ತೆಲುಗು ಚಿತ್ರರಂಗದಲ್ಲಿ ಫ್ಯಾನ್ಸ್ ವಾರ್ ಎಂಬುದು ದಶಕಗಳಿಂದಲೂ ನಡೆದುಕೊಂಡು ಬಂದಿದೆ. ಸ್ವತಃ ಮೆಗಾಸ್ಟಾರ್ ಚಿರಂಜೀವಿ ಹೇಳಿರುವಂತೆ ಸೀನಿಯರ್ ಎನ್ಟಿಆರ್, ಎಎನ್ಆರ್ ಇನ್ನಿತರೆ ಕೆಲವು ನಟರ ಅಭಿಮಾನಿಗಳು ಸಹ ಒಬ್ಬರ ಮೇಲೊಬ್ಬರು ಕಿತ್ತಾಡಿಕೊಳ್ಳುತ್ತಿದ್ದರಂತೆ. ಅದಾದ ಬಳಿಕ ಚಿರಂಜೀವಿ ಹಾಗೂ ಬಾಲಕೃಷ್ಣ ಅಭಿಮಾನಿಗಳಂತೂ ದಶಕಗಳ ಕಾಲ ಹೊಡೆದಾಡಿಕೊಂಡಿದ್ದಾರೆ. ಇತ್ತೀಚೆಗೆ ಬಾಲಯ್ಯ ಹಾಗೂ ಚಿರಂಜೀವಿ ಆ ಫ್ಯಾನ್ಸ್ ವಾರ್ಗೆ ಬ್ರೇಕ್ ಹಾಕಿದ್ದರು. ಆದರೆ ತೆಲುಗಿನಲ್ಲಿ ಇತ್ತೀಚೆಗೆ ಬಿಡುಗಡೆ ಆಗಿರುವ ಹೊಸ ಸಿನಿಮಾ ಒಂದು ಈ ಇಬ್ಬರ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ಪ್ರಾರಂಭ ಮಾಡಿದೆ. ವಿಶೇಷವಾಗಿ ಬಾಲಯ್ಯ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ನಂದಮೂರಿ ಕುಟುಂಬದ ಸಂಬಂಧಿಯೇ ಆಗಿರುವ ನಾರ್ನೆ ನಿತಿನ್ ನಟಿಸಿರುವ ‘ಆಯ್’ ಹೆಸರಿನ ಸಿನಿಮಾ ಬಿಡುಗಡೆ ಆಗಿದೆ. ಹಳ್ಳಿಯಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಬಾಲಕೃಷ್ಣ ಹಾಗೂ ಚಿರಂಜೀವಿ ಇಬ್ಬರ ರೆಫೆರೆನ್ಸ್ ಸಹ ಇದೆ. ಆದರೆ ಇದೇ ಈಗ ಸಿನಿಮಾದ ಮೇಲೆ ಬಾಲಯ್ಯ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ನಂದಮೂರಿ ಬಾಲಕೃಷ್ಣಗೆ ಇಲ್ಲ ಸಚಿವ ಸ್ಥಾನ, ಅಭಿಮಾನಿಗಳ ಬೇಸರ
ಸಿನಿಮಾದಲ್ಲಿ ವಿಲನ್ ನಟ ನಂದಮೂರಿ ಬಾಲಕೃಷ್ಣ ಅಭಿಮಾನಿ. ತನ್ನ ವಿರುದ್ಧ ಬಂದವರನ್ನೆಲ್ಲ ಹೊಡೆದು ಬುದ್ಧಿ ಕಲಿಸುತ್ತಿರುತ್ತಾನೆ. ಆದರೆ ಆತನನ್ನು ಹೊಡೆದು ಬುದ್ದಿ ಕಲಿಸುವ ನಾಯಕ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿ. ಬಾಲಯ್ಯ ಅಭಿಮಾನಿಯನ್ನು ವಿಲನ್ ಮಾಡಿ, ಆತನಿಗೆ ಹೊಡೆಯುವ ಹೀರೋ ಅನ್ನು ಚಿರಂಜೀವಿ ಅಭಿಮಾನಿಯನ್ನಾಗಿ ಮಾಡಿರುವುದಕ್ಕೆ ಬಾಲಯ್ಯ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಂದು ವಿಶೇಷವೆಂದರೆ ‘ಆಯ್’ ಸಿನಿಮಾದ ನಾಯಕ ಸ್ವತಃ ನಂದಮೂರಿ ಕುಟುಂಬದ ಸಂಬಂಧಿ.
ಕೆಲ ದಿನಗಳ ಹಿಂದೆ ನಂದಮೂರಿ ಬಾಲಕೃಷ್ಣ ಚಿತ್ರರಂಗಕ್ಕೆ ಬಂದು 50 ವರ್ಷವಾದ ಸಂದರ್ಭದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಚಿರಂಜೀವಿ ಸಹ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಬಾಲಕೃಷ್ಣ ಮತ್ತು ಚಿರಂಜೀವಿ ತಮ್ಮ ಸೋದರತೆ ಪ್ರದರ್ಶಿಸಿದರು. ಅಲ್ಲದೆ ಚರಂಜೀವಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬಾಲಯ್ಯ ಹಾಗೂ ನಾನು ಒಂದೇ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಇದೆ. ನಮ್ಮಿಬ್ಬರ ಸೂಪರ್ ಹಿಟ್ ಸಿನಿಮಾಗಳಾದ ‘ನರಸಿಂಹರೆಡ್ಡಿ’ ಮತ್ತು ‘ಇಂದ್ರ’ ಪಾತ್ರಗಳನ್ನು ಒಟ್ಟಿಗೆ ಸೇರಿಸಿ ಯಾರಾದರೂ ಚೆನ್ನಾಗಿರುತ್ತದೆ ಎಂಬ ಐಡಿಯಾ ಸಹ ಕೊಟ್ಟಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ