ಆಸ್ಕರ್ (Oscar) ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ (AR Rahaman) ಪುತ್ರ ಎಆರ್ ಅಮೀನ್ (AR Ameen) ಭೀಕರ ಅಪಘಾತವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅಪಘಾತ ಹೇಗೆ ಸಂಭವಿಸಿತು ಎಂಬುದನ್ನು ಚಿತ್ರ ಸಮೇತ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದು, ಆ ಶಾಕ್ನಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
”ದೇವರು, ನನ್ನ ಪೋಷಕರು, ಕುಟುಂಬ, ಹಿತೈಷಿಗಳು ಹಾಗೂ ನನ್ನ ಆಧ್ಯಾತ್ಮಿಕ ಗುರುಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಅವರ ಹಾರೈಕೆಗಳಿಂದಲೇ ನಾನು ಇಂದು ಜೀವಂತವಾಗಿದ್ದೇನೆ. ಮೂರು ದಿನಗಳ ಹಿಂದೆ ಹಾಡೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ. ನನ್ನ ತಂಡ ವಹಿಸಿದ್ದ ಸುರಕ್ಷತಾ ಕ್ರಮಗಳ ಮೇಲೆ ನಂಬಿಕೆ ಇಟ್ಟು ವೇದಿಕೆ ಏರಿ ಕ್ಯಾಮೆರಾ ನೋಡುತ್ತಾ ನಾನು ನನ್ನ ಪರ್ಫಾಮೆನ್ಸ್ ಕಡೆ ಗಮನ ವಹಿಸಿದ್ದೆ. ಆಗ ಕ್ರೇನ್ಗೆ ಕಟ್ಟಲಾಗಿದ್ದ ರಿಗ್, ಜೂಮರ್ ಇತ್ಯಾದಿಗಳು ಕೆಳಗೆ ಬಿದ್ದವು. ಕೆಲವು ಇಂಚು ಹಿಂದೆ-ಮುಂದೆ ಅಥವಾ ಕೆಲವು ಸೆಕೆಂಡ್ ತಡವಾಗಿದ್ದರೂ ಆ ಕಬ್ಬಿಣದ ರಿಗ್, ಗಾಜಿನ ಜೂಮರ್ ನೇರವಾಗಿ ನನ್ನ ತಲೆಯ ಮೇಲೆ ಬೀಳುತ್ತಿತ್ತು. ಈ ಅಪಘಾತದ ಆಘಾತದಿಂದ ನಾನು ಹಾಗೂ ನನ್ನ ತಂಡ ಶಾಕ್ಗೆ ಒಳಗಾಗಿದ್ದೇವೆ. ಅದರಿಂದ ಹೊರಬರಲು ನಮಗೆ ಆಗುತ್ತಿಲ್ಲ ಎಂದು ಅಮೀನ್ ಬರೆದುಕೊಂಡಿದ್ದಾರೆ.
ಘಟನೆಯ ಕೆಲವು ಚಿತ್ರಗಳನ್ನು ಅಮೀನ್ ಹಂಚಿಕೊಂಡಿದ್ದು, ಕ್ರೇನ್ಗೆ ಕಟ್ಟಲಾಗಿದ್ದ ಕಬ್ಬಿಣದ ಸ್ಟ್ಯಾಂಡ್ ವೇದಿಕೆ ಮೇಲೆ ಬಿದ್ದಿದೆ. ಅದನ್ನು ಹಿಡಿದುಕೊಂಡಿದ್ದ ಕ್ರೇನ್ನ ಭಾಗವೂ ವೇದಿಕೆಗೆ ಬಿದ್ದಿದೆ. ಕ್ರೇನ್ಗೆ ಕಟ್ಟಲಾಗಿದ್ದ ಗಾಜಿನ ಜೂಮರ್ಗಳು ಸಹ ವೇದಿಕೆ ಮೇಲೆ ಬಿದ್ದು ಪುಡಿ-ಪುಡಿ ಆಗಿವೆ. ಘಟನೆಗೆ ಮುಂಚಿನ ಹಾಗೂ ಘಟನೆಯ ಬಳಿಕದ ಚಿತ್ರಗಳನ್ನು ಅಮೀನ್ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಅಮೀನ್ ಹಾಡುಗಾರರಾಗಿದ್ದು ಈಗಾಗಲೇ ಮೂರು ಆಲ್ಬಂಗಳನ್ನು ಬಿಡುಗಡೆ ಮಾಡಿದ್ದಾರೆ ಹಾಗೂ ತಂದೆ ಎ.ಆರ್.ರೆಹಮಾನ್ ಸಂಗೀತ ನೀಡಿರುವ ಒಂದು ಇಂಗ್ಲೀಷ್ ಸಿನಿಮಾ ಸೇರಿದಂತೆ ತಮಿಳು, ಹಿಂದಿ ಸಿನಿಮಾಗಳಿಗೆ ಹಾಡು ಹಾಡಿದ್ದಾರೆ. ಬೇರೆ ಸಂಗೀತ ನಿರ್ದೇಶಕರ ಹಾಡುಗಳಿಗೂ ದನಿ ನೀಡಿದ್ದಾರೆ. ಲೈವ್ ಕಾನ್ಸರ್ಟ್ಗಳನ್ನು ಸಹ ನೀಡುತ್ತಾರೆ. ಇದೀಗ ತಮ್ಮದೇ ಹೊಸ ಆಲ್ಬಂಗಾಗಿ ಚಿತ್ರೀಕರಣ ಮಾಡುವಾಗ ಈ ಅವಘಡ ಸಂಭವಿಸಿದೆ.
ಅಮೀನ್ರ ಪೋಸ್ಟ್ಗೆ ಸ್ಪಂದಿಸಿರುವ ಕೆಲವು ಸೆಲೆಬ್ರಿಟಿಗಳು ದೇವರಿಗೆ ಧನ್ಯವಾದ ಹೇಳಿದ್ದಾರೆ. ಹೆಚ್ಚು ಜಾಗರೂಕರಾಗಿರುವಂತೆ ಸಲಹೆ ನೀಡಿದ್ದಾರೆ.
Published On - 8:25 pm, Sun, 5 March 23