆ, ಪ್ರಾಣಿಗಳ ಹಕ್ಕುಗಳ ರಕ್ಷಣಾ ಕಾರ್ಯಕರ್ತರು ರಾಜಮೌಳಿ ವಿರುದ್ಧ ಸಿಡಿದೆದ್ದಿದ್ದಾರೆ. ರಾಜಮೌಳಿ ಪ್ರಾಣಿಗಳ ಬಗ್ಗೆ ಆಡಿದ ಈ ಮಾತುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
‘ಪ್ರಾಣಿಗಳನ್ನು ಹೇಗೆ ನೋಡಿಕೊಳ್ಳುತ್ತೇವೆ ಎಂಬುದರ ಆಧಾರದಮೇಲೆ ದೇಶದ ನೈತಿಕ ಅಭಿವೃದ್ಧಿಯನ್ನು ನಿರ್ಧರಿಸಬೇಕು ಎಂದು ಗಾಂಧಿ ಅವರು ಹೇಳಿದ್ದರು. ಈ ದೇಶವನ್ನು ವಿದೇಶಿಯರಿಗೆ ಪರಿಚಯಿಸುವ ಮೊದಲು ಪ್ರತಿಯೊಬ್ಬರೂ ಈ ಒಂದು ವಿಚಾರ ನೆನಪಿಕೊಟ್ಟಳ್ಳಬೇಕು. ಭಾರತದಲ್ಲಿ ಹಲವಾರು ವಿಷಯಗಳನ್ನು ಬದಲಾಯಿಸಬೇಕಾಗಿದೆ. ಬೀದಿ ನಾಯಿಗಳು ಕಾಣುತ್ತವೆ ಎಂಬುದು ಇಲ್ಲಿ ಸಮಸ್ಯೆಯಲ್ಲ. ರಾಜಮೌಳಿಯಂತಹ ಪ್ರಖ್ಯಾತ ವ್ಯಕ್ತಿಗಳು ಇಂತಹ ಬಾಲಿಶ ಹೇಳಿಕೆಗಳನ್ನು ನೀಡುವ ಮೊದಲು ಯೋಚಿಸಬೇಕು’ ಎಂದು ಪ್ರಾಣಿ ಹಕ್ಕುಗಳ ರಕ್ಷಣಾ ಸಂಘದ ಅಧ್ಯಕ್ಷ ಸುರೇಶ್ ಎಂಬುವವರು ಹೇಳಿದ್ದಾರೆ.
ಇದನ್ನೂ ಓದಿ: ‘ಅವರನ್ನು ನೆಲದಲ್ಲಿ ಕೂರಿಸಿದ್ರು, ಬೀದಿ ನಾಯಿ ತೋರಿಸಿದ್ರು’; ನಿರ್ದೇಶಕ ರಾಜಮೌಳಿ ತೀವ್ರ ಬೇಸರ