‘ಯಾರತ್ತ ಬೆರಳು ತೋರಿಸಲೂ ಇಷ್ಟವಿಲ್ಲ’; ಸಂಗೀತ ಕಾರ್ಯಕ್ರಮ ಅವ್ಯವಸ್ಥೆ ಬಗ್ಗೆ ಮೌನ ಮುರಿದ ಎಆರ್​ ರೆಹಮಾನ್

‘ಜನರು ಸುನಾಮಿ ರೀತಿ ಬಂದಿದ್ದರು. ಅವರು ನೀಡಿದ ಪ್ರೀತಿಯನ್ನು ನಿರ್ವಹಿಸಲು ನಮ್ಮ ಬಳಿ ಸಾಧ್ಯವಾಗಿಲ್ಲ. ಓರ್ವ ಕಂಪೋಸರ್ ಆಗಿ ಒಂದೊಳ್ಳೆ ಶೋ ಕೊಡೋದು ಮಾತ್ರ ನನ್ನ ಕೆಲಸ. ಉಳಿದ ವಿಚಾರಗಳನ್ನು ಆಯೋಜಕರು ನಿರ್ವಹಿಸಬಹುದು ಎಂದು ನಾನು ಭಾವಿಸಿದ್ದೆ. ಮಳೆ ಬರಬಾರದು ಎಂದು ನಾನು ಬೇಡಿಕೊಂಡಿದ್ದೆ. ಹೊರಗೆ ಏನಾಗುತ್ತಿತ್ತು ಅನ್ನೋದು ಗೊತ್ತಿರಲಿಲ್ಲ’ ಎಂದಿದ್ದಾರೆ ರೆಹಮಾನ್.

‘ಯಾರತ್ತ ಬೆರಳು ತೋರಿಸಲೂ ಇಷ್ಟವಿಲ್ಲ’; ಸಂಗೀತ ಕಾರ್ಯಕ್ರಮ ಅವ್ಯವಸ್ಥೆ ಬಗ್ಗೆ ಮೌನ ಮುರಿದ ಎಆರ್​ ರೆಹಮಾನ್
ಎಆರ್​ ರೆಹಮಾನ್

Updated on: Sep 12, 2023 | 7:08 AM

ಚೆನ್ನೈನ ಪಣಿಯೂರ್ ಸಮೀಪ ಇತ್ತೀಚೆಗೆ ಎಆರ್​ ರೆಹಮಾನ್​ (AR Rahman) ಆ್ಯಂಡ್ ಟೀಂ ಸಂಗೀತ ಕಾರ್ಯಕ್ರಮ ನೀಡಿತ್ತು. ಆದರೆ, ಇದನ್ನು ಸರಿಯಾಗಿ ನಿರ್ವಹಿಸದ ಕಾರಣ ಜನ ಜಾತ್ರೆ ಆಗಿತ್ತು. ಸರಿಯಾಗಿ ನಿಲ್ಲಲೂ ಜಾಗ ಇರಲಿಲ್ಲ. ಟಿಕೆಟ್ ಇದ್ದ ಹೊರತಾಗಿಯೂ ಅನೇಕರನ್ನು ಒಳಗೆ ಬಿಡಲಿಲ್ಲ. ಈ ಘಟನೆ ಕುರಿತು ಅನೇಕರು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದರು. ಹಲವರು ಎಆರ್​ ರೆಹಮಾನ್ ವಿರುದ್ಧ ಕಿಡಿಕಾರಿದ್ದರು. ಈ ವಿಚಾರದಲ್ಲಿ ರೆಹಮಾನ್ ಅವರು ಮೌನ ಮುರಿದಿದ್ದಾರೆ. ಕಾರ್ಯಕ್ರಮ ನೀಡೋದು ಮಾತ್ರ ನನ್ನ ಕೆಲಸ ಎಂದಿದ್ದಾರೆ.

‘ಜನರು ಸುನಾಮಿ ರೀತಿ ಬಂದಿದ್ದರು. ಅವರು ನೀಡಿದ ಪ್ರೀತಿಯನ್ನು ನಿರ್ವಹಿಸಲು ನಮ್ಮ ಬಳಿ ಸಾಧ್ಯವಾಗಿಲ್ಲ. ಓರ್ವ ಕಂಪೋಸರ್ ಆಗಿ ಒಂದೊಳ್ಳೆ ಶೋ ಕೊಡೋದು ಮಾತ್ರ ನನ್ನ ಕೆಲಸ. ಉಳಿದ ವಿಚಾರಗಳನ್ನು ಆಯೋಜಕರು ನಿರ್ವಹಿಸಬಹುದು ಎಂದು ನಾನು ಭಾವಿಸಿದ್ದೆ. ಮಳೆ ಬರಬಾರದು ಎಂದು ನಾನು ಬೇಡಿಕೊಂಡಿದ್ದೆ. ಹೊರಗೆ ಏನಾಗುತ್ತಿತ್ತು ಅನ್ನೋದು ಗೊತ್ತಿರಲಿಲ್ಲ. ನಮ್ಮ ನಿರೀಕ್ಷೆಗೂ ಮೀರಿ ಜನ ಬಂದಿದ್ದರು’ ಎಂದಿದ್ದಾರೆ ರೆಹಮಾನ್.

‘ನಡೆದ ಆ ಘಟನೆಯಿಂದ ನಾವು ವಿಚಲಿತಗೊಂಡಿದ್ದೇವೆ. ಮಹಿಳೆಯರು ಮತ್ತು ಮಕ್ಕಳು ಇದ್ದಿದ್ದರಿಂದ ಸುರಕ್ಷತೆಯು ಪ್ರಾಥಮಿಕ ಆದ್ಯತೆ ಆಗಿತ್ತು. ನಾನು ಯಾರತ್ತಲೂ ಬೆರಳು ತೋರಿಸಲು ಬಯಸುವುದಿಲ್ಲ.  ನಗರದ ರೀತಿಯೇ ಸಂಗೀತ ಮತ್ತು ಕಲೆಯನ್ನು ಪ್ರೋತ್ಸಾಹಿಸುವವರ ಸಂಖ್ಯೆಯೂ ವಿಸ್ತರಿಸುತ್ತಿದೆ ಎಂದು ನಾವು ಅರಿತುಕೊಳ್ಳಬೇಕು’ ಎಂದಿದ್ದಾರೆ ರೆಹಮಾನ್.


ಇದನ್ನೂ ಓದಿ: ಚೆನ್ನೈ ಸಂಗೀತ ಕಾರ್ಯಕ್ರಮದಲ್ಲಿ ಅವ್ಯವಸ್ಥೆ: ಅಭಿಮಾನಿಗಳಿಗೆ ಪ್ರತಿಕ್ರಿಯಿಸಿದ ಎಆರ್​​ ರೆಹಮಾನ್

 ಏನಿದು ಘಟನೆ?

ಮರಕ್ಕುಮಾ ನೆಂಜಮ್​ನಲ್ಲಿ ಎಆರ್​ ರೆಹಮಾನ್ ಮತ್ತು ತಂಡದವರಿಂದ ಭಾನುವಾರ (ಸೆಪ್ಟೆಂಬರ್ 10) ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ದುಡ್ಡಿನ ಆಸೆಗಾಗಿ ಹೆಚ್ಚಿನ ಟಿಕೆಟ್​ ಮಾರಾಟ ಮಾಡಿ ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ಬಂದೊದಗಿತ್ತು. ಟಿಕೆಟ್ ಪಡೆದ ಬಹುತೇಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಹೀಗಾಗಿ, ಒಳಗೆ ನಿಲ್ಲಲೂ ಸರಿಯಾದ ಜಾಗ ಇರಲಿಲ್ಲ. ಟಿಕೆಟ್ ಇದ್ದವರನ್ನೂ ಒಳಗೆ ಬಿಡಲಿಲ್ಲ. ಈ ಬಗ್ಗೆ ಅನೇಕರು ಟ್ವೀಟ್ ಮಾಡಿ ಬೇಸರ ಹೊರಹಾಕಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ