
ಸ್ಯಾಂಡಲ್‌ವುಡ್‌ನಲ್ಲಿ ‘ಅಯೋಗ್ಯ’ ಸಿನಿಮಾ (Ayogya 2) ಭರ್ಜರಿ ಯಶಸ್ಸು ಕಂಡಿತ್ತು. ಇದರ ಸೀಕ್ವೆಲ್ ‘ಅಯೋಗ್ಯ 2’ ಆಗಸ್ಟ್ 7ರಂದು ತೆರೆಗೆ ಬರಲು ಸಜ್ಜಾಗಿದೆ. ಮೊದಲ ಭಾಗದ ಯಶಸ್ಸಿನ ಬೆನ್ನಲ್ಲೇ ಎರಡನೇ ಭಾಗದ ಮೇಲೂ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಇದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರದ ‘ಮುದ್ದು ಮುದ್ದು ಪುಟ್ಟಲಕ್ಷ್ಮಿ’ ವಿಡಿಯೋ ಸಾಂಗ್ ನೋಡಿದ ಪ್ರೇಕ್ಷಕರು ಮಾತ್ರ ಸದ್ಯಕ್ಕೆ ತಲೆ ಕೆಡಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ನಟಿಸಿದ್ದಾರೆ. ಮಹೇಶ್ ಇದನ್ನು ನಿರ್ದೇಶನ ಮಾಡಿದ್ದಾರೆ.
‘ಮುದ್ದು ಮುದ್ದು ಪುಟ್ಟಲಕ್ಷ್ಮಿ’ ಹಾಡು ಬಿಡುಗಡೆಯಾದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಆದರೆ, ಅದರಲ್ಲಿರುವ ನೃತ್ಯ ಸಂಯೋಜನೆ ಮಾತ್ರ ಸಿನಿಪ್ರಿಯರಿಗೆ ಅಷ್ಟಾಗಿ ಇಷ್ಟವಾದಂತೆ ಕಾಣುತ್ತಿಲ್ಲ. ಹಾಡಿನಲ್ಲಿರುವ ಡ್ಯಾನ್ಸ್ ಸ್ಟೆಪ್ಸ್‌ಗಳನ್ನು ನೋಡಿದ ಕೆಲವರು ಅಕ್ಷರಶಃ ಶಾಕ್ ಆಗಿದ್ದಾರೆ.
‘ಇದೇನಿದು, 90ರ ದಶಕದ ಸ್ಟೆಪ್ಸ್‌ಗಳನ್ನೇ ಈಗಲೂ ಹಾಕಿಸುತ್ತಿದ್ದಾರಲ್ಲಾ?’ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇಂದಿನ ಟ್ರೆಂಡ್‌ಗೆ ತಕ್ಕಂತೆ ಹೊಸತನದ ಸ್ಟೆಪ್ಸ್ ನಿರೀಕ್ಷಿಸಿದ್ದ ಪ್ರೇಕ್ಷಕರಿಗೆ ಈ ಹಳೇ ಶೈಲಿಯ ನೃತ್ಯ ನಿರಾಸೆ ಮೂಡಿಸಿದೆ.
ಇದನ್ನೂ ಓದಿ: ‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
ಹಾಡಿನ ಟ್ಯೂನ್ ಚೆನ್ನಾಗಿದ್ದರೂ, ಡ್ಯಾನ್ಸ್ ಮೂವ್ಸ್‌ಗಳಿಂದಾಗಿ ಈ ಹಾಡು ಈಗ ಚರ್ಚೆಗೆ ಗ್ರಾಸವಾಗಿದೆ. ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ‘ಹಾಡು ಕೇಳಲು ತುಂಬಾ ಮಧುರವಾಗಿದೆ, ಆದರೆ ವಿಶುವಲ್ ಆಗಿ ಇನ್ನೂ ಚೆನ್ನಾಗಿ ಮಾಡಬಹುದಿತ್ತು’ ಎಂಬುದು ಕೆಲವರ ವಾದ. ‘ಅಯೋಗ್ಯ’ ಮೊದಲ ಭಾಗದ ‘ಏನಮ್ಮಿ ಏನಮ್ಮಿ’ ಹಾಡಿನ ಕ್ರೇಜ್ ನೆನಪಿಸಿಕೊಂಡ ಅಭಿಮಾನಿಗಳು, ಈ ಹಾಡಿನ ಡ್ಯಾನ್ಸ್ ನೋಡಿ ಕೊಂಚ ಬೇಸರ ವ್ಯಕ್ತಪಡಿಸಿದ್ದಾರೆ. ಸಿನಿಮಾ ರಿಲೀಸ್ ಆದ ಮೇಲೆ ಈ ಸಾಂಗ್ ಬೆಳ್ಳಿಪರದೆ ಮೇಲೆ ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.