ಊಟಕ್ಕೋಸ್ಕರ ಏನು ಮಾಡೋಕೂ ರೆಡಿ ಇದೀರಾ?; ಗಗನ್‌ಗೆ ಸುದೀಪ್ ಛೀಮಾರಿ
ಬಿಗ್ ಬಾಸ್ ಮನೆಯ ಗ್ರೋಸರಿ ಟಾಸ್ಕ್ ವೇಳೆ ಗಗನ್‌ಗೆ ಸೌಂದರ್ಯಾ 'ಮೋಸಗಾರ' ಎಂದಾಗ ಸುಮ್ಮನಿದ್ದದ್ದನ್ನು ಕಿಚ್ಚ ಸುದೀಪ್ ತೀವ್ರವಾಗಿ ಪ್ರಶ್ನಿಸಿದ್ದಾರೆ. ಸೆಲ್ಫ್ ರೆಸ್ಪೆಕ್ಟ್ ಬಗ್ಗೆ ದೊಡ್ಡದಾಗಿ ಮಾತನಾಡುವ ಗಗನ್ ಊಟಕ್ಕಾಗಿ ಇಷ್ಟೊಂದು ಕೆಳಹಂತಕ್ಕೆ ಇಳಿಯುವುದು ಸರಿಯಲ್ಲ ಎಂದು ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಖ್ಯಾಂಶಗಳು
- ಗಗನ್ ದ್ವಂದ್ವ ನಿಲುವಿಗೆ ಸುದೀಪ್ ಚಾಟಿ
- ಸೆಲ್ಫ್ ರೆಸ್ಪೆಕ್ಟ್ ಮಾತುಗಳು ಏನಾಯ್ತು?
- ಊಟಕ್ಕೋಸ್ಕರ ಎಲ್ಲವೂ ಮರೆತ ಸ್ಪರ್ಧಿಗಳು
‘ಬಿಗ್ ಬಾಸ್’ ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ಆಟದ ಶೈಲಿಯನ್ನು ಕಟುವಾಗಿ ಪ್ರಶ್ನಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಗಗನ್ ಅವರ ದ್ವಂದ್ವ ನಿಲುವನ್ನು ಪ್ರಸ್ತಾಪಿಸಿರುವುದು ಮನೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಾರದ ಪಂಚಾಯ್ತಿಯಲ್ಲಿ ಸುದೀಪ್ ಅವರು ಗಗನ್ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವಾರದ ಗ್ರೋಸರಿ ಟಾಸ್ಕ್‌ನಲ್ಲಿ ಸ್ಪರ್ಧಿಗಳಿಗಾಗಿ ಕೆಲವು ನಿರ್ದಿಷ್ಟ ಹ್ಯಾಶ್ಟ್ಯಾಗ್ಗಳನ್ನು ನೀಡಲಾಗಿತ್ತು. ಆಕ್ಟಿವಿಟಿ ರೂಮ್‌ನಲ್ಲಿದ್ದ ಕ್ಯಾಪ್ಟನ್ ಸೌಂದರ್ಯಾ ಶೆಟ್ಟಿ ಅವರು ಈ ಹ್ಯಾಶ್‌ಟ್ಯಾಗ್ ಅನ್ನು ಯಾರಿಗೆ ತಕ್ಕದ್ದು ಎಂದು ನಿರ್ಧರಿಸಿ ಕೊಡಬೇಕಿತ್ತು. ಅದರಂತೆ ಮನೆಯ ಹೊರಗಿದ್ದ ಇತರ ಸ್ಪರ್ಧಿಗಳು ಅದನ್ನು ಸರಿಯಾಗಿ ಊಹಿಸಬೇಕಾದ ಸವಾಲು ಇತ್ತು. ಈ ವೇಳೆ ಸೌಂದರ್ಯಾ ಅವರು ಗಗನ್ ಅವರಿಗೆ ‘ಮೋಸಗಾರ’ ಎಂಬ ಹ್ಯಾಶ್‌ಟ್ಯಾಗ್ ನೀಡಿದ್ದು, ಹೊರಗಿನ ಸ್ಪರ್ಧಿಗಳು ಕೂಡ ಗಗನ್ ಹೆಸರನ್ನೇ ಊಹಿಸಿದ್ದರು.
ಆದರೆ ಈ ಇಡೀ ಪ್ರಕ್ರಿಯೆಯಲ್ಲಿ ಗಗನ್ ತೋರಿದ ನಿರ್ಲಿಪ್ತತೆ ಸುದೀಪ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. ‘ಹಿಂದೆ ಒಮ್ಮೆ ‘ಕುನ್ನಿ’ ಎಂಬ ಪದ ಬಳಸಿದಾಗ ‘ನಾನು ಟಾಸ್ಕ್ ಬಿಡ್ತೀನಿ, ಆದರೆ ನನ್ನ ಸೆಲ್ಫ್ ರೆಸ್ಪೆಕ್ಟ್ ಬಿಡಲ್ಲ’ ಎಂದು ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ಗಗನ್, ತಮಗೆ ‘ಮೋಸಗಾರ’ ಎಂಬ ಪಟ್ಟ ಸಿಕ್ಕಾಗ ಮಾತ್ರ ತೀರಾ ಸೌಮ್ಯವಾಗಿ ವರ್ತಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸದ ಗಗನ್ ನಡೆಗೆ ಸುದೀಪ್ ಅಚ್ಚರಿ ವ್ಯಕ್ತಪಡಿಸಿದರು.
‘ನಂಗೊಂದು ಸ್ಟ್ಯಾಂಡರ್ಡ್ ಇದೆ ಅಂತ ಎಲ್ಲರ ಮುಂದೆ ಬೀಗುತ್ತಿದ್ದರಲ್ಲ, ಈಗ ಆ ಸ್ಟ್ಯಾಂಡರ್ಡ್ ಎಲ್ಲಿ ಹೋಯ್ತು?’ ಎಂದು ಸುದೀಪ್ ಗರಂ ಆಗಿ ಪ್ರಶ್ನಿಸಿದರು. ‘ನೀವು ಸೌಂದರ್ಯಾ ಅವರ ಮನ ಒಲಿಸಲು ಹೋಗಿದ್ದೀರಾ? ಊಟಕ್ಕೋಸ್ಕರ ಯಾವ ಹಂತಕ್ಕೆ ಬೇಕಾದರೂ ಹೋಗಲು ನೀವು ಸಿದ್ಧವಿದ್ದೀರಾ’ ಎಂದು ಗಗನ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಿಮ್ಮಲ್ಲಿ ಯಾರಿಗೂ ಧೈರ್ಯವೇ ಇಲ್ಲವೇ ಎಂದು ಇಡೀ ಮನೆಮಂದಿಯನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ಬೆನ್ನಹಿಂದೆ ಚಾಕು ಹಾಕಿದ ಯಶಸ್; ಸುದೀಪ್ ಎದುರೇ ಎದ್ದು ನಡೆದ ಸೌಂದರ್ಯಾ
ಸುದೀಪ್ ಅವರ ಈ ನೇರ ಮತ್ತು ಕಟು ನುಡಿಗಳು ಮನೆಯ ಇತರೆ ಸ್ಪರ್ಧಿಗಳಿಗೂ ಒಂದು ರೀತಿಯ ಎಚ್ಚರಿಕೆಯ ಸಂದೇಶವಾಗಿ ರವಾನೆಯಾಗಿದೆ. ಟಾಸ್ಕ್‌ಗಳು ಮತ್ತು ಗೆಲುವಿಗಾಗಿ ನಿಲುವುಗಳನ್ನು ಬದಲಾಯಿಸುವುದು ಹಾಗೂ ಸ್ವಾಭಿಮಾನವನ್ನು ಬಲಿ ಕೊಡುವುದು ಸರಿಯಲ್ಲ ಎಂಬುದನ್ನು ಸುದೀಪ್ ತಮ್ಮ ಎಂದಿನ ಖಡಕ್ ಶೈಲಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಮುಂಬರುವ ದಿನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಆಟದ ತೀವ್ರತೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




