ನಟಿ ಅನುಷ್ಕಾ ಶರ್ಮಾ(Anushka Sharma) ಅವರು ಬಾಂಬೆ ಹೈಕೋರ್ಟ್ನ ಮೊರೆ ಹೋಗಿದ್ದಾರೆ. 2012-13 ಹಾಗೂ 2013-14ನೇ ಸಾಲಿನ ತೆರಿಗೆ ಬಾಕಿ ಪಾವತಿಸುವಂತೆ ಅನುಷ್ಕಾ ಶರ್ಮಾ ಅವರಿಗೆ ಮಾರಾಟ ತೆರಿಗೆಯ ಉಪ ಆಯುಕ್ತರು ಸೂಚಿಸಿದ್ದರು. ಇದನ್ನು ಅನುಷ್ಕಾ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ತಪ್ಪಾಗಿ ತೆರಿಗೆ ವಿಧಿಸಲಾಗಿದ್ದು, ಈ ಸೂಚನೆಯನ್ನು ರದ್ದು ಮಾಡುವಂತೆ ಹೈಕೋರ್ಟ್ (Bombay High Court) ಬಳಿ ಅನುಷ್ಕಾ ಕೋರಿದ್ದಾರೆ. ಈ ಅರ್ಜಿಗೆ ಉತ್ತರಿಸುವಂತೆ ಮಾರಾಟ ತೆರಿಗೆ ಇಲಾಖೆಗೆ ಕೋರ್ಟ್ ಸೂಚನೆ ನೀಡಿದೆ.
2012-13, 2013-14, 2014-15, 2015-16ನೇ ಸಾಲಿನ ಆರ್ಥಿಕ ವರ್ಷದ ತೆರಿಗೆ ಸಂಬಂಧಿಸಿದಂತೆ ಅನುಷ್ಕಾ ಶರ್ಮಾ ಅವರು ನಾಲ್ಕು ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಅನುಷ್ಕಾ ಶರ್ಮಾ ಅವರ ತೆರಿಗೆ ಸಲಹೆಗಾರ ಶ್ರೀಕಾಂತ್ ವೇಲೇಕರ್ ಅವರು ನಟಿಯ ಪರವಾಗಿ ಈ ಮೊದಲು ಅರ್ಜಿ ಸಲ್ಲಿಕೆ ಮಾಡಿದ್ದರು. ಆಗ ಕೋರ್ಟ್ ಅನುಷ್ಕಾ ಶರ್ಮಾ ಅವರೇ ಅರ್ಜಿ ಸಲ್ಲಿಕೆ ಮಾಡಲಿ ಎಂದು ಸೂಚಿಸಿತ್ತು. ಈ ಕಾರಣಕ್ಕೆ ಅನುಷ್ಕಾ ಶರ್ಮಾ ಕೋರ್ಟ್ ಮೆಟ್ಟಿಲೇರಿದ್ದಾರೆ.
ಅನುಷ್ಕಾ ಶರ್ಮಾ ಅವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವಾರ್ಡ್ ಫಂಕ್ಷನ್ಗಳಲ್ಲಿ ಭಾಗಿ ಆಗಿದ್ದಾರೆ. ಆ್ಯಂಕರಿಂಗ್ ಮಾಡಿದ್ದಾರೆ. ಇದಕ್ಕೆ ಮಾರಾಟ ತೆರಿಗೆಯನ್ನು ತೆರಿಗೆ ಇಲಾಖೆ ವಿಧಿಸಿತ್ತು. ಇದನ್ನು ಅನುಷ್ಕಾ ಪ್ರಶ್ನೆ ಮಾಡಿದ್ದಾರೆ.
ಅನುಷ್ಕಾ ಅವರು ಸಿನಿಮಾಗಳಲ್ಲಿ ನಟಿಸಿದ್ದಕ್ಕೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಕ್ಕೆ ಪಡೆದ ಸಂಭಾವನೆಗೆ ಮಾರಾಟ ತೆರಿಗೆಯನ್ನು ವಿಧಿಸಲಾಗಿದೆ. ಅನುಷ್ಕಾ ಸಿನಿಮಾಗಳ ಮೇಲೆ ಕಾಪಿರೈಟ್ ಹೊಂದಿದ್ದಾರೆ. ಅವಾರ್ಡ್ ಫಂಕ್ಷನ್ಗಳ ಪ್ರಸಾರ ಹಕ್ಕನ್ನು ಅನುಷ್ಕಾ ಮಾರಾಟ ಮಾಡಿದ್ದಾರೆ ಎಂದು ತೆರಿಗೆ ಇಲಾಖೆ ಹೇಳಿತ್ತು. ಈ ಕಾರಣಕ್ಕೆ ಮಾರಾಟ ತೆರಿಗೆ ವಿಧಿಸಿತ್ತು. ಆದರೆ, ಅನುಷ್ಕಾ ಪರ ವಕೀಲರು ಇದನ್ನು ಅಲ್ಲಗಳೆದಿದ್ದಾರೆ. ‘ಮಾರಾಟ ಹಕ್ಕನ್ನು ಅನುಷ್ಕಾ ಹೊಂದಿಲ್ಲ. ಅದು ಆಯಾ ನಿರ್ಮಾಣ ಸಂಸ್ಥೆಯ ಬಳಿಯೇ ಇರುತ್ತದೆ’ ಎಂದು ವಾದಿಸಿದ್ದಾರೆ.
ಇದನ್ನೂ ಓದಿ: ಕೊಹ್ಲಿಗೆ 110 ಕೋಟಿ ರೂ. ಆದಾಯ ತಂದುಕೊಟ್ಟ ಕಂಪನಿ ವಿರುದ್ಧವೇ ಪತ್ನಿ ಅನುಷ್ಕಾ ಆರೋಪ..!
ಅನುಷ್ಕಾ ಶರ್ಮಾ ಅವರು ಇತ್ತೀಚೆಗೆ ಮಗಳು ವಮಿಕಾ ಬರ್ತ್ಡೇನ ಆಚರಣೆ ಮಾಡಿದ್ದಾರೆ. ವಮಿಕಾ ಜತೆಗಿನ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ, ಎಲ್ಲಿಯೂ ಮುಖ ರಿವೀಲ್ ಆಗಿರಲಿಲ್ಲ. ಮಗುವಿನ ಮುಖ ತೋರಿಸುವಂತೆ ಅನೇಕರು ಕೋರಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:12 am, Fri, 13 January 23