ಒಂದು ಸಿನಿಮಾದ ಹಾಡು ಹಿಟ್ ಆದರೆ ಚಿತ್ರಕ್ಕೆ ಭರ್ಜರಿ ಮೈಲೇಜ್ ಸಿಗುತ್ತದೆ. ಆದರೆ, ಎಲ್ಲಾ ಸಂದರ್ಭದಲ್ಲಿ ಈ ತಂತ್ರ ವರ್ಕ್ ಆಗೋದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ವಿಕ್ಕಿ ಕೌಶಲ್ ನಟನೆಯ ‘ಬ್ಯಾಡ್ ನ್ಯೂಸ್’. ಈ ಸಿನಿಮಾದ ‘ತೋಬಾ ತೋಬಾ..’ ಹಾಡು ಭರ್ಜರಿ ಹಿಟ್ ಆಯಿತು. ಇನ್ಸ್ಟಾಗ್ರಾಮ್ ಓಪನ್ ಮಾಡಿದರೆ ಇದೇ ಹಾಡು ಪ್ರತಿಧ್ವನಿಸುತ್ತಿತ್ತು. ಆದರೆ, ಚಿತ್ರಕ್ಕೆ ಮಾತ್ರ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನ ಈ ಚಿತ್ರ ಕಳಪೆ ಕಲೆಕ್ಷನ್ ಮಾಡಿದೆ.
‘ತೋಬಾ ತೋಬಾ..’ ಹಾಡಿನಲ್ಲಿ ವಿಕ್ಕಿ ಕೌಶಲ್ ಅವರು ಭರ್ಜರಿ ಆಗಿ ಸ್ಟೆಪ್ ಹಾಕಿದ್ದರು. ಈ ಸ್ಟೆಪ್ ಸಾಕಷ್ಟು ಗಮನ ಸೆಳೆಯಿತು. ಇದನ್ನು ಅನೇಕರು ಕಾಪಿ ಮಾಡೋಕೆ ಪ್ರಯತ್ನ ಮಾಡಿದ್ದರು. ಹೀಗಾಗಿ ಸಿನಿಮಾ ಬಗ್ಗೆ ಕ್ರೇಜ್ ಸೃಷ್ಟಿ ಆಗಿತ್ತು. ಆದರೆ, ಏಕೋ ಜನರು ಅಷ್ಟಾಗಿ ಸಿನಿಮಾ ವೀಕ್ಷಣೆ ಮಾಡಿಲ್ಲ. ಹೀಗಾಗಿ ಈ ಚಿತ್ರ ಮೊದಲ ದಿನ ಕೇವಲ 8.50 ಕೋಟಿ ರೂಪಾಯಿ ಅಷ್ಟೇ ಗಳಿಕೆ ಮಾಡೋಕೆ ಸಾಧ್ಯವಾಗಿದೆ.
ಈ ಮೊದಲು ರಿಲೀಸ್ ಆಗಿದ್ದ ‘ಗುಡ್ ನ್ಯೂಸ್’ ಸಿನಿಮಾದ ರೀತಿಯ ಕಥೆಯ ಎಳೆಯನ್ನೇ ಇಟ್ಟುಕೊಂಡು ‘ಬ್ಯಾಡ್ ನ್ಯೂಸ್’ ಮಾಡಲಾಗಿದೆ. ಅವಳಿ ಮಕ್ಕಳಿಗೆ ಇಬ್ಬರು ತಂದೆಯರು ಎಂಬರ್ಥದಲ್ಲಿ ಸಿನಿಮಾ ಮೂಡಿ ಬಂದಿದೆ. ಅನೇಕ ಕಡೆಗಳಲ್ಲಿ ಗೊಂದಲ ಸೃಷ್ಟಿ ಆಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯ ಹೊರ ಹಾಕಿದ್ದಾರೆ. ಈ ಎಲ್ಲಾ ಕಾರಣದಿಂದ ಸಿನಿಮಾ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ.
ಇದನ್ನೂ ಓದಿ: ಒಟಿಟಿಯಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ನೋಡಬೇಕು ಎಂದುಕೊಂಡವರಿಗೆ ಬ್ಯಾಡ್ ನ್ಯೂಸ್
ವಾರಾಂತ್ಯದಲ್ಲಿ ಸಹಜವಾಗಿಯೇ ಸಿನಿಮಾ ವೀಕ್ಷಣೆಗೆ ಜನರು ತೆರಳುತ್ತಾರೆ. ಆಗ ಚಿತ್ರ ಒಂದು ಹಂತದಲ್ಲಿ ಗಳಿಕೆ ಮಾಡಬಹುದು. ಆದರೆ ಸೋಮವಾರದಿಂದ ಸಿನಿಮಾಗೆ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು, ಟಿಕೆಟ್ ಬುಕಿಂಗ್ ಆ್ಯಪ್ ‘ಬುಕ್ ಮೈ ಶೋ’ನಲ್ಲಿ ಚಿತ್ರಕ್ಕೆ ಕೇವಲ 6.1 ರೇಟಿಂಗ್ ಸಿಕ್ಕಿದೆ. ಇದು ಚಿತ್ರದ ಆತಂಕವನ್ನು ಹೆಚ್ಚಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.