
ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಟೀಸರ್ ತುಂಬೆಲ್ಲ ಯಶ್ ಆವರಿಸಿಕೊಂಡಿದ್ದಾರೆ. ಯಶ್ ಅವರ ಎರಡು ಲುಕ್ಗಳ ಸಖತ್ ವೈರಲ್ ಆಗಿವೆ. ‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ಜೊತೆಗೆ ಹಲವು ನಟಿಯರು ನಟಿಸಿದ್ದು, ಟೀಸರ್ ಬಿಡುಗಡೆಗೆ ಮುಂಚೆಯೇ ನಟಿಯರ ಲುಕ್ಗಳನ್ನು ಅವರ ಪಾತ್ರದ ಕಿರು ಪರಿಚಯವನ್ನು ಮಾಡಿಕೊಡಲಾಗಿತ್ತು. ಇದೀಗ ಸಿನಿಮಾದ ಇತರೆ ಕೆಲವು ಪ್ರಮುಖ ಪಾತ್ರಗಳ ಕಿರು ಪರಿಚಯ ಮಾಡಿಕೊಡುತ್ತಿದೆ ಚಿತ್ರತಂಡ. ಇದೀಗ ‘ಬೀರ’ ಹೆಸರಿನ ಪಾತ್ರದ ಲುಕ್ ಬಿಡುಗಡೆ ಮಾಡಲಾಗಿದೆ.
ಕನ್ನಡ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಪೋಷಕ ನಟ ಎನಿಸಿಕೊಂಡಿರುವ ಬಾಲಾಜಿ ಮನೋಹರ್ ಅವರ ಪಾತ್ರದ ಪೋಸ್ಟರ್ ಅನ್ನು ಇದೀಗ ಯಶ್ ಸೇರಿದಂತೆ ಚಿತ್ರತಂಡ ಹಂಚಿಕೊಂಡಿದೆ. ಅದ್ಭುತ ನಟರಾಗಿರುವ ಬಾಲಾಜಿ ಮನೋಹರ್ ಅವರು ‘ಬೀರ’ ಹೆಸರಿನ ಪವರ್ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಬಿಡುಗಡೆ ಆಗಿರುವ ಅವರ ಲುಕ್ ಸಖತ್ ಆಗಿದೆ. ಹಳದಿ ಬಣ್ಣದ ಟಿಂಟ್ ಹೊಂದಿರುವ ದೊಡ್ಡ ಗ್ಲಾಸು ಧರಿಸಿ, ಬಾಯಲ್ಲಿ ಸಿಗಾರ್ ಇರಿಸಿಕೊಂಡು ರಗಡ್ ಆಗಿ ಕಾಣಿಸಿಕೊಂಡಿದ್ದಾರೆ ಬಾಲಾಜಿ. ಟೀಸರ್ನಲ್ಲಿ ಕಾಣುತ್ತಿರುವ ರಾಯಲ್ ಸರ್ಕಸ್ ಕಂಪೆನಿಯ ಮಾಲೀಕ ಈ ಬೀರ ಇರಬಹುದೇ ಎಂಬ ಅನುಮಾನ ಮೂಡುವಂತಿದೆ ಅವರ ಲುಕ್.
ಬಾಲಾಜಿ ಮನೋಹರ್ ಅವರು ಹಲವಾರು ಕನ್ನಡದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಇನ್ನೂ ಕೆಲ ಭಾಷೆಗಳ ಸಿನಿಮಾಗಳಲ್ಲಿಯೂ ನಟಿಸಿದ್ದು, ತಮ್ಮ ಅದ್ಭುತ ನಟನೆಯಿಂದ ಸಿನಿ ಪ್ರೇಮಿಗಳ ಮೆಚ್ಚುಗೆ ಗಳಿಸಿದ್ದಾರೆ. ‘ಲೂಸಿಯಾ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನೆನಪುಳಿಯುವ ಪಾತ್ರಗಳಲ್ಲಿ ಅವರು ನಟಿಸಿದ್ದಾರೆ. ಇದೀಗ ಅವರು ‘ಟಾಕ್ಸಿಕ್’ ಸಿನಿಮಾನಲ್ಲಿ ಪವರ್ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಾಜಿ ಮನೋಹರ್ ಮಾತ್ರವೇ ಅಲ್ಲದೆ ಅಕ್ಷಯ್ ಒಬೆರಾಯ್, ಸುದೇವ್ ನಾಯರ್ ಅವರುಗಳು ಸಹ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿದ್ದು, ಅವರ ಪಾತ್ರದ ಪೋಸ್ಟರ್ಗಳನ್ನು ಸಹ ಬಿಡುಗಡೆ ಮಾಡಲಾಗಿದೆ.
ಯಶ್ ಅವರು ರಾಯ ಹೆಸರಿನ ಪಾತ್ರದ ಜೊತೆಗೆ ‘ಟಿಕೆಟ್’ ಹೆಸರಿನ ಪಾತ್ರದಲ್ಲಿಯೂ ನಟಿಸಿದ್ದು, ಎರಡೂ ಪಾತ್ರಗಳ ಲುಕ್ ಈಗಾಗಲೇ ರಿವೀಲ್ ಆಗಿದೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ಸಹ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾ ನಿರ್ದೇಶನ ಮಾಡಿರುವುದು ಗೀತು ಮೋಹನ್ದಾಸ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ