ಒಟಿಟಿಯಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ನೋಡಬೇಕು ಎಂದುಕೊಂಡವರಿಗೆ ಬ್ಯಾಡ್ ನ್ಯೂಸ್
ಅದ್ದೂರಿ ಬಜೆಟ್ನಲ್ಲಿ ನಿರ್ಮಾಣ ಆಗಿರುವ ‘ಕಲ್ಕಿ 2898 ಎಡಿ’ ಸಿನಿಮಾಗೆ ತುಂಬಾ ಚೆನ್ನಾಗಿ ಕಲೆಕ್ಷನ್ ಆಗುತ್ತಿದೆ. ಈ ಸಿನಿಮಾ ಯಾವಾಗ ಒಟಿಟಿಗೆ ಬರಲಿದೆ ಎಂದು ಕೆಲವರು ಕಾಯುತ್ತಿದ್ದಾರೆ. ಅಂಥವರಿಗೆ ಒಂದು ಕಹಿ ಸುದ್ದಿ ಇದೆ. ಈ ಚಿತ್ರದ ಒಟಿಟಿ ಪ್ರಸಾರ ಹಕ್ಕುಗಳು ಈ ಮೊದಲೇ ಮಾರಾಟ ಆಗಿವೆಯಾದರೂ ಸದ್ಯಕ್ಕೆ ಒಟಿಟಿಯಲ್ಲಿ ಪ್ರಸಾರ ಮಾಡಬಾರದು ಎಂದು ಚಿತ್ರತಂಡ ನಿರ್ಧರಿಸಿದೆ. ಅದಕ್ಕೆ ಕಾರಣ ಕೂಡ ಇದೆ.
ಎಲ್ಲ ಚಿತ್ರಮಂದಿರಗಳಲ್ಲೂ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಈ ಸಿನಿಮಾವನ್ನು ಪ್ರಭಾಸ್ (Prabhas) ಅಭಿಮಾನಿಗಳು ಸಖತ್ ಮೆಚ್ಚಿಕೊಂಡಿದ್ದಾರೆ. ನಾಗ್ ಅಶ್ವಿನ್ ಅವರ ನಿರ್ದೇಶನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮುಂತಾದವರ ಪಾತ್ರಗಳನ್ನು ನೋಡಿ ಸಿನಿಪ್ರಿಯರು ಫುಲ್ ಮಾರ್ಕ್ಸ್ ನೀಡುತ್ತಿದ್ದಾರೆ. ಹಾಗಿದ್ದರೂ ಕೂಡ ಒಟಿಟಿಗೆ (OTT) ಬಂದ ನಂತರವೇ ಈ ಸಿನಿಮಾವನ್ನು ನೋಡ್ತೀವಿ ಅಂತ ನಿರ್ಧಾರ ಮಾಡಿರುವ ಕೆಲವು ಮಂದಿ ಇದ್ದಾರೆ. ಅಂಥವರಿಗೆ ಒಂದು ಬ್ಯಾಡ್ ನ್ಯೂಸ್ ಎದುರಾಗಿದೆ.
ಕಳೆದ ಎರಡು-ಮೂರು ವರ್ಷಗಳಿಂದ ಒಟಿಟಿ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಬದಲು ಒಟಿಟಿಯಲ್ಲೇ ವೀಕ್ಷಿಸಲು ಅನೇಕರು ಬಯಸುತ್ತಾರೆ. ಚಿತ್ರಮಂದಿರದಲ್ಲಿ ಯಾವುದೇ ಹೊಸ ಸಿನಿಮಾ ಬಿಡುಗಡೆ ಆದರೂ, ‘ಇನ್ನೇನು ಕೆಲವೇ ದಿನಗಳಲ್ಲಿ ಒಟಿಟಿಗೆ ಬಂದಮೇಲೆ ನೋಡೋಣ ಬಿಡು’ ಎನ್ನುವವರು ಸಾಕಷ್ಟು ಮಂದಿದ್ದಾರೆ. ‘ಕಲ್ಕಿ 2898 ಎಡಿ’ ಸಿನಿಮಾ ಸಹ ಶೀಘ್ರದಲ್ಲೇ ಒಟಿಟಿಗೆ ಬರಲಿದೆ ಎಂದು ಅನೇಕರು ಊಹಿಸಿದ್ದರು. ಆದರೆ ಆ ಊಹೆ ಸುಳ್ಳಾಗಿದೆ.
ಈಗಾಗಲೇ ‘ಕಲ್ಕಿ 2898 ಎಡಿ’ ಸಿನಿಮಾದ ತೆಲುಗು, ತಮಿಳು, ಮಲಯಾಳಂ, ಕನ್ನಡ ವರ್ಷನ್ ಒಟಿಟಿ ಹಕ್ಕುಗಳನ್ನು ‘ಅಮೇಜಾನ್ ಪ್ರೈಂ ವಿಡಿಯೋ’ ಖರೀದಿಸಿದೆ. ಹಿಂದಿ ವರ್ಷನ್ ಹಕ್ಕುಗಳು ನೆಟ್ಫ್ಲಿಕ್ಸ್ ಪಾಲಾಗಿವೆ. ಈ ಮೊದಲು ಮಾತುಕಥೆ ಆದಂತೆ ಜುಲೈ ತಿಂಗಳ ಅಂತ್ಯಕ್ಕೆ ಈ ಸಿನಿಮಾ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಬೇಕಿತ್ತು. ಆದರೆ ಈಗ ನಿರ್ಮಾಪಕರು ಮನಸ್ಸು ಬದಲಾಯಿಸಿದ್ದಾರೆ.
ಚಿತ್ರಮಂದಿರದಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಜನರು ಮುಗಿಬಿದ್ದು ಈ ಸಿನಿಮಾ ನೋಡುತ್ತಿದ್ದಾರೆ. ವೀಕೆಂಡ್ನಲ್ಲಿ ಭರ್ಜರಿ ಕಲೆಕ್ಷನ್ ಆಗಿದೆ. ಇನ್ನೂ ಹಲವು ದಿನಗಳ ಕಾಲ ಈ ಸಿನಿಮಾಗೆ ಉತ್ತಮವಾಗಿ ಕಮಾಯಿ ಆಗಲಿದೆ. ಹಾಗಾಗಿ ಒಟಿಟಿಯಲ್ಲಿ ಸಿನಿಮಾದ ಬಿಡುಗಡೆಯನ್ನು ಮುಂದೂಡಲು ಚಿತ್ರತಂಡ ನಿರ್ಧರಿಸಿದೆ. ಈಗಿನ ನಿರ್ಧಾರದ ಪ್ರಕಾರ, ಸೆಪ್ಟೆಂಬರ್ 2ನೇ ವಾರದ ನಂತರವಷ್ಟೇ ಒಟಿಟಿಯಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಲಭ್ಯವಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಚಿತ್ರದ ಪಾರ್ಟ್ 2 ಶೂಟಿಂಗ್ ಶೇ.60ರಷ್ಟು ಪೂರ್ಣ; ರಿಲೀಸ್ ಯಾವಾಗ?
‘ಕಲ್ಕಿ 2898 ಎಡಿ’ ಸಿನಿಮಾ ಬೃಹತ್ ಬಜೆಟ್ನಲ್ಲಿ ನಿರ್ಮಾಣ ಆಗಿದೆ. ಈ ಸಿನಿಮಾ ಮೇಲೆ ಅಂದಾಜು 600 ಕೋಟಿ ರೂಪಾಯಿ ಸುರಿಯಲಾಗಿದೆ. ಲಾಭ ಆಗಬೇಕು ಎಂದರೆ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಆಗಲೇಬೇಕು. ಸದ್ಯಕ್ಕಂತೂ ಚಿತ್ರಮಂದಿರದಲ್ಲಿ ಈ ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಆಗುತ್ತಿರುವುದರಿಂದ ಒಟಿಟಿ ಬಿಡುಗಡೆಯ ಆಲೋಚನೆಯನ್ನು ನಿರ್ಮಾಪಕರು ಮುಂದಕ್ಕೆ ಹಾಕಿದ್ದಾರೆ ಎಂದು ವರದಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.